ಬೆಂಗಳೂರು: ‘ಮಣಿಪುರದಲ್ಲಿ ಮಹಿಳೆಯರನ್ನು ಬೆತ್ತಲುಗೊಳಿಸಿ, ಮೆರವಣಿಗೆ ನಡೆಸಿದ ಘಟನೆಗೆ ಸಂಬಂಧಿಸಿದಂತೆ ತಪ್ಪಿತಸ್ಥರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು. ಕೇಂದ್ರ ಸರ್ಕಾರವು ಅಲ್ಲಿ ಕಾನೂನು ಸುವ್ಯವಸ್ಥೆಯನ್ನು ಪುನಃ ಸ್ಥಾಪಿಸಬೇಕು’ ಎಂದು 'ಜಾಗೃತ ನಾಗರಿಕರು ಕರ್ನಾಟಕ' ಆಗ್ರಹಿಸಿದೆ.
ಕೆ.ಮರುಳಸಿದ್ದಪ್ಪ, ಜಿ.ರಾಮಕೃಷ್ಣ, ಎಸ್.ಜಿ.ಸಿದ್ದರಾಮಯ್ಯ, ವಿಜಯಾ,
ವಿಮಲಾ.ಕೆ.ಎಸ್., ರಾಜೇಂದ್ರ ಚೆನ್ನಿ, ಬಿ.ಶ್ರೀಪಾದ ಭಟ್, ಎಚ್.ಜಿ.ಜಯಲಕ್ಷ್ಮಿ, ಲೀಲಾ ಸಂಪಿಗೆ, ಸಿ.ಕೆ.ಗುಂಡಣ್ಣ, ಕೆ. ಷರೀಫಾ ಸೇರಿ ಸಾಂಸ್ಕೃತಿಕ ಕ್ಷೇತ್ರದ 20ಕ್ಕೂ ಅಧಿಕ ಮಂದಿ ಪ್ರಮುಖರು ಈ ಘಟನೆಯನ್ನು ಖಂಡಿಸಿ, ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
‘ಮಣಿಪುರ ಘಟನೆಯು 75 ದಿನಗಳ ಹಿಂದೆ ನಡೆದಿದೆ. ಈ ಬಗ್ಗೆ ಗಮನಹರಿಸದೆಯೇ, ‘ರೋಮ್ ನಗರ ಉರಿಯುತ್ತಿದ್ದಾಗ ಚಕ್ರವರ್ತಿ ನೀರೋ ಪಿಟೀಲು ನುಡಿಸುತ್ತಿದ್ದ’ ಎಂಬಂತೆ ಪ್ರಧಾನಿ ಮತ್ತು ಕೇಂದ್ರ ಗೃಹ ಸಚಿವರು ಕರ್ನಾಟಕ ಚುನಾವಣೆಯಲ್ಲಿ ಅಬ್ಬರದ ಪ್ರಚಾರದಲ್ಲಿ ಮುಳುಗಿದ್ದರು. ಈ ಘಟನೆ ಭಾರತದ ಅಂತಃಸಾಕ್ಷಿಯನ್ನು ತೀವ್ರವಾಗಿ ಕಲಕಿದೆ. ಎರಡು ಸಮುದಾಯಗಳ ಮಧ್ಯೆ ಹತ್ತಿದ ಬೆಂಕಿಯನ್ನು ಆರಿಸುವ ಬದಲು, ಒಡೆದಾಳುವ ನೀತಿಯನ್ನು ಕೇಂದ್ರದ ಒಕ್ಕೂಟ ಸರ್ಕಾರವೇ ಮಾಡುತ್ತಿರುವುದು ಅಕ್ಷಮ್ಯ ಅಪರಾಧದ ಮುಂದುವರಿದ ಭಾಗ ಇದಾಗಿದೆ’ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
‘ಕೇಂದ್ರದ ಒಕ್ಕೂಟ ಸರ್ಕಾರವು ಮಣಿಪುರದ ಪರಿಸ್ಥಿತಿಯನ್ನು ಆಳುವ ಪಕ್ಷದ ಹಿತಾಸಕ್ತಿಗೆ ಉಪಯೋಗಿಸಿಕೊಳ್ಳುವುದನ್ನು ನಿಲ್ಲಿಸಬೇಕು. ಅಲ್ಲಿನ ಮುಖ್ಯಮಂತ್ರಿಯನ್ನು ಕೆಳಗಿಳಿಸಬೇಕು. ಸಾವು ನೋವಿಗೆ ತುತ್ತಾದವರಿಗೆ, ಆಸ್ತಿ ಕಳೆದುಕೊಂಡವರಿಗೆ ಸೂಕ್ತ ಪರಿಹಾರ ನೀಡಬೇಕು’ ಎಂದು ಒತ್ತಾಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.