ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಜಿಟಿಲ್‌ ಮಾಧ್ಯಮದಲ್ಲಿ ಕೃತಿ: ಓದುವವರು ಯಾರು?- ಪ್ರೊ.ಮಲ್ಲೇಪುರಂ

ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಮಲ್ಲೇಪುರಂ ಜಿ. ವೆಂಕಟೇಶ್‌ ಪ್ರಶ್ನೆ
Last Updated 30 ಜುಲೈ 2022, 23:41 IST
ಅಕ್ಷರ ಗಾತ್ರ

ಬೆಂಗಳೂರು: ‘ಕನ್ನಡ ಪುಸ್ತಕ ಲೋಕವು ಈಗ ಡಿಜಿಟಲ್‌ ಮಾಧ್ಯಮದ ರೂಪ ಪಡೆದಿದೆ. ಇ–ಬುಕ್ಸ್‌ನಲ್ಲಿ ಸಾಹಿತ್ಯ ಕೃತಿ ಓದುವವರು ಯಾರು ಎನ್ನುವ ಪ್ರಶ್ನೆ ನಮ್ಮ ಮುಂದಿದೆ’ ಎಂದು ಕರ್ನಾಟಕ ಸಂಸ್ಕೃತ ವಿ.ವಿಯ ವಿಶ್ರಾಂತ ಕುಲಪತಿ ಪ್ರೊ.ಮಲ್ಲೇಪುರಂ ಜಿ. ವೆಂಕಟೇಶ್‌ ಹೇಳಿದರು.

ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘ, ಕರ್ನಾಟಕ ಗಾಂಧಿ ಸ್ಮಾರಕ ನಿಧಿ, ಗಾಂಧಿ ಶಾಂತಿ ಪ್ರತಿಷ್ಠಾನದಿಂದ ಶನಿವಾರ ಆಯೋಜಿಸಿದ್ದ ಆರು ಕೃತಿಗಳ ಲೋಕಾರ್ಪಣೆ ಮತ್ತು ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಸರ್ಕಾರ ಡಿಜಿಟಲ್‌ ಮಾಧ್ಯಮಕ್ಕೆ ಲಕ್ಷಾಂತರ ರೂಪಾಯಿ ವ್ಯಯಿಸುತ್ತಿದೆ. ಆದರೆ, ಮಲೆನಾಡಿನ ಜಿಲ್ಲೆಗಳು ಹಾಗೂ ಉತ್ತರ ಕನ್ನಡ ಜಿಲ್ಲೆಯ ಕುಗ್ರಾಮಗಳಲ್ಲಿ ಇಂಟರ್‌ನೆಟ್‌ ಸೌಲಭ್ಯವೇ ಇಲ್ಲ. ಓದುಗನಿಗೆ ‘ಇ ಬುಕ್ಸ್‌’ ತಲುಪುವುದಾದರೂ ಹೇಗೆ’ ಎಂದು ಪ್ರಶ್ನಿಸಿದರು.

ಪ್ರಶಸ್ತಿ ಪುರಸ್ಕೃತೆ ಡಾ.ವಿಜಯಾ ಅವರು, ಮುದ್ರಣ ಕ್ಷೇತ್ರ ಸಂಕಷ್ಟದಲ್ಲಿರುವುದರ ಕುರಿತು ಗಮನಸೆಳೆದರು. ಸಂಘದ ಅಧ್ಯಕ್ಷ ನಿಡಸಾಲೆ ಪುಟ್ಟಸ್ವಾಮಿ ಅವರೂ ಇದನ್ನು ಸಮರ್ಥಿಸಿದರು.

‘ಪ್ರಜಾವಾಣಿ’ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ ಅವರು ಕೃತಿ ಬಿಡುಗಡೆಗೊಳಿಸಿ ಮಾತನಾಡಿದರು. ಗಾಂಧಿ ಶಾಂತಿ ಪ್ರತಿಷ್ಠಾನದ ಅಧ್ಯಕ್ಷ ಜೀರಿಗೆ ಲೋಕೇಶ್‌, ಸಂಘದ ಕಾರ್ಯದರ್ಶಿ ಆರ್‌.ದೊಡ್ಡೇಗೌಡ ಹಾಜರಿದ್ದರು. ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷ ವೂಡೇ ಪಿ. ಕೃಷ್ಣ ಮಾತನಾಡಿದರು.

ಆರು ಕೃತಿಗಳ ಬಿಡುಗಡೆ

l ಡಿ.ಕೆ.ಮಂಜುಳಾ – ಮುಕ್ತೆ
l ಕುಂ.ವೀರಭದ್ರಪ್ಪ – ರಾಯಲ ಸೀಮಾ ಕಥೆಗಳು
l ಓಬಯ್ಯ ಬಿ. – ನಿರಂತರ
l ಮಲ್ಲೇಪುರಂ ಜಿ. ವೆಂಕಟೇಶ್‌ – ತೌಲನಿಕ ಸಾಹಿತ್ಯ ಮೀಮಾಂಸೆ
l ಕೇಶವರೆಡ್ಡಿ ಹಂದ್ರಾಳ – ಬೆರಕೆ ಸೊಪ್ಪು
l ಹೃದಯ ಶಿವ – ಕ್ಲ್ಯಾಪ್‌ ಬೋರ್ಡ್‌

ಪ್ರಶಸ್ತಿ ಪುರಸ್ಕೃತರು

ಇದೇ ವೇಳೆ ವಿವಿಧ ಸಾಧಕರಿಗೆ 2021ನೇ ಸಾಲಿನ ವಾರ್ಷಿಕ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಡಾ.ಗಜಾನನ ಶರ್ಮ ಅವರ ‘ಚೆನ್ನಬೈರಾದೇವಿ’ ಕೃತಿಗೆ ‘ಸಾಹಿತ್ಯ ರತ್ನ’ ಪ್ರಶಸ್ತಿ, ಡಾ.ಶರಣು ಹುಲ್ಲೂರು ಅವರ ‘ಅನಂತವಾಗಿರು’ ಕೃತಿಗೆ ‘ಯುವ ಸಾಹಿತ್ಯ ರತ್ನ’, ಜಮೀಲ್‌ ಸಾವಣ್ಣಗೆ (ಸಾವಣ್ಣ ಪ್ರಕಾಶನ) ‘ಪುಸ್ತಕ ರತ್ನ’ ಹಾಗೂ ಡಾ.ವಿಜಯಾ ಅವರಿಗೆ (ಇಳಾ ಮುದ್ರಣಾಲಯ) ‘ಮುದ್ರಣ ರತ್ನ’ ಪ್ರಶಸ್ತಿ ಪ್ರದಾನ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT