ಬುಧವಾರ, ಮೇ 12, 2021
27 °C
ಹೆಚ್ಚಿದ ಸಂಚಾರ ದಟ್ಟಣೆ *ಆತಂಕದಲ್ಲಿ ಈಸ್ಟ್ ವೆಸ್ಟ್ ಶಾಲೆಯ ವಿದ್ಯಾರ್ಥಿಗಳು

ಖಾಸಗಿ ಬಸ್‌ಗಳ ಪಾರ್ಕಿಂಗ್‌ ತಾಣವಾದ ಆರ್ಮುಗಂ ವೃತ್ತ

ವರುಣ ಹೆಗಡೆ Updated:

ಅಕ್ಷರ ಗಾತ್ರ : | |

Prajavani

ಕನಕಪುರ ರಸ್ತೆ, ಮಸೀದಿ ರಸ್ತೆ ಸೇರಿದಂತೆ ವಿವಿಧ ರಸ್ತೆಗಳಿಗೆ ಸಂಪರ್ಕ ಸಾಧಿಸುವ ಆರ್ಮುಗಂ ವೃತ್ತದಲ್ಲಿ ಖಾಸಗಿ ಬಸ್‌ಗಳನ್ನು ನಿಲುಗಡೆ ಮಾಡಲಾಗುತ್ತಿದೆ. ಇದರಿಂದಾಗಿ ಒಂದೆಡೆ ಸಂಚಾರ ದಟ್ಟಣೆ ಉಂಟಾದರೆ, ಇನ್ನೊಂದೆಡೆ ವೃತ್ತಕ್ಕೆ ಹೊಂದಿಕೊಂಡಿರುವ ಈಸ್ಟ್ ವೆಸ್ಟ್ ಶಾಲೆಯ ವಿದ್ಯಾರ್ಥಿಗಳು ಆತಂಕದಲ್ಲಿ ಹೆಜ್ಜೆ ಹಾಕಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. 

ಪ್ರತಿನಿತ್ಯ ಆರ್ಮುಗಂ ವೃತ್ತದಲ್ಲಿ ಸಾವಿರಾರು ವಾಹನಗಳು ಸಂಚರಿಸುತ್ತವೆ. ದಿವಾನ್ ಮಾಧವ ರಾವ್‌ ರಸ್ತೆ, ಹಳೆ ಕನಕಪುರ ರಸ್ತೆ ಹಾಗೂ ಪಟಾಲಮ್ಮ ದೇವಾಲಯ ರಸ್ತೆಯಲ್ಲಿ ಬರುವ ವಾಹನ ಸವಾರರು ರಾಷ್ಟ್ರೀಯ ವಿದ್ಯಾಲಯ ರಸ್ತೆ ಸಂಪರ್ಕಿಸಲು ಮಸೀದಿ ರಸ್ತೆಯ ಮೂಲಕವೇ ಸಾಗುತ್ತಾರೆ. ಈ ರಸ್ತೆಯಲ್ಲಿ ದ್ವಿಮುಖ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಇದೇ ರಸ್ತೆಗೆ ಹೊಂದಿಕೊಂಡು ಈಸ್ಟ್ ವೆಸ್ಟ್ ಶಾಲೆಯಿದ್ದು, ಖಾಸಗಿ ಬಸ್‌ಗಳು ರಸ್ತೆಯಲ್ಲಿಯೇ ಪಾರ್ಕಿಂಗ್‌ ಮಾಡುತ್ತಿವೆ. ಇದರಿಂದಾಗಿ ಮಕ್ಕಳನ್ನು ಶಾಲೆಗೆ ಬಿಡಲು ಬರುವ ಪಾಲಕರು ಪರದಾಟ ನಡೆಸುವಂತಾಗಿದೆ. ರಸ್ತೆಯ ಉದ್ದಕ್ಕೂ ‘ಜಬ್ಬಾರ್ ಟ್ರಾವೆಲ್ಸ್‌’ನ ಬಸ್‌ಗಳನ್ನು ನಿಲ್ಲಿಸಲಾಗಿದೆ. ಇದರಿಂದಾಗಿ ಶಾಲೆಗೆ ಮಕ್ಕಳನ್ನು ಕರೆತರುವ ವಾಹನಗಳಿಗೆ ನಿಲುಗಡೆಗೆ ಸ್ಥಳ ಇಲ್ಲದಂತಾಗಿದೆ. 

‘ಆರ್ಮುಗಂ ವೃತ್ತ, ಮಸೀದಿ ರಸ್ತೆ ಹಾಗೂ ಚರ್ಚ್‌ ರಸ್ತೆಯಲ್ಲಿ ಹತ್ತಕ್ಕೂ ಅಧಿಕ ವಾಹನಗಳನ್ನು ಪ್ರತಿನಿತ್ಯ ನಿಲ್ಲಿಸುತ್ತಾರೆ. ರಸ್ತೆಯ ಎರಡೂ ಭಾಗಗಳಲ್ಲಿ ಬಸ್‌ಗಳನ್ನು ನಿಲ್ಲಿಸಲಾಗುತ್ತಿದೆ. ವಾಹನಗಳಲ್ಲಿ ಮಕ್ಕಳನ್ನು ಶಾಲೆಗೆ ಬಿಡಲು ಬರುವ ಪಾಲಕರಿಗೆ ವಾಹನಗಳನ್ನು ಶಾಲೆಯ ಮುಂಭಾಗ ನಿಲ್ಲಿಸಲು ಸಮಸ್ಯೆಯಾಗುತ್ತಿದೆ. ರಸ್ತೆ ಕಿರಿದಾಗಿರುವುದರಿಂದ ಮಕ್ಕಳು ರಸ್ತೆ ದಾಟುವುದು ಕೂಡ ಕಷ್ಟವಾಗಿದೆ’ ಎಂದು ಈಸ್ಟ್ ವೆಸ್ಟ್ ಶಾಲೆಯ ಶಿಕ್ಷಕರೊಬ್ಬರು ಬೇಸರ ವ್ಯಕ್ತಪಡಿಸಿದರು. 

‘ವಿಜಯಾ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು ಕೂಡ ವೇಗವಾಗಿ ದ್ವಿಚಕ್ರ ವಾಹನದಲ್ಲಿ ಮಸೀದಿ ರಸ್ತೆ ಮೂಲಕ ಸಾಗುತ್ತಾರೆ. ಇದರಿಂದಾಗಿ ಮಕ್ಕಳು ರಸ್ತೆಯಲ್ಲಿ ಸಾಗುವುದೇ ಕಷ್ಟವಾಗಿದೆ. ಪಾದಾಚಾರಿ ಮಾರ್ಗಗಳಲ್ಲಿ ಕೂಡ ಆಟೊ ರಿಕ್ಷಾಗಳನ್ನು ಪಾರ್ಕಿಂಗ್ ಮಾಡಲಾಗುತ್ತಿದೆ. ಸಂಚಾರ ಪೊಲೀಸರಿಗೆ ದೂರು ನೀಡಿದರೂ ಪ್ರಯೋಜನವಾಗಲಿಲ್ಲ’ ಎಂದು ಸ್ಥಳೀಯ ನಿವಾಸಿ ವೆಂಕಟೇಶ್ ತಿಳಿಸಿದರು. 

ಕಸದ ರಾಶಿ: ಈಸ್ಟ್ ವೆಸ್ಟ್ ಶಾಲೆಯ ಪಕ್ಕದಲ್ಲಿಯೇ ಕಸದ ರಾಶಿ ಹಾಕಲಾಗುತ್ತಿದೆ. ‘ಶಾಲೆಗೆ ಹೋಗುವ ವಿದ್ಯಾರ್ಥಿಗಳು ಮೂಗನ್ನು ಮುಚ್ಚಿಕೊಂಡೇ ಸಾಗಬೇಕಾದ ವಾತಾವರಣ ನಿರ್ಮಾಣವಾಗಿದೆ. ಕಸಗಳನ್ನು ವಿಲೇವಾರಿ ಮಾಡಲು ನಿತ್ಯ ಪೌರಕಾರ್ಮಿಕರು ಬರುತ್ತಿಲ್ಲ’ ಎಂದು ಸ್ಥಳೀಯರು ತಿಳಿಸಿದರು. 

‘ಸಂಚಾರ ಪೊಲೀಸರು ನೋ ಪಾರ್ಕಿಂಗ್ ಫಲಕ ಹಾಕಿಕೊಳ್ಳಲು ಅನುಮತಿ ನೀಡಿದ್ದರು. ಹಾಗಾಗಿ ಹಾಕಿಕೊಳ್ಳಲಾಗಿತ್ತು. ಆದರೆ, ಕಿಡಿಗೇಡಿಗಳು ಈ ಫಲಕವನ್ನು ಕಿತ್ತುಹಾಕಿದ್ದಾರೆ. ಶಾಲೆಯ ಮುಂಭಾಗ ವಾಹನಗಳನ್ನು ನಿಲ್ಲಿಸುತ್ತಿರುವುದರ ಬಗ್ಗೆ ಪ್ರಶ್ನಿಸಿದರೆ ನಮಗೆ ಉಡಾಫೆ ಉತ್ತರವನ್ನು ವಾಹನಗಳ ಚಾಲಕರು ನೀಡುತ್ತಾರೆ’ಎಂದು ಶಿಕ್ಷಕರು ದೂರುತ್ತಾರೆ. 

‘ಮಾಲೀಕರ ಸೂಚನೆ ಅನುಸಾರ ಇಲ್ಲಿ ವಾಹನಗಳನ್ನು ಪಾರ್ಕಿಂಗ್ ಮಾಡಲಾಗಿದೆ. ಹಲವು ವರ್ಷಗಳಿಂದ ಇದೇ ಜಾಗದಲ್ಲಿ ನಿಲ್ಲಿಸಲಾಗುತ್ತಿದೆ’ ಎಂದು ಖಾಸಗಿ ಬಸ್‌ನ ಚಾಲಕರೊಬ್ಬರು ತಿಳಿಸಿದರು.

ಈಸ್ಟ್ ವೆಸ್ಟ್ ಶಾಲೆಯಲ್ಲಿ ನರ್ಸರಿಯಿಂದ ಎಸ್ಸೆಸ್ಸೆಲ್ಸಿವರೆಗೆ ತರಗತಿಗಳು ನಡೆಯುತ್ತಿದ್ದು, ಸದ್ಯ 350 ವಿದ್ಯಾರ್ಥಿಗಳು ಅಭ್ಯಸಿಸುತ್ತಿದ್ದಾರೆ. ಈ ಬಗ್ಗೆ ಜಯನಗರ ವಾರ್ಡ್‌ನ ಪಾಲಿಕೆ ಸದಸ್ಯೆ ಗಂಗಾಂಬಿಕೆ ಮಲ್ಲಿಕಾರ್ಜುನ್ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಲು ಪ್ರಯತ್ನಿಸಿದಾಗ, ಅವರು ಕರೆ ಸ್ವೀಕರಿಸಲಿಲ್ಲ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು