ಸೋಮವಾರ, ಮಾರ್ಚ್ 27, 2023
32 °C
3 ದಿನ ಹೋಟೆಲ್‌ನಲ್ಲಿ ಬೀಡುಬಿಡುವಂತೆ ಸೂಚನೆ

ರಾಷ್ಟ್ರಪತಿ ಚುನಾವಣೆ ಮುಗಿಯುವವರೆಗೆ ಹೊಟೇಲ್‌ನಲ್ಲಿರಿ: ಶಾಸಕರಿಗೆ ಬಿಜೆಪಿ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಇದೇ 18 ರಂದು ನಡೆಯುವ ರಾಷ್ಟ್ರಪತಿ ಚುನಾವಣೆ ಮುಗಿಯುವವರೆಗೆ ನಗರದ ಶಾಂಗ್ರಿಲಾ ಹೊಟೇಲಿನಲ್ಲಿ ಬೀಡು ಬಿಡುವಂತೆ ಬಿಜೆಪಿ ತನ್ನ ಎಲ್ಲ ಶಾಸಕರಿಗೂ ಸೂಚನೆ ನೀಡಿದೆ.

ಅತಿವೃಷ್ಟಿಯಿಂದ ಇಡೀ ರಾಜ್ಯವೇ ಸಂಕಷ್ಟಕ್ಕೆ ತುತ್ತಾಗಿರುವಾಗ ಮೂರು ದಿನ ನಗರದ ಹೊಟೇಲಿನಲ್ಲಿ ‘ಕಡ್ಡಾಯ’ವಾಗಿ ಉಳಿಯಬೇಕಾಗಿ ಬಂದಿರುವುದು ಶಾಸಕರಿಗೆ ನುಂಗಲಾರದ ತುತ್ತಾಗಿದೆ. ಶನಿವಾರವೇ ಶಾಂಗ್ರಿಲಾಗೆ ಬಂದು ಸೇರುವಂತೆ ಮುಖ್ಯಸಚೇತಕ ಎಂ.ಸತೀಶ್‌ ರೆಡ್ಡಿ ಅವರು ಈಗಾಗಲೇ ಎಲ್ಲ ಶಾಸಕರಿಗೂ ಸಂದೇಶ ಕಳುಹಿಸಿದ್ದಾರೆ.

ರಾಷ್ಟ್ರಪತಿ ಚುನಾವಣೆಯಲ್ಲಿ ಯಾವ ರೀತಿ ಮತದಾನ ಮಾಡಬೇಕು ಎಂಬುದರ ಬಗ್ಗೆ ಇದೇ ಹೊಟೇಲ್‌ನಲ್ಲಿ ಭಾನುವಾರ ಅಣಕು ಮತದಾನ ನಡೆಸಲಾಗುವುದು. ಇದಕ್ಕಾಗಿ ದೆಹಲಿಯಲ್ಲಿ ಮೂವರು ನಾಯಕರಿಗೆ ತರಬೇತಿ ನೀಡಿ ಕಳುಹಿಸಲಾಗಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

‘ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಅವರಿಗೆ ಸೋಮವಾರ ನಡೆಯುವ ಚುನಾವಣೆಯಲ್ಲಿ ಮತದಾನ ಮಾಡುತ್ತೇವೆ. ಅದಕ್ಕಾಗಿ ಅಣಕು ಮತದಾನದ ಅಗತ್ಯವಿಲ್ಲ. ಹೊಟೇಲ್‌ನಲ್ಲಿ ಇಟ್ಟುಕೊಂಡು ಸಾಧಿಸುವುದಾದರೂ ಏನು? ಅಷ್ಟಕ್ಕೂ ರಾಷ್ಟ್ರಪತಿ ಚುನಾವಣೆ ವಿಪ್‌ ಜಾರಿ ಮಾಡುವಂತಿಲ್ಲ’ ಎಂದು ಶಾಸಕರೊಬ್ಬರು ತಿಳಿಸಿದರು.

‘ಈ ಚುನಾವಣೆಯಲ್ಲಿ ಮತಗಟ್ಟೆ ಅಧಿಕಾರಿಗೆ ಶಾಸಕರು ಮತಪತ್ರವನ್ನು ತೋರಿಸುವಂತಿಲ್ಲ. ಚುನಾವಣಾ ಆಯೋಗ ರಹಸ್ಯ ಮತದಾನದ ಮೂಲಕ ಚುನಾವಣೆ ನಡೆಸುವುದಾಗಿ ಈಗಾಗಲೇ ಹಲವು ಬಾರಿ ತಿಳಿಸಿದೆ. ದ್ರೌಪದಿ ಮುರ್ಮು ಗೆಲ್ಲುವುದರಲ್ಲಿ ಸಂಶಯವೂ ಇಲ್ಲ. ಎನ್‌ಡಿಎಯೇತರ ಪಕ್ಷಗಳೂ ಅವರನ್ನು ಬೆಂಬಲಿಸಿದೆ. ಆದ್ದರಿಂದ ಅತಿವೃಷ್ಟಿ ಈ ಸಂದರ್ಭದಲ್ಲಿ ಮೂರು ದಿನ ಬೆಂಗಳೂರಿನಲ್ಲೇ ಉಳಿಯಬೇಕು ಎಂದು ಕಡ್ಡಾಯಗೊಳಿಸುವುದು ಸರಿಯಲ್ಲ’ ಅವರು ಹೇಳಿದರು.

‘ಬೇರೆ ಜಿಲ್ಲೆಗಳು ಮಾತ್ರವಲ್ಲ ಬೆಂಗಳೂರು ನಗರದಲ್ಲೂ ಹಲವು ವಿಧಾನಸಭಾ ಕ್ಷೇತ್ರಗಳಲ್ಲಿ ಮಳೆಯಿಂದ ತೊಂದರೆಯುಂಟಾಗಿದೆ. ರಸ್ತೆಗಳು ಹಾಳಾಗಿವೆ. ಅಲ್ಲಿ ಕೆಲಸ ಮಾಡಿಸಬೇಕಾಗಿದೆ. ಯಾವ ಸಂದರ್ಭದಲ್ಲಿ ಬೇಕಾದರೂ ಮಳೆ ಬಂದು ತಗ್ಗು ಪ್ರದೇಶದಲ್ಲಿ ಸಮಸ್ಯೆ ಉಂಟಾಗಬಹುದು. ಆಗ ನಾವು ಜನರ ಸಹಾಯಕ್ಕೆ ಧಾವಿಸದೇ ಇದ್ದರೆ ಜನರ ಆಕ್ರೋಶಕ್ಕೆ ಗುರಿಯಾಗಬೇಕಾಗುತ್ತದೆ’ ಎಂದು ಬೆಂಗಳೂರಿನ ಬಿಜೆಪಿ ಶಾಸಕರೊಬ್ಬರು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು