ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

3 ದಿನ ಉರುಳಿದರೂ ಇಳಿದಿಲ್ಲ ನೀರು: ಹೊರಮಾವು ನಿವಾಸಿಗಳ ಕರುಣಾಜನಕ ಸ್ಥಿತಿ

ಶ್ರೀಸಾಯಿ ಬಡಾವಣೆ ಮನೆಗಳು ಜಲಾವೃತ l ಅನ್ಯರ ಮನೆಯಲ್ಲಿ ಆಶ್ರಯ l ನಿವಾಸಿಗಳ ಕರುಣಾಜನಕ ಸ್ಥಿತಿ
Last Updated 20 ಮೇ 2022, 2:14 IST
ಅಕ್ಷರ ಗಾತ್ರ

ಬೆಂಗಳೂರು: ಬಡಾವಣೆಯಲ್ಲೇ ಉಳಿದ ರಾಜಕಾಲುವೆ ನೀರು, ಮನೆಯಲ್ಲಿರುವ ವಸ್ತುಗಳ ಏನಾಗಿವೆ ಎಂಬುದನ್ನೂ ನೋಡಲಾಗದ ಸ್ಥಿತಿ, ನೆರ ಮನೆಯಲ್ಲೇ ಮುಂದುವರಿದ ವಾಸ...

ಇದು ಮೂರು ದಿನಗಳು ಉರುಳಿದ ಬಳಿಕವೂ ನೀರಿನ ಮಟ್ಟ ತಗ್ಗದ ಕಾರಣ ಅಕ್ಷರಶಃ ನೀರೊಳಗೆ ಬಂಧಿಗಳಾಗಿರುವ ಹೊರಮಾವು ವಡ್ಡರಪಾಳ್ಯದ ಶ್ರೀಸಾಯಿ ಬಡಾವಣೆ ನಿವಾಸಿಗಳ ಕರುಣಾಜನಕ ಸ್ಥಿತಿ ಇದು. ಸೋಮವಾರ ರಾತ್ರಿ ಧೋ... ಎಂದು ಸತತ ನಾಲ್ಕು ಗಂಟೆ ಸುರಿದ ಮಳೆಯಿಂದ ರಾಜಕಾಲುವೆ ನೀರು ಮನೆಯೊಳಗೆ ನುಗ್ಗಿ ಬಂದಿತ್ತು. ಅಂದು ಆಳೆತ್ತರಕ್ಕೆ ನಿಂತಿದ್ದ ನೀರು ಬಡಾವಣೆ ಮತ್ತು ಮನೆಗಳನ್ನು ಬಿಟ್ಟು ಹೋಗುತ್ತಿಲ್ಲ.

ಗುರುವಾರ ಸಂಜೆ ವೇಳೆಗೆ ಮಂಡಿಯುದ್ದದ ನೀರು ಉಳಿದಿದ್ದು, ಮತ್ತೆ ಜೋರು ಮಳೆ ಬಂದರೆ ನೀರು ಹೆಚ್ಚಾಗುವ ಆತಂಕದಲ್ಲಿ ನಿವಾಸಿಗಳಿದ್ದಾರೆ.

‘ನೀರು ನುಗ್ಗಿದ ಕೂಡಲೇ ಮನೆಯಿಂದ ಹೊರ ಬಂದ ನಾವು ಮತ್ತೆ ಮನೆಯೊಳಗೆ ಹೋಗಲು ಸಾಧ್ಯವಾಗಿಲ್ಲ. ಮನೆಯಲ್ಲಿನ ವಸ್ತುಗಳು ಏನಾಗಿರಬಹುದು ಎಂಬುದನ್ನು ಊಹಿಸಲು ಸಾಧ್ಯವಾಗದ ಸ್ಥಿತಿಯಲ್ಲಿದ್ದೇವೆ. ದಿನಸಿ ಪದಾರ್ಥದ ಚೀಲಗಳು, ಎಲೆಕ್ಟ್ರಾನಿಕ್ ವಸ್ತುಗಳು, ಗೃಹೋಪಯೋಗಿ ವಸ್ತುಗಳು ಮರಳಿ ಸಿಗುವ ಸಾಧ್ಯತೆ ಇಲ್ಲ. ಮಳೆ ನೀರು ಇಳಿದು ಹೋಗುವ ಮುನ್ನ ಹಲವು ವರ್ಷಗಳ ಪರಿಶ್ರಮದಿಂದ ಕಟ್ಟಿಕೊಂಡಿದ್ದ ನಮ್ಮ ಬದುಕನ್ನೇ ಕಸಿದುಕೊಂಡು ಹೋಗುತ್ತಿದೆ’ ಎಂದು ಬಡಾವಣೆ ನಿವಾಸಿಗಳು ಕಣ್ಣೀರು ಹಾಕಿದರು.

‘ಮೂರು ದಿನಗಳಿಂದ ನಿದ್ರೆ ಮಾಡಿಲ್ಲ. ಮಕ್ಕಳು, ವಯೋವೃದ್ಧರೊಂದಿಗೆ ನೆರೆಯವರ ಮನೆಯಲ್ಲಿ ಜೀವ ಉಳಿಸಿಕೊಂಡಿದ್ದೇವೆ. ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳದೆ ಪ್ರತಿಬಾರಿ ನಮ್ಮನ್ನು ಕಷ್ಟಕ್ಕೆ ತಳ್ಳಲಾಗುತ್ತಿದೆ’ ಎಂದು ಜಾನ್‌ ಕಷ್ಟ ಹೇಳಿಕೊಂಡರು.

ಪ್ರತಿಬಾರಿ ಸಮಸ್ಯೆ ಏಕೆ?

ಆಕಾಶದಲ್ಲಿ ಮೋಡ ಕಟ್ಟಿದರೆ ಈ ಬಡಾವಣೆ ಜನರ ನಿದ್ರೆಗೆಡುತ್ತದೆ. ಜೋರು ಮಳೆ ಬಂದಾಗಲೆಲ್ಲಾ ಮನೆ ಬಾಗಿಲಿಗೆ ಬರುವ ರಾಜಕಾಲುವೆ ನೀರು, ನಿವಾಸಿಗಳ ನೆಮ್ಮದಿಯನ್ನೇ ಹಾಳು ಮಾಡಿದೆ.

ಹೆಬ್ಬಾಳ, ನಾಗವಾರ, ಯಲಹಂಕ, ಅಲ್ಲಾಳಸಂದ್ರ, ಜಕ್ಕೂರು, ರಾಚೇನಹಳ್ಳಿ ಕೆರೆಗಳನ್ನು ದಾಟಿ, ಮಾನ್ಯತಾ ಟೆಕ್‌ ಪಾರ್ಕ್‌ನಲ್ಲಿ ಹಾದು, ಎಲಿಮೆಂಟ್ಸ್‌ ಮಾಲ್‌ ಪಕ್ಕದಲ್ಲಿ ಹಾದುಹೋಗುವ ರಾಜಕಾಲುವೆ ಮುಂದೆ ಸಾಗಿದಂತೆ ಕೆ.ಜಿ. ಹಳ್ಳಿ ಕಡೆಯಿಂದ ಬರುವ ಮತ್ತೊಂದು ರಾಜಕಾಲುವೆಯನ್ನು ಸೇರಿಕೊಳ್ಳುತ್ತದೆ. ಅಲ್ಲಿಂದ ಮುಂದಕ್ಕೆ ಹೆಣ್ಣೂರು– ಬಾಗಲೂರು ರಸ್ತೆ ತನಕ ರಾಜಕಾಲುವೆ ವಿಸ್ತಾರವಾಗಿ ಹರಿಯುತ್ತಿದೆ.

ಈ ರಸ್ತೆ ದಾಟಿದ ನಂತರವೂ ಲಿಂಗರಾಜಪುರದ ಕಡೆಯಿಂದ ಬರುವ ಮತ್ತೊಂದು ರಾಜಕಾಲುವೆಯೂ ಇದರೊಳಗೆ ವಿಲೀನಗೊಳ್ಳುತ್ತದೆ. ಅಲ್ಲಿಂದ 100 ಮೀಟರ್ ದೂರದಲ್ಲೇ ರೈಲ್ವೆ ಮಾರ್ಗ ಎದುರಾಗುತ್ತದೆ. ರೈಲ್ವೆ ಮಾರ್ಗವನ್ನು ರಾಜಕಾಲುವೆ ದಾಟಲು ಸಣ್ಣ ಸಣ್ಣ ಕಿಂಡಿಯಾಕಾರದ ಎರಡು ಸೇತುವೆಗಳಿವೆ.

ಹೆಣ್ಣೂರು–ಬಾಗಲೂರು ರಸ್ತೆಯ ಎರಡೂ ಬದಿಯಲ್ಲಿ ದೊಡ್ಡ ಹೊಳೆಯಂತೆ ಕಾಣುವ ರಾಜಕಾಲುವೆ ರೈಲ್ವೆ ಮಾರ್ಗದಿಂದ ಮುಂದಕ್ಕೆ ಸಣ್ಣದಾಗಿ ಹರಿಯುತ್ತದೆ. ಬೇಸಿಗೆಯಲ್ಲಿ ಸಣ್ಣದಾಗಿ ನೀರು ಹರಿಯುವಾಗ ಇದು ಸಮಸ್ಯೆಯಾಗಿ ಕಾಣಿಸುವುದಿಲ್ಲ. ಜೋರು ಮಳೆ ಬಂದಾಗ ನೀರು ಮುಂದೆ ಸಾಗಲು ಸಾಧ್ಯವಾಗದೆ ವಡ್ಡರಪಾಳ್ಯ, ಕಾವೇರಿನಗರದ ಶ್ರೀಸಾಯಿ ಬಡಾವಣೆ, ಗೆದ್ದಲಹಳ್ಳಿಯ ಎಸ್‌ಟಿಪಿ ಪಕ್ಕದ ಟ್ರಿನಿಟಿ ಫಾರ್ಚೂನ್ ಬಡಾವಣೆಗಳಿಗೆ ಆವರಿಸಿಕೊಳ್ಳುತ್ತದೆ.

‘ರೈಲ್ವೆ ಇಲಾಖೆ ನಿರ್ಲಕ್ಷ್ಯ’

ರೈಲ್ವೆ ಹಳಿ ಕೆಳಗೆ ರಾಜಕಾಲುವೆ ನೀರು ಸರಾಗವಾಗಿ ಹರಿದು ಹೋಗುವಂತೆ ದೊಡ್ಡ ಸೇತುವೆ ನಿರ್ಮಿಸುವ ಅಗತ್ಯವಿದೆ. ₹18 ಕೋಟಿ ಮೊತ್ತದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲು ರೈಲ್ವೆ ಇಲಾಖೆ ಜತೆ ಬಿಬಿಎಂಪಿ ಪತ್ರ ವ್ಯವಹಾರ ನಡೆಸುತ್ತಲೇ ಇದೆ. ಆದರೆ, ಸಮಸ್ಯೆ ಮಾತ್ರ ಹಾಗೇಯೇ ಉಳಿದುಕೊಂಡಿದೆ.

‘45 ಮೀಟರ್ ಅಗಲದ ರಾಜಕಾಲುವೆ ನೀರು ಹರಿದು ಹೋಗಲು 15 ಅಡಿಯಷ್ಟು ಅಗಲದ ಎರಡು ಕಿಂಡಿಗಳಂತಹ ಸೇತುವೆಗಳಿವೆ. ರೈಲ್ವೆ ಇಲಾಖೆಯ ನಿರ್ಲಕ್ಷ್ಯದಿಂದ ವರ್ಷವಿಡೀ ಜನ ಸಮಸ್ಯೆ ಅನುಭವಿಸುವಂತಾಗಿದೆ’ ಎಂದು ನಿವಾಸಿಗಳು ಅಳಲು ತೋಡಿಕೊಳ್ಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT