ಶನಿವಾರ, ಫೆಬ್ರವರಿ 29, 2020
19 °C
ಇಬ್ಬರು ಡಿಡಿಪಿಯು ಪ್ರಭಾರ ರದ್ದು

ದ್ವಿತೀಯ ಪಿಯು ಪರೀಕ್ಷೆ: ಪ್ರಶ್ನೆಪತ್ರಿಕೆ ಸೋರಿಕೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪದವಿಪೂರ್ವ ಶಿಕ್ಷಣ‌ ಇಲಾಖೆ ನಡೆಸುವ ದ್ವಿತೀಯ ಪಿ.ಯು ಪೂರ್ವಸಿದ್ಧತಾ ಪರೀಕ್ಷೆ ಪ್ರಶ್ನೆಪತ್ರಿಕೆಗಳು ಸೋರಿಕೆ ಆಗಿರುವ ಕುರಿತು ವದಂತಿಗಳಿವೆ. ಆದರೆ, ಸರ್ಕಾರ ಇದನ್ನು ಅಲ್ಲಗಳೆದಿದೆ. 

ಯಾವುದೇ ಸೋರಿಕೆ ಆಗಿಲ್ಲ ಎಂದು ಹೇಳಿದರೂ, ಬೆಂಗಳೂರು ಉತ್ತರ ಜಿಲ್ಲಾ ಪ್ರಭಾರ ಉಪನಿರ್ದೇಶಕ ವಿ.ರಾಜಶೇಖರ ಮತ್ತು ಬೆಂಗಳೂರು ದಕ್ಷಿಣ ಜಿಲ್ಲಾ ಪ್ರಭಾರ ಉಪನಿರ್ದೇಶಕ ಬಿ.ಎಂ.ರಾಜಕುಮಾರ ಅವರ ಪ್ರಭಾರ ಹೊಣೆಗಾರಿಕೆಯನ್ನು ಹಿಂಪಡೆಯಲಾಗಿದೆ. ಇವರ ಸ್ಥಾನಗಳಿಗೆ ಪ್ರಭಾರ ನೆಲೆಯಲ್ಲಿ ಕ್ರಮವಾಗಿ ಸಿ.ಎಲ್‌.ಶೈಲಜಾ ಮತ್ತು ಎಚ್‌.ವಿ.ಉಷಾದೇವಿ ಅವರನ್ನು ನಿಯುಕ್ತಿಗೊಳಿಸಲಾಗಿದೆ.

‘ಯಾವುದೇ ಪ್ರಶ್ನೆ ಪತ್ರಿಕೆಯೂ ಸೋರಿಕೆ ಆಗಿಲ್ಲ. ಅನುಮತಿಯಿಲ್ಲದೆ ಕೆಲವು ಉಪನ್ಯಾಸಕರ ಸಂಘಗಳು ತಮ್ಮ ವ್ಯಾಪ್ತಿಯ ಕಾಲೇಜುಗಳಲ್ಲಿ ಅನಧಿಕೃತವಾಗಿ ಪೂರ್ವಸಿದ್ಧತಾ ಪರೀಕ್ಷೆಗಳನ್ನು ನಡೆಸುತ್ತಿರುವುದು ಇಲಾಖೆಯ ಗಮನಕ್ಕೆ ಬಂದಿದ್ದು, ಇಂತಹ ಪ್ರಶ್ನೆ‌ಪತ್ರಿಕೆಗಳು ಸೋರಿಕೆ ಆಗಿರುವ ಸಾಧ್ಯತೆ ಇರುತ್ತದೆ. ಹೀಗೆ ಪರೀಕ್ಷೆಯನ್ನು ಅನಧಿಕೃತವಾಗಿ‌ ನಡೆಸಲು ಅನುಮತಿ ನೀಡಿರಬಹುದಾದ ಅಧಿಕಾರಿಗಳ ವಿರುದ್ಧ ಕೂಡಲೇ ಶಿಸ್ತುಕ್ರಮಕ್ಕೆ ಮುಂದಾಗಬೇಕು’ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌.ಸುರೇಶ್ ಕುಮಾರ್ ಸೂಚನೆ ನೀಡಿದ್ದರು. ಅದರಂತೆ ಇಬ್ಬರಿಗೂ ನೋಟಿಸ್‌ ಜಾರಿಗೊಳಿಸಿ, ಬಳಿಕ ಅವರ ಪ್ರಭಾರವನ್ನು ಹಿಂದಕ್ಕೆ ಪಡೆಯಲಾಗಿದೆ.

ರಾಯಚೂರಿನಲ್ಲೂ ಸೋರಿಕೆ?: ಶುಕ್ರವಾರ ಇಂಗ್ಲಿಷ್‌ ಪರೀಕ್ಷೆ ನಡೆದಿದ್ದು, ರಾಯಚೂರು ಜಿಲ್ಲೆಯಲ್ಲಿ ವಾಟ್ಸ್‌ಆ್ಯಪ್‌ ಗುಂಪುಗಳಲ್ಲಿ ಗುರುವಾರವೇ ಈ ಪ್ರಶ್ನೆಪತ್ರಿಕೆ ಹರಿದಾಡಿತ್ತು. ಅದನ್ನೇ ಪರೀಕ್ಷೆಗೂ ನೀಡಲಾಗಿದೆ ಎಂದು ಹಲವು ವಿದ್ಯಾರ್ಥಿಗಳು ದೂರಿದ್ದಾರೆ.

ಸಲಹೆ: ಪೂರ್ವತಯಾರಿ ಪರೀಕ್ಷೆಯನ್ನು ಇಲಾಖೆಯೇ ನಿರ್ದಿಷ್ಟ ದಿನಾಂಕಗಳಂದು  ನಡೆಸುವುದು ಸರಿ, ಆದರೆ ಪ್ರಶ್ನೆಪತ್ರಿಕೆಯನ್ನು ಮಾತ್ರ ಜಿಲ್ಲಾ ಮಟ್ಟಕ್ಕೆ ಪ್ರತ್ಯೇಕವಾಗಿ ನೀಡುವ ವ್ಯವಸ್ಥೆ ಮಾಡಬೇಕು ಎಂದು ಕೆಲವು ಉಪನ್ಯಾಸಕರು ಸಲಹೆ ನೀಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು