ಶುಕ್ರವಾರ, ಜುಲೈ 30, 2021
25 °C

ರೈಲಿನಲ್ಲಿ ತಂದಿದ್ದ ₹ 30 ಲಕ್ಷ ಮೌಲ್ಯದ ಡ್ರಗ್ಸ್ ಜಪ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪಶ್ಚಿಮ ಬಂಗಾಳದಿಂದ ರೈಲಿನ ಮೂಲಕ ಡ್ರಗ್ಸ್ ತಂದು ನಗರದಲ್ಲಿ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಕಾಡುಗೋಡಿ ಪೊಲೀಸರು ಬಂಧಿಸಿದ್ದಾರೆ.

‘ಮಿನರಲ್ ಶೇಖ್ (37) ಹಾಗೂ ಶೇಖ್ ಶಹಾಜುದ್ದೀನ್ (42) ಬಂಧಿತರು. ಅವರಿಂದ ₹ 30 ಲಕ್ಷ ಮೌಲ್ಯದ ಗಾಂಜಾ ಹಾಗೂ ಮಾರ್ಫಿನ್ (ಹೆರಾಯಿನ್ ರೂಪ) ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಪಶ್ಚಿಮ ಬಂಗಾಳದ ಆರೋಪಿಗಳು, ಕೆಲಸ ಹುಡುಕಿಕೊಂಡು ಎರಡು ವರ್ಷಗಳ ಹಿಂದೆ ನಗರಕ್ಕೆ ಬಂದಿದ್ದರು. ಕುಂದಲಹಳ್ಳಿ ಬಳಿ ಶೆಡ್‌ನಲ್ಲಿ ವಾಸವಿದ್ದರು. ನಿರ್ಮಾಣ ಹಂತದ ಕಟ್ಟಡಗಳಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು. ಕಳೆದ ವರ್ಷ ಲಾಕ್‌ಡೌನ್‌ನಿಂದಾಗಿ ಕೆಲಸ ಹೋಗಿತ್ತು. ಹೀಗಾಗಿ, ತಮ್ಮೂರಿಗೆ ಹೋಗಿದ್ದರು.’

‘ತಮ್ಮೂರಿನಿಂದ ರೈಲಿನಲ್ಲಿ ನಗರಕ್ಕೆ ಇತ್ತೀಚೆಗೆ ಬಂದಿದ್ದ ಆರೋಪಿಗಳು, ಡ್ರಗ್ಸ್ ಸಹ ತಂದಿದ್ದರು. ಕಾಡುಗೋಡಿ ರೈಲು ನಿಲ್ದಾಣ ಸಮೀಪದಲ್ಲಿ ಡ್ರಗ್ಸ್ ಮಾರಾಟ ಮಾಡಲು ಯತ್ನಿಸುತ್ತಿದ್ದರು. ಈ ಬಗ್ಗೆ ಮಾಹಿತಿ ಬರುತ್ತಿದ್ದಂತೆ ದಾಳಿ ಮಾಡಿ ಆರೋಪಿಗಳನ್ನು ಬಂಧಿಸಲಾಯಿತು’ ಎಂದೂ ಪೊಲೀಸರು ತಿಳಿಸಿದರು.

‘ಹೆರಾಯಿನ್ ಬಳಸಿ ಉತ್ಪಾದಿಸುವ ಮಾರ್ಫಿನ್ ಡ್ರಗ್ಸ್‌ಗೆ ಬೇಡಿಕೆ ಇದೆ. ಪ್ರತಿ ಗ್ರಾಂಗೆ ಸಾವಿರಾರು ರೂಪಾಯಿ ಪಡೆದು ಆರೋಪಿಗಳು ಮಾರ್ಫಿನ್ ಮಾರುತ್ತಿದ್ದರು. ಕೃತ್ಯದಲ್ಲಿ ಮತ್ತಷ್ಟು ಮಂದಿ ಭಾಗಿಯಾಗಿರುವ ಮಾಹಿತಿ ಇದೆ’ ಎಂದೂ ಅವರು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು