ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳಂಕ ಮೆತ್ತಿಸಿದರೂ ದೃತಿಗೆಡದ ರಾಹುಲ್‌: ಚಿಂತಕ ಪ್ರೊ.ಜಿ.ಎನ್. ದೇವಿ ಶ್ಲಾಘನೆ

‘ಸ್ಟ್ರೇಂಜ್‌ ಬರ್ಡನ್ಸ್‌’ ಪುಸ್ತಕ ಬಿಡುಗಡೆ
Published 12 ಸೆಪ್ಟೆಂಬರ್ 2023, 23:30 IST
Last Updated 12 ಸೆಪ್ಟೆಂಬರ್ 2023, 23:30 IST
ಅಕ್ಷರ ಗಾತ್ರ

ಬೆಂಗಳೂರು: ಪಟ್ಟಭದ್ರ ಹಿತಾಸಕ್ತಿಗಳು ತಮ್ಮ ವ್ಯಕ್ತಿತ್ವಕ್ಕೆ ನಿರಂತರ ಕಳಂಕ ಮೆತ್ತಿಸಿದರೂ, ದೃತಿಗೆಡದೆ ಜನರ ಮಧ್ಯೆ ಸಾಗುತ್ತಿರುವ ರಾಹುಲ್‌ ಗಾಂಧಿ ನಿಜಕ್ಕೂ ‘ಅನಿರೀಕ್ಷಿತ ಹೊರೆ’ಗಳನ್ನು ನಿಭಾಯಿಸುತ್ತಿರುವ ನಾಯಕ ಎಂದು ಚಿಂತಕ ಪ್ರೊ.ಜಿ.ಎನ್. ದೇವಿ ಬಣ್ಣಿಸಿದರು.

ನಗರದಲ್ಲಿ ಮಂಗಳವಾರ ಪಾರದರ್ಶಕ್ ಮೀಡಿಯಾ ಫೌಂಡೇಷನ್‌ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಾಹುಲ್‌ ಗಾಂಧಿ ಅವರ ಕುರಿತು ಪತ್ರಕರ್ತ ಸುಗತ ಶ್ರೀನಿವಾಸರಾಜು ಬರೆದಿರುವ ‘ಸ್ಟ್ರೇಂಜ್‌ ಬರ್ಡನ್ಸ್‌’ ಪುಸ್ತಕ ಬಿಡುಗಡೆ ಮಾಡಿ ಅವರು ಮಾತನಾಡಿದರು.

ಬಾಲ್ಯದಲ್ಲೇ ಅಜ್ಜಿ ಇಂದಿರಾ, ಯೌವನದಲ್ಲಿ ತಂದೆ ರಾಜೀವ್‌ ಅವರನ್ನು ಹಂತಕರು ಹತ್ಯೆ ಮಾಡಿದರೂ ಸಾಮಾಜಿಕ ಬದುಕಿನಿಂದ ವಿಮುಖರಾಗುವ ಯೋಚನೆಯನ್ನೂ ರಾಹುಲ್‌ ಮಾಡಲಿಲ್ಲ. ಪರಿವಾರದ ಹತ್ಯೆಗಳ ನೋವನ್ನು ನುಂಗುತ್ತಲೇ ಸಮಾಜಕ್ಕೆ ಪ್ರೀತಿ ಹಂಚಲು ನಿರಂತರ ಪ್ರಯತ್ನ ಮಾಡಿದ್ದಾರೆ. ಅವರ ನಡೆ ಬುದ್ಧಪ್ರಜ್ಞೆಯ ಹಾದಿಯಂತೆ ಗೋಚರಿಸುತ್ತದೆ. ಒಂದು ರಾಷ್ಟ್ರೀಯ ಪಕ್ಷ, ಅದರ ಪರಿವಾರ, ಕೆಲ ಮಾಧ್ಯಮಗಳು ಅವರ ವ್ಯಕ್ತಿತ್ವವನ್ನು ಸಾರ್ವಜನಿಕವಾಗಿ ಕುಗ್ಗಿಸುವ ಪ್ರಯತ್ನ ಮಾಡಿದರೂ, ಹಿಂದಡಿ ಇಡಲಿಲ್ಲ. ಇಂತಹ ನಿರ್ಧಾರಗಳಿಂದಲೇ ರಾಹುಲ್‌ ಸಾಮಾನ್ಯ ಜನರಿಗೆ ಹತ್ತಿರವಾಗುತ್ತಿದ್ದಾರೆ ಎಂದರು.

ರಾಹುಲ್‌ ಅವರಲ್ಲಿನ ಮಾನವ ಪ್ರೀತಿ, ಬಡವರ ಬಗೆಗಿನ ಕಾಳಜಿ, ಕೋಮುವಾದಕ್ಕೆ ವಿರುದ್ಧವಾದ ಜಾತ್ಯತೀತ ನಿಲುವು, ಧರ್ಮಗಳ ಮಧ್ಯೆ ಸಾಮರಸ್ಯ ಮೂಡಿಸುವ ಪ್ರಯತ್ನ, ಅಧ್ಯಾತ್ಮ, ಮಾನವೀಯತೆ, ಭಕ್ತಿಯ ನಿಲುವು, ಧಾರ್ಮಿಕ ಆಚರಣೆ ಜತೆಗೆ ಅವರಲ್ಲಿನ ದ್ವಂದ್ವ, ವೈರುಧ್ಯಗಳನ್ನು ಉದಾಹರಣೆ, ದಾಖಲೆಗಳ ಸಮೇತ ಸುಗತ ಅವರು ನಿರೂಪಿಸಿದ್ದಾರೆ. ಪುಸ್ತಕ ಓದುತ್ತಾ ಸಾಗಿದಂತೆ ರಾಹುಲ್‌ ಅವರನ್ನು ಪರಕಾಯ ಪ್ರವೇಶ ಮಾಡಿರುವಂತೆ ಭಾಸವಾಗುತ್ತದೆ ಎಂದು ವಿಶ್ಲೇಷಿಸಿದರು.

ಇತಿಹಾಸತಜ್ಞ ಸಂಜೀವ್‌ ಜೈನ್‌, ಸುಖದ ಸುಪ್ಪತ್ತಿಗೆಯಲ್ಲಿ ಇರುವ ಅವಕಾಶವನ್ನು ನಿರಾಕರಿಸಿ, ಪ್ರತೀಕಾರದ ರಾಜಕೀಯಕ್ಕೆ ಎದೆಯೊಡ್ಡಿ ಸಾಗುತ್ತಿರುವ ರಾಹುಲ್‌ ಹಲವರಿಗೆ ಸ್ಫೂರ್ತಿ. 2004ರಲ್ಲಿ ರಾಜಕೀಯಕ್ಕೆ ಪದಾರ್ಪಣೆ ಮಾಡಿದ ದಿನದಿಂದ ಭಾರತ್‌ ಜೋಡೊ ಯಾತ್ರೆವರೆಗಿನ ಅವರ ಪಯಣದ ಏಳುಬೀಳುಗಳನ್ನು ವಾಸ್ತವದ ವಿಶ್ಲೇಷಣೆ ಮೂಲಕ ‘ಸ್ಟ್ರೇಂಜ್‌ ಬರ್ಡನ್ಸ್‌’ ಕಟ್ಟಿಕೊಟ್ಟಿದೆ ಎಂದರು.

ನಟಿ ಪದ್ಮಾವತಿ ರಾವ್, ನಿವೃತ್ತ ಐಎಎಸ್‌ ಅಧಿಕಾರಿ ಚಿರಂಜೀವಿ ಸಿಂಘ್‌, ಸುಗತ ಶ್ರೀನಿವಾಸ ರಾಜು ಉಪಸ್ಥಿತರಿದ್ದರು. 

ಪುಸ್ತಕ ಕುರಿತು

ಕೃತಿ: ಸ್ಟ್ರೇಂಜ್‌ ಬರ್ಡನ್ಸ್‌

ಲೇಖಕ: ಸುಗತ ಶ್ರೀನಿವಾಸರಾಜು

ಪ್ರಕಾಶನ: ಪೆಂಗ್ವಿನ್‌ ಇಂಡಿಯಾ

ಪುಟಗಳು: 311 ಬೆಲೆ: 699

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT