ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಾಜ್ಯಪಾಲರ ನಡೆ ವಿರೋಧಿಸಿ ಶೋಷಿತ ಸಮುದಾಯಗಳ ಮಹಾ ಒಕ್ಕೂಟದಿಂದ ಆ.5ಕ್ಕೆ ಪ್ರತಿಭಟನೆ

Published : 2 ಆಗಸ್ಟ್ 2024, 16:07 IST
Last Updated : 2 ಆಗಸ್ಟ್ 2024, 16:07 IST
ಫಾಲೋ ಮಾಡಿ
Comments

ಬೆಂಗಳೂರು: ‘ಶೋಷಿತ ಸಮುದಾಯಗಳ ನಾಯಕರಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸಲು ಹೊರಟಿರುವ ರಾಜ್ಯಪಾಲರ ನಡೆ ವಿರೋಧಿಸಿ ಆಗಸ್ಟ್ 5ರಂದು ರಾಜ್ಯವ್ಯಾಪಿ ಪ್ರತಿಭಟನೆ ನಡೆಸಲಾಗುವುದು. ಶೀಘ್ರದಲ್ಲಿಯೇ ರಾಜಭವನ ಚಲೋ ನಡೆಸಲಾಗುವುದು’ ಎಂದು ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ಪ್ರಧಾನ ಸಂಚಾಲಕ ಕೆ.ಎಂ. ರಾಮಚಂದ್ರಪ್ಪ ತಿಳಿಸಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು , ‘ರಾಜ್ಯದಲ್ಲಿ ಇತ್ತೀಚೆಗೆ ಕೋಮುವಾದಿ ಮತ್ತು ಜಾತಿವಾದಿ ಪಟ್ಟಭದ್ರ ಹಿತಾಸಕ್ತಿಗಳು ಅಧಿಕಾರದ ಕುರ್ಚಿಯ ಆಸೆಗಾಗಿ ಜನಪರ ಇರುವ ಸರ್ಕಾರವನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿವೆ. ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಮತ್ತು ಜೆಡಿಎಸ್‌ ನಾಯಕರು ದೊಡ್ಡ ಮಟ್ಟದ ಷಡ್ಯಂತ್ರ ರೂಪಿಸಿದ್ದಾರೆ. ಕಪ್ಪುಚುಕ್ಕೆ ಇಲ್ಲದ ನಾಯಕ ಸಿದ್ದರಾಮಯ್ಯ ಅವರ ವರ್ಚಸ್ಸಿಗೆ ಮಸಿ ಬಳಿದು ರಾಜಕೀಯವಾಗಿ ಮುಗಿಸಿ ಬಿಡುವ ಹುನ್ನಾರ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.

ತನ್ನ ಮೇಲಿನ ಆರೋಪಕ್ಕೆ ಸ್ವತಃ ತನಿಖಾ ಆಯೋಗವನ್ನು ರಚಿಸಿರುವ ದೇಶದ ಏಕೈಕ ಮುಖ್ಯಮಂತ್ರಿ ಸಿದ್ದರಾಮಯ್ಯ. ಅವರ ವಿರುದ್ಧದ ರಾಜ್ಯದ ಬಿಜೆಪಿ ಮತ್ತು ಜೆಡಿಎಸ್‌ ನಾಯಕರ ಕುತಂತ್ರಕ್ಕೆ ಬಿಜೆಪಿಯ ರಾಷ್ಟ್ರೀಯ ನಾಯಕರೂ ಕುಮ್ಮಕ್ಕು ನೀಡುತ್ತಿದ್ದಾರೆ. ರಾಜ್ಯಪಾಲರನ್ನು ಬಳಸಿಕೊಂಡು ಸರ್ಕಾರವನ್ನು ಬುಡಮೇಲು ಮಾಡಲು ಹೊರಟಿದ್ದಾರೆ. ಅದಕ್ಕಾಗಿ ಮುಡಾ ನಿವೇಶನ  ಮತ್ತು ವಾಲ್ಮೀಕಿ ನಿಗಮದ ವಿವಾದದಲ್ಲಿ ಅವರ ಹೆಸರನ್ನು ತಳುಕು ಹಾಕಲಾಗುತ್ತಿದೆ ಎಂದು ದೂರಿದರು.

ಸಂಚಾಲಕರಾದ ಮಾವಳ್ಳಿ ಶಂಕರ್‌, ಅನಂತ ನಾಯ್ಕ್‌, ಎಣ್ಣೆಗೆರೆ ಆರ್‌. ವೆಂಕಟರಾಮಯ್ಯ, ಸದಸ್ಯರಾದ ಬಿ.ಟಿ. ಲಲಿತಾ ನಾಯಕ್‌, ಸಿ.ನಂಜಪ್ಪ, ಕೆ.ವೆಂಕಟಸುಬ್ಬರಾಜು, ಆದರ್ಶ ಯಲ್ಲಪ್ಪ, ಬಸವರಾಜ್ ಬಸಲಗುಂದಿ ಪತ್ರಿಕಾಗೋಷ್ಠಿಯಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT