ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಗರ್‌ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ವಿತರಣೆಗೆ ಆಗ್ರಹಿಸಿ ಪ್ರತಿಭಟನೆ

Published 15 ನವೆಂಬರ್ 2023, 15:21 IST
Last Updated 15 ನವೆಂಬರ್ 2023, 15:21 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಯಲ್ಲಿ ನಮೂನೆ 50 ಹಾಗೂ 53 ಅಡಿ ಅರ್ಜಿ ಸಲ್ಲಿಸಿರುವ ಬಗರ್‌ಹುಕುಂ ಸಾಗುವಳಿದಾರರಿಗೆ ತಕ್ಷಣ ಹಕ್ಕುಪತ್ರ ವಿತರಣೆ ಮಾಡುವುದು ಸೇರಿದಂತೆ ಹಲವು ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ, ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್‌ ವಾದ)ಯಿಂದ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಬುಧವಾರ ಪ್ರತಿಭಟನೆ ನಡೆಯಿತು.‌

ಹಲವು ಬಾರಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದ್ದರೂ ಬೇಡಿಕೆ ಈಡೇರಿಸಿಲ್ಲ ಎಂದು ಪ್ರತಿಭಟನಕಾರರು ಆಕ್ರೋಶ ಹೊರಹಾಕಿದರು. ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು.

‘ಬಿಬಿಎಂಪಿಯಲ್ಲಿ ಲಭ್ಯವಿರುವ ಅನುದಾನವನ್ನು ಬಡ ಜನರ ಅಭ್ಯುದಯಕ್ಕೆ ಬಳಕೆ ಮಾಡಬೇಕು. ಆಶ್ರಯ ಮನೆಗಳಿಗೆ ಹಕ್ಕುಪತ್ರ ವಿತರಣೆ ಮಾಡಬೇಕು. ಬಡವರಿಗೆ ಸಂವಿಧಾನಬದ್ಧವಾಗಿ ನಾಗರಿಕ ಸೌಲಭ್ಯ ತಲುಪಿಸಬೇಕು’ ಎಂದು ಒತ್ತಾಯಿಸಿದರು.

‘ಸರ್ಕಾರಿ ಜಮೀನಿಗೆ ರಿಯಲ್‌ ಎಸ್ಟೇಟ್‌ ಉದ್ಯಮಿಗಳು ಬೇಲಿ ಹಾಕಿಕೊಂಡು ಕಬಳಿಸುತ್ತಿದ್ದಾರೆ. ಸರ್ಕಾರಿ ಯೋಜನೆಗಳು ಹಾಗೂ ಜನಕಲ್ಯಾಣಕ್ಕೆ ಮೀಸಲಿಟ್ಟ ಹಣ ಲೂಟಿಕೋರರ ಪಾಲಾಗುತ್ತಿದೆ. ಅನುದಾನವನ್ನು ಜನಕಲ್ಯಾಣ ಯೋಜನೆಗಳಿಗೆ ಬಳಸಲಾಗಿದೆ ಎಂಬುದನ್ನು ಕಾಗದಲ್ಲಿ ತೋರಿಸಲಾಗುತ್ತಿದೆ’ ಎಂದು ಸಮಿತಿ ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್‌ ದೂರಿದರು.

ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. ಬಡವರಿಗೆ ಪೌಷ್ಟಿಕ ಆಹಾರ ಲಭಿಸುತ್ತಿಲ್ಲ. ನಿವೇಶನ, ವಸತಿ ಸೌಲಭ್ಯವಿಲ್ಲದೇ ಬಡವರು ಬೀದಿ ಬದಿಯಲ್ಲಿ ಆಶ್ರಯ ಪಡೆಯುವ ಸ್ಥಿತಿಯಿದೆ ಎಂದು ಹೇಳಿದರು.

‘ಜನರ ತೆರಿಗೆ ಹಣವು ಭ್ರಷ್ಟರ ಪಾಲಾಗುತ್ತಿದೆ. ಬಡವರಿಗೆ ಸೌಲಭ್ಯ ಕಲ್ಪಿಸುವಂತೆ ಹೋರಾಟ ನಡೆಸಿದರೆ ಹೋರಾಟಗಾರರ ಮೇಲೆ ದೌರ್ಜನ್ಯ ಎಸಗಲಾಗುತ್ತಿದೆ’ ಎಂದು ದೂರಿದರು.

ಪ್ರತಿಭಟನೆಯಲ್ಲಿ ಸಮಿತಿ ಮಣಿಪಾಲ್‌ ರಾಜಪ್ಪ, ಧನಮ್ಮ, ಮಂಜುನಾಥ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT