ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಮಗಾರಿಗಳ ಸಮಗ್ರ ಮಾಹಿತಿ ವೆಬ್‌ಸೈಟ್‌ನಲ್ಲಿ ಪ್ರಕಟಿಸಿ

ಪಾರದರ್ಶಕತೆ ಕಾಯ್ದುಕೊಳ್ಳಿ: ಬಿಬಿಎಂಪಿ ಅಧಿಕಾರಿಗಳಿಗೆ ಆಡಳಿತಾಧಿಕಾರಿ, ಆಯುಕ್ತ ಸೂಚನೆ
Last Updated 1 ಅಕ್ಟೋಬರ್ 2020, 19:31 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿ ವತಿಯಿಂದ ಯಾವೆಲ್ಲಾ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ, ಅವುಗಳ ಪ್ರಗತಿ ಯಾವ ಹಂತದಲ್ಲಿದೆ, ಅವುಗಳಿಗೆ ಎಷ್ಟು ಹಣ ವ್ಯಯವಾಗಲಿದೆ, ಯಾವ ಕಾಮಗಾರಿಗಳಿಗೆ ಕಾರ್ಯಾದೇಶ ನೀಡಲಾಗಿದೆ ಎಂಬೆಲ್ಲಾ ಮಾಹಿತಿಗಳನ್ನೂ ಬಿಬಿಎಂಪಿ ವೆಬ್‌ಸೈಟ್‌ನಲ್ಲಿ ಪ್ರಕಟಿಸಬೇಕು ಎಂದು ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಆಡಳಿತಾಧಿಕಾರಿ ಗೌರವ ಗುಪ್ತ ಅವರು ಪಾಲಿಕೆಯ ವಿವಿಧ ವಿಭಾಗದ ಮುಖ್ಯಸ್ಥರುಗಳ ಜೊತೆ ಗುರುವಾರ ಸಭೆ ನಡೆಸಿದರು. ಈ ವೇಳೆ ಪಾರದರ್ಶಕತೆ ಕಾಪಾಡಿಕೊಳ್ಳಲು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಆಯುಕ್ತರು ನಿರ್ದೇಶನ ನೀಡಿದರು.

ಬಿಬಿಎಂಪಿ ವ್ಯಾಪ್ತಿಯ ಆಯಾ ವಲಯಗಳಲ್ಲಿ ಇದುವರೆಗೂ ಯಾವ್ಯಾವ ಕಾಮಗಾರಿಗಳಿಗೆ ಜಾಬ್‌ಕೋಡ್ ನೀಡಲಾಗಿದೆ. ಇನ್ನೆಷ್ಟು ಕಾಮಗಾರಿಗಳಿಗೆ ಜಾಬ್‌ಕೋಡ್‌ ನೀಡಲು ಬಾಕಿ ಇದೆ. ಎಷ್ಟು ಕಾಮಗಾರಿಗಳಿಗೆ ಟೆಂಡರ್ ಆಗಿದೆ, ಎಷ್ಟು ಕೆಲಸಗಳು ಪ್ರಾರಂಭವಾಗಿವೆ. ಬಿಬಿಎಂಪಿ, ರಾಜ್ಯ ಹಣಕಾಸು ಆಯೋಗದ ಅನುದಾನ,14ನೇ ಕೇಂದ್ರ ಹಣಕಾಸು ಆಯೋಗದ ಅನುದಾನ ಹಾಗೂ ನಗರೋತ್ಥಾನ ಯೋಜನೆಗಳಡಿ ಎಷ್ಟು ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂಬ ಸಮಗ್ರ ಮಾಹಿತಿಯನ್ನು ಎರಡು ದಿನಗಳಲ್ಲಿ ಒದಗಿಸಬೇಕು ಎಂದು ವಲಯ ಮುಖ್ಯ ಎಂಜಿನಿಯರ್‌ಗಳಿಗೆ ಆಯುಕ್ತರು ತಾಕೀತು ಮಾಡಿದರು.

‘ಪ್ರತಿ ವಾರ್ಡ್‌ನಲ್ಲೂ ರಸ್ತೆ ಗುಂಡಿ ಮುಚ್ಚುವುದು, ಬೀದಿದೀಪಗಳ ನಿರ್ವಹಣೆ, ರಸ್ತೆ ಬದಿ ಕಸ ಸುರಿಯುವ ಸ್ಥಳಗಳ ತೆರವು ಕಾರ್ಯಗಳ ಬಗ್ಗೆ ಅಧಿಕಾರಿಗಳು ವಿಶೇಷ ಗಮನ ವಹಿಸಬೇಕು. ಅಧಿಕಾರಿಗಳು ಪರಸ್ಪರ ಸಮನ್ವಯದಿಂದ ತಮ್ಮ ಜವಾಬ್ದಾರಿ ನಿಭಾಯಿಸಬೇಕು’ ಎಂದು ಆಡಲಿತಾಧಿಕಾರಿ ಸೂಚನೆ ನೀಡಿದರು.

‘ವಾರ್ಡ್‌ನ ಸಮಸ್ಯೆ ನಿವಾರಣೆ ನನ್ನ ಜವಾಬ್ದಾರಿಯಲ್ಲ ಎಂದು ಯಾವೊಬ್ಬ ಅಧಿಕಾರಿಯೂ ಭಾವಿಸುವಂತಿಲ್ಲ. ಸಮಸ್ಯೆಗಳನ್ನು ಸಮನ್ವಯದಿಂದ ಕೆಲಸ ಮಾಡಿ ಇತ್ಯರ್ಥಗೊಳಿಸಬೇಕು. ಎಲ್ಲ ದಾಖಲೆಗಳನ್ನೂ ಡಿಜಿಟಲೀಕರಿಸಿ ಸಾರ್ವಜನಿಕರಿಗೆ ಈ ಮಾಹಿತಿ ಸುಲಭವಾಗಿ ಲಭಿಸುವಂತೆ ನೋಡಿಕೊಳ್ಳಬೇಕು’ ಎಂದು ಅವರು ಅಧಿಕಾರಿಗಳಿಗೆ ತಿಳಿಸಿದರು.

ಮಂಜುನಾಥ ಪ್ರಸಾದ್‌, ‘ಪ್ರತಿ ವಾರ್ಡ್‌ನ ನೋಡಲ್ ಅಧಿಕಾರಿಗಳು ವಾರದಲ್ಲಿ ಕನಿಷ್ಠ ಮೂರು ಬಾರಿ ಕ್ಷೇತ್ರಪರಿವೀಕ್ಷಣೆ ನಡೆಸಬೇಕು. ತಿಂಗಳ ಮೊದಲನೇ ಶನಿವಾರ ಹಾಗೂ ಮೂರನೇ ಶನಿವಾರ ವಾರ್ಡ್ ಸಮಿತಿ ಸಭೆಯನ್ನು ತಪ್ಪದೇ ನಡೆಸಬೇಕು. ವಾರ್ಡ್ ಸಮಿತಿ ಸಭೆಯಲ್ಲಿ ಬೆಸ್ಕಾಂ, ಜಲಮಂಡಳಿ, ಪೊಲೀಸ್ ಅಧಿಕಾರಿಗಳು ಕಡ್ಡಾಯವಾಗಿ ಹಾಜರಿರಬೇಕು. ಈ ಬಗ್ಗೆ ಮೂರೂ ಇಲಾಖೆಗಳಿಗೆ ಪತ್ರ ಬರೆಯಲಾಗುವುದು’ ಎಂದರು.

‘ವಾರ್ಡ್‌ ಸಭೆಯ ನಡಾವಳಿಗಳನ್ನು ಸಿದ್ಧಪಡಿಸಿ, ಅಹವಾಲುಗಳ ಕುರಿತು ಕ್ರಮವಹಿಸಬೇಕು. ಸಭೆಯ ನಡಾವಳಿ, ಸಭೆಯ ಫೋಟೊ ಹಾಗೂ ವಿಡಿಯೋವನ್ನು ಪಾಲಿಕೆಯ ವೆಬ್‌ಸೈಟ್‌ನಲ್ಲಿ ಹಾಕುವ ಮೂಲಕ ಎಲ್ಲವೂ ಪಾರದರ್ಶಕವಾಗಿರುವಂತೆ ನೋಡಿಕೊಳ್ಳಬೇಕು’ ಎಂದು ತಿಳಿಸಿದರು.

‘ನೋಡಲ್ ಅಧಿಕಾರಿಯು ಆಯಾ ವಾರ್ಡ್‌ಗೆ ಸಂಬಂಧಿಸಿದ ವಿವಿಧ ಇಲಾಖೆಗಳ ಅಧಿಕಾರಿಗಳು, ಕಸ ವಿಲೇವಾರಿ, ಬೀದಿ ದೀಪ ನಿರ್ವಹಣೆ, ರಸ್ತೆ ಗುಂಡಿ ಮುಚ್ಚುವ ಗುತ್ತಿಗೆದಾರರು ಹಾಗೂಆರ್‌ಡಬ್ಲ್ಯುಎ ಪ್ರತಿನಿಧಿಗಳು ಇರುವ ವಾಟ್ಸ್‌ಆ್ಯಪ್‌ ಬಳಗ ರಚಿಸಬೇಕು. ಸ್ಥಳೀಯ ಸಮಸ್ಯೆಗಳನ್ನು ತ್ವರಿತವಾಗಿ ಬಗೆಹರಿಸಲು ಇದು ನೆರವಾಗಲಿದೆ. ಜೊತೆಗೆ ‘ಸಹಾಯ 2.0’ ತಂತ್ರಾಂಶದಲ್ಲಿ ಬರುವ ದೂರುಗಳಿಗೂ ತ್ವರಿತವಾಗಿ ಸ್ಪಂದಿಸಬೇಕು’ ಎಂದರು.

‘ಜಿಐಎಸ್‌ ಮ್ಯಾಪಿಂಗ್‌ ಆಧಾರದಲ್ಲಿ ರಸ್ತೆ ಇತಿಹಾಸ’

ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಎಲ್ಲಾ ರಸ್ತೆಗಳ ಜಿಐಎಸ್ ಮ್ಯಾಪಿಂಗ್ ಮಾಡಲಾಗಿದೆ. ಆದರೆ, ಯಾವ ಅಧಿಕಾರಿಗಳ ಬಳಿಯೂ ಈ ಕುರಿತ ಸಮರ್ಪಕವಾದ ಮಾಹಿತಿ ಲಭ್ಯವಿಲ್ಲ. ಎಲ್ಲಾ ರಸ್ತೆಗಳ ಜಿಐಎಸ್‌ ಮ್ಯಾಪಿಂಗ್‌ ಆಧಾರದಲ್ಲಿ ಸಮರ್ಪಕ ರಸ್ತೆ ಕಾಮಗಾರಿಗಳ ಇತಿಹಾಸ ವರದಿಯನ್ನು ಸಿದ್ಧಪಡಿಸಬೇಕು’ ಎಂದು ಗೌರವ್‌ ಗುಪ್ತ ಸೂಚನೆ ನೀಡಿದರು.

‘ನಕ್ಷೆಯನ್ನು ಸರಳೀಕರಣಗೊಳಿಸಿ ಎಲ್ಲಾರಿಗೂ ಸುಲಭ ರೀತಿಯಲ್ಲಿ ಮಾಹಿತಿ ಲಭ್ಯವಾಗುವಂತತೆ ರೂಪಿಸಬೇಕು. ಒಮ್ಮೆ ನಕ್ಷೆ ನೋಡಿದರೆ ಯಾವ ರಸ್ತೆಯಲ್ಲಿ ಯಾವ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಯಾವ ಗುತ್ತಿಗೆದಾರರು ಕಾರ್ಯನಿರ್ವಹಿಸುತ್ತಿದ್ದಾರೆ, ರಸ್ತೆ ನಿರ್ವಹಣಾ ವರದಿ, ರಸ್ತೆಯ ನಿರ್ವಹಣೆಯ ಅವಧಿ, ಪಾದಚಾರಿ ಮಾರ್ಗ ಸೇರಿದಂತೆ ಸಮಗ್ರ ಮಾಹಿತಿ ಲಭ್ಯವಾಗಬೇಕು ಎಂದು ಆಯುಕ್ತರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT