ಶನಿವಾರ, ಜುಲೈ 2, 2022
20 °C
ಆರೋಪಿಗಳ ಜೊತೆ ಕೆಲ ಪೊಲೀಸರು ಶಾಮೀಲು

ತಂದೆ ಠಾಣೆ ವ್ಯಾಪ್ತಿಯಲ್ಲೇ ಮಗನ ಕೊಲೆ: ಪಿಎಸ್‌ಐ ಕುಟುಂಬಕ್ಕೆ ಜೀವ ಭಯ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ವಿಜಯಪುರ ಜಿಲ್ಲೆಯ ಗಾಂಧಿ ವೃತ್ತ ಠಾಣೆಯ ಅಪರಾಧ ವಿಭಾಗದ ಪೊಲೀಸ್ ಸಬ್‌ ಇನ್‌ಸ್ಪೆಕ್ಟರ್‌ (ಪಿಎಸ್ಐ) ಆರ್‌.ಬಿ. ಕೂಡಗಿ ಅವರ ಮಗ ಮುಸ್ತಕಿನ್ (28) ಕೊಲೆ ಪ್ರಕರಣದ ತನಿಖೆಯನ್ನು ಪೊಲೀಸರೇ ದಿಕ್ಕು ತಪ್ಪಿಸುತ್ತಿದ್ದು, ಇದೀಗ ಪಿಎಸ್‌ಐ ಕುಟುಂಬಕ್ಕೆ ಜೀವ ಭಯ ಕಾಡುತ್ತಿದೆ.

ಪಿಎಸ್‌ಐ ಅವರ ಎರಡನೇ ಮಗ, ಪೊಲೀಸ್ ಕಾನ್‌ಸ್ಟೆಬಲ್ ಆಗಿದ್ದಾರೆ. ಮೊದಲ ಮಗ ಮುಸ್ತಕಿನ್ ಸಹ ಪಿಎಸ್‌ಐ ಆಗಲು ತಯಾರಿ ನಡೆಸುತ್ತಿದ್ದರು. ಅದರ ಮಧ್ಯೆಯೇ ಅವರು, ಸಂಬಂಧಿಯೂ ಆಗಿದ್ದ ಅತೀಕಾ ಉಮೇಸ ಅವರನ್ನು ಪ್ರೀತಿಸಿ ಮದುವೆಯಾಗಿದ್ದರು. ಮದುವೆಗೆ ಯುವತಿ ಕುಟುಂಬದವರ ವಿರೋಧವಿತ್ತು.

ತಂದೆ ಕರ್ತವ್ಯ ನಿರ್ವಹಿಸುತ್ತಿರುವ ಠಾಣೆ ವ್ಯಾಪ್ತಿಯಲ್ಲಿ ಫೆ. 15ರಂದು ಮಗ ಮುಸ್ತಕಿನ್ ಕೊಲೆಯಾಗಿತ್ತು. ಈ ಪ್ರಕರಣದಲ್ಲಿ ಇಬ್ಬರನ್ನು ಮಾತ್ರ ಬಂಧಿಸಲಾಗಿದ್ದು, ಉಳಿದ ಆರೋಪಿಗಳ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ತನಿಖೆ ಹೊಣೆ ಹೊತ್ತಿರುವ ಕೆಲ ಪೊಲೀ
ಸರು, ಆರೋಪಿಗಳ ಜೊತೆ ಕೈ ಜೋಡಿಸಿ ತಮ್ಮದೇ ಇಲಾಖೆಯ ಪಿಎಸ್ಐ ಕುಟುಂಬಕ್ಕೆ ಅನ್ಯಾಯ ಮಾಡುತ್ತಿದ್ದಾರೆ ಎಂದು ದೂರಲಾಗಿದೆ.

ಈ ಬಗ್ಗೆ, ಮೃತ ಮುಸ್ತಕಿನ್ ಪತ್ನಿ ಅತೀಕಾ ಉಮೇಸ ಅವರು ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಗೆ ಮಾರ್ಚ್ 25ರಂದು ದೂರು ಸಲ್ಲಿಸಿದ್ದಾರೆ. ತಮಗೆ ಹಾಗೂ ಪಿಎಸ್‌ಐ ಕುಟುಂಬಕ್ಕೆ ಭದ್ರತೆ ಒದಗಿಸುವಂತೆ ಕೋರಿದ್ದಾರೆ.

‘ಪತಿ ಮುಸ್ತಕಿನ್ ಅವರನ್ನು ಮಾಜಿ ಕಾರ್ಪೋರೇಟರ್ ಆಗಿರುವ ನನ್ನ ತಂದೆ, ಸಹೋದರರು ಹಾಗೂ ಸಂಬಂಧಿಕರು ಸೇರಿಕೊಂಡು ಅಪಘಾತದ ಸೋಗಿನಲ್ಲಿ ಕೊಲೆ ಮಾಡಿದ್ದಾರೆ. ತಂದೆ–ಸಹೋದರನಷ್ಟೇ ಪೊಲೀಸರು ಬಂಧಿಸಿದ್ದು, ಉಳಿದವರು ಹೊರಗಡೆ ಇದ್ದಾರೆ. ರಾಜಕೀಯ ಹಾಗೂ ಹಣದ ಪ್ರಭಾವಕ್ಕೆ ಒಳಗಾಗಿ ಆರೋಪಿಗಳನ್ನು ರಕ್ಷಿಸಲು ಕೆಲ ಪೊಲೀಸರು ಪ್ರಯತ್ನಿಸುತ್ತಿದ್ದಾರೆ’ ಎಂದು ಅತೀಕಾ ದೂರಿನಲ್ಲಿ ತಿಳಿಸಿದ್ದಾರೆ.

‘ಮುಸ್ತಕಿನ್ ಹಾಗೂ ನಾನು ಹಲವು ವರ್ಷಗಳಿಂದ ಪ್ರೀತಿಸಿ ಮದುವೆಯಾಗಿದ್ದೆವು. ಇದನ್ನು ವಿರೋಧಿಸಿದ್ದ ನನ್ನ ಕುಟುಂಬದವರು, ತಮ್ಮ ಮರ್ಯಾದೆ ಹೋಗಿತೆಂದು ಹೇಳಿ ಮುಸ್ತಕಿನ್ ಅವರನ್ನು ಕೊಂದಿದ್ದಾರೆ. ಜೈಲಿನಿಂದಲೇ ಸಂಬಂಧಿಕರೊಬ್ಬರಿಗೆ ಇತ್ತೀಚೆಗೆ ಕರೆ ಮಾಡಿದ್ದ ತಂದೆ, ‘₹ 50 ಕೋಟಿ ಖರ್ಚಾದರೂ ಪರವಾಗಿಲ್ಲ. ಎಲ್ಲರನ್ನೂ ಕೊಲೆ ಮಾಡಿಸುತ್ತೇನೆ’ ಎಂಬುದಾಗಿ ಹೇಳಿದ್ದಾರೆ. ನನಗೆ ಹಾಗೂ ಮಾವ ಆರ್.ಬಿ. ಕೊಡಗಿ ಕುಟುಂಬದವರಿಗೆ ಜೀವ ಭಯವಿದ್ದು, ಯಾವುದೇ ತೊಂದರೆಯಾದರೂ ಆರೋಪಿಗಳೇ ಹೊಣೆ’ ಎಂದೂ ಅತೀಕಾ ದೂರಿನಲ್ಲಿ ವಿವರಿಸಿದ್ದಾರೆ.

‘ಮಾವ ಆರ್.ಬಿ. ಕೂಡಗಿ, ಅಪರಾಧ ವಿಭಾಗದ ಪಿಎಸ್‌ಐ. ಮೈದುನ, ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್ ಕೆಲಸ ಮಾಡುತ್ತಿದ್ದಾರೆ. 7 ತಿಂಗಳ ಗರ್ಭಿಣಿ ಆಗಿರುವ ನನ್ನನ್ನು ತಮ್ಮ ಮನೆಯಲ್ಲಿರಿಸಿಕೊಂಡು ಆರೈಕೆ ಮಾಡುತ್ತಿದ್ದಾರೆ. ಪಿಎಸ್ಐ, ಕಾನ್‌ಸ್ಟೆಬಲ್ ಇರುವ ಕುಟುಂಬಕ್ಕೆ ಪೊಲೀಸರಿಂದ ಅನ್ಯಾಯವಾಗುತ್ತಿದ್ದು, ಜನಸಾಮಾನ್ಯರ ಪರಿಸ್ಥಿತಿ ಏನು ? ಮುಸ್ತಕಿನ್ ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲರನ್ನೂ ಬಂಧಿಸಬೇಕು. ಆರೋಪಿಗಳ ಜೊತೆ ಶಾಮೀಲಾಗಿರುವ ಪೊಲೀಸರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಕೊಲೆ ಪ್ರಕರಣವನ್ನು ಸಿಐಡಿ ಅಥವಾ ಸಿಬಿಐಗೆ ವಹಿಸಬೇಕು’ ಎಂದೂ ಅತೀಕಾ ಉಮೇಸ ಕೋರಿದ್ದಾರೆ.

‘ಸುಪಾರಿ ಹಂತಕರು’
‘ವಿಜಯಪುರದ ರಾಷ್ಟ್ರೀಯ ಹೆದ್ದಾರಿ ರೇಡಿಯೊ ಕೇಂದ್ರದ ಬಳಿ ಮುಸ್ತಕಿನ್ ಕೊಲೆ ಆಗಿದೆ. ಆರೋಪಿಗಳ ಪೈಕಿ ಕೆಲವರು, ಸುಪಾರಿ ಹಂತಕರು. ಅವರ ಮೇಲೆ ವಿವಿಧ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಅಷ್ಟಾದರೂ ಅವರ ವಿರುದ್ಧ ಪೊಲೀಸ್ ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ಅತೀಕಾ ದೂರಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು