ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏರಿದ ನೀರು... ತೊಂದರೆ ನೂರು: ಬೆಂಗಳೂರು ಪೂರ್ವಭಾಗದಲ್ಲಿ ಮತ್ತಷ್ಟು ಹೆಚ್ಚಿದ ನೀರು

ನಿಲ್ಲದ ಮಳೆ: ಪೂರ್ವಭಾಗದಲ್ಲಿ ಮತ್ತಷ್ಟು ಹೆಚ್ಚಿದ ನೀರು
Last Updated 6 ಸೆಪ್ಟೆಂಬರ್ 2022, 21:59 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಮಂಗಳವಾರ ರಾತ್ರಿಯೂ ಮುಂದುವರಿದ ಮಳೆಯಿಂದಾಗಿ ಪೂರ್ವ ಭಾಗದಲ್ಲಿ ಮತ್ತಷ್ಟು ಸಂಕಷ್ಟ ಎದುರಾಗಿದೆ. ಕೆರೆಗಳ ಕೋಡಿ ಪ್ರಮಾಣದಲ್ಲಿ ಇನ್ನಷ್ಟು ಏರಿಕೆಯಾಗಿದ್ದು, ಬಡಾವಣೆಗಳು, ರಸ್ತೆಗಳಲ್ಲಿ ಜಲಮಟ್ಟ ಹೆಚ್ಚಾಗಿದೆ.

ಬಿಬಿಎಂಪಿ ಪೂರ್ವ ಹಾಗೂ ಮಹದೇವಪುರ ವಲಯ ವ್ಯಾಪ್ತಿಯಲ್ಲಿರುವ ದೊಡ್ಡನೆಕ್ಕುಂದಿ, ಶೀಲವಂತನಕೆರೆ, ಮುನ್ನೇಕೊಳಲು, ಕುಂದಲಹಳ್ಳಿ, ನೆಲ್ಲೂರಹಳ್ಳಿ, ಯಮಲೂರು, ಬೆಳ್ಳಂದೂರು, ಮಹದೇವಪುರ, ಹೂಡಿ, ವರ್ತೂರು, ಸವಳು, ಇಬ್ಬಲೂರು, ದೇವರಬಿಸನಹಳ್ಳಿ, ದೊಡ್ಡಕನ್ನಹಳ್ಳಿ, ಗುಂಜೂರು, ಭೋಗನಹಳ್ಳಿ ಕೆರೆ ಸೇರಿ ಬಹುತೇಕ ಎಲ್ಲ ಕೆರೆಗಳು ಕೋಡಿ ಹರಿಯುತ್ತಿವೆ. ಬೃಹತ್‌ ಪ್ರಮಾಣದಲ್ಲಿ ನೀರು ಬರುತ್ತಿರುವುದರಿಂದ ರಾಜಕಾಲುವೆ ಉಕ್ಕಿ ನೀರಿನ ಪ್ರಮಾಣ ಜನವಸತಿ ಪ್ರದೇಶಗಳಲ್ಲಿ ಹೆಚ್ಚಾಗಿದೆ. ಮಹದೇವಪುರ ಭಾಗದ ಮಾರತ್‌ ಹಳ್ಳಿ, ಬೆಳ್ಳಂದೂರು, ಯಮಲೂರು, ಸರ್ಜಾಪುರ ಸುತ್ತಮುತ್ತಲಿನ ಪ್ರದೇಶಗಳು ಮಳೆಯಿಂದ ಮತ್ತಷ್ಟು ಸಂಕಷ್ಟಕ್ಕೆ ಒಳಗಾಗಿವೆ.

ವರ್ತೂರು ಮುಖ್ಯರಸ್ತೆಯಿಂದ ಯಮಲೂರಿಗೆ ಹೋಗುವ ರಸ್ತೆಯಲ್ಲಿರುವ 77 ಡಿಗ್ರಿ ಟೌನ್‌ ಸೆಂಟರ್‌, ಎಚ್‌ಎಎಲ್‌ ತೇಜಸ್‌ ವಿಭಾಗದ ಆವರಣದಲ್ಲಿ ಮಂಗಳವಾರ ಸುಮಾರು ಮೂರು ಅಡಿಯಷ್ಟು ನೀರು ನಿಂತಿತ್ತು. ಯಮಲೂರು ಕೆರೆಯಿಂದ ನೀರಿನ ಹರಿವು ಹೆಚ್ಚಾದ್ದರಿಂದ ರಾಜಕಾಲುವೆ ಉಕ್ಕಿ ಹರಿಯಿತು. ಈ ಮಧ್ಯೆಯೇ ಬಿಬಿಎಂಪಿ ವತಿಯಿಂದ ರಾಜಕಾಲುವೆ ತೆರವು ಕಾರ್ಯ ಈ ರಸ್ತೆಯಲ್ಲಿ ನಡೆಯುತ್ತಿದೆ. ಸಂಜೆ ವೇಳೆಗೆ ನೀರಿನ ಪ್ರಮಾಣ ಕಡಿಮೆಯಾಗಿತ್ತು. ಆದರೆ, ಮಂಗಳವಾರ ಸಂಜೆಯಿಂದ ಆರಂಭವಾದ ಮಳೆಯಿಂದ ಮತ್ತಷ್ಟು ಜಲಾವೃತವಾಯಿತು.

ಸರ್ಜಾಪುರ ರಸ್ತೆಯಲ್ಲಿರುವ ರೈನ್‌ಬೊ ಡ್ರೈವ್‌, ಸನ್ನಿ ಬ್ರೂಕ್ಸ್, ಕಂಟ್ರಿ ಸೈಡ್‌ ಐಷಾರಾಮಿ ಬಡಾವಣೆಗಳಿಗೆ ಮಂಗಳವಾರ ಇನ್ನಷ್ಟು ನೀರು ನುಗ್ಗಿದೆ. ಐಟಿ ಕಂಪನಿಗಳಿರುವ ಇಕೊಸ್ಪೇಸ್‌ ಪ್ರದೇಶದಲ್ಲೂ ನೀರಿನ ಹರಿವು ಹೆಚ್ಚಾಗಿದೆ.

‘ಬಿಬಿಎಂಪಿ ವತಿಯಿಂದ ರಾಜಕಾಲುವೆ ಒತ್ತುವರಿ ತೆರವು ಕಾಮಗಾರಿಯನ್ನು ಮುಂದುವರಿಸಲಾಗಿದೆ. ರಾಜಕಾಲುವೆ ತೆರವು ಮಾಡಿ, ನೀರು ಹರಿಯಲು ಅನುವು ಮಾಡಿಕೊಡುವ ಕೆಲಸ ಮಾಡುತ್ತಿದ್ದೇವೆ. ಒತ್ತುವರಿ ತೆರವು ಮಾಡಲು ಮಳೆ ಅಡ್ಡಿಯಾಗಿದ್ದರೂ ಕೆಲಸ ನಿಂತಿಲ್ಲ’ ಎಂದು ಬಿಬಿಎಂಪಿ ಮಹದೇವಪುರ ವಲಯದ ಮುಖ್ಯ ಎಂಜಿನಿಯರ್‌ ಬಸವರಾಜ ಕಬಾಡೆ ತಿಳಿಸಿದರು.

‘ಎಚ್ಎಎಲ್‌ ಬಳಿಯ ದಿವ್ಯಶ್ರೀ ಅಪಾರ್ಟ್‌ಮೆಂಟ್‌ನಲ್ಲಿ ಮಾರ್ಪಾಟಾಗಿದ್ದ ಹಾಗೂ ಮುಚ್ಚಿಹೋಗಿದ್ದ ರಾಜಕಾಲುವೆಯನ್ನು ತೆರವು ಮಾಡಲಾಗಿದೆ. ಇದರಿಂದ ರಸ್ತೆ, ಬಡಾವಣೆಗಳಿಗೆ ನೀರು ಹರಿಯುವ ಪ್ರಮಾಣ ಕಡಿಮೆಯಾಗಿದೆ’ ಎಂದು ಬಿಬಿಎಂಪಿ ರಾಜಕಾಲುವೆ ವಿಭಾಗದ ಮುಖ್ಯ ಎಂಜಿನಿಯರ್‌ ಲೋಕೇಶ್‌ ಹೇಳಿದರು.

ವರ್ಕ್‌ ಫ್ರಂ ಹೋಂಗೆ ಉತ್ತೇಜನ: ಒಆರ್‌ಆರ್‌ಸಿಎ

‘ಹೊರ ವರ್ತುಲ ರಸ್ತೆಯಲ್ಲಿ ಮೂಲ ಸೌಕರ್ಯವನ್ನು ಮರುಸ್ಥಾಪಿಸಲು ತುರ್ತು, ಮಧ್ಯಮ ಹಾಗೂ ದೀರ್ಘಕಾಲದ ಯೋಜನೆಗಳನ್ನು ಸಂಬಂಧಪಟ್ಟ ಇಲಾಖೆಗಳು ನಡೆಸುವಾಗ ಸಂಘ ಸಹಯೋಗ ನೀಡಲಿದೆ. ಪ್ರಸ್ತುತ ಸಮಯದಲ್ಲಿ ಇಲಾಖೆಗಳು ರಕ್ಷಣಾ ಕಾರ್ಯದಲ್ಲಿ ತೊಡಗಿರುವಾಗ ಅವರಿಗೆ ಸಹಕಾರ ನೀಡುವತ್ತ ನಮ್ಮ ಗಮನ ಕೇಂದ್ರೀಕೃತವಾಗಿದೆ. ರಸ್ತೆಗಳಲ್ಲಿ ಹೆಚ್ಚು ದಟ್ಟಣೆ ಉಂಟಾಗುತ್ತಿರುವುದರಿಂದ ಕಂಪನಿಗಳು ವರ್ಕ್‌ ಫ್ರಂ ಹೋಮ್‌ಗೆ ಹೆಚ್ಚು ಉತ್ತೇಜನ ನೀಡಲು ಅಸೋಸಿಯೇಷನ್‌ ಸಲಹೆ ನೀಡುತ್ತದೆ. ತುರ್ತು ರಕ್ಷಣೆ ಕಾರ್ಯ ಕೈಗೊಳ್ಳುವ ಸಿಬ್ಬಂದಿ ಅಗತ್ಯ ಸ್ಥಳ ತಲುಪಲು ನಾವು ಈ ಮೂಲಕ ನೆರವು ನೀಡಬಹುದು’ ಎಂದು ಹೊರ ವರ್ತುಲ ರಸ್ತೆ ಕಂಪನಿಗಳ ಸಂಘದ (ಒಆರ್‌ಆರ್‌ಸಿಎ) ಪ್ರಧಾನ ವ್ಯವಸ್ಥಾಪಕ ಕೃಷ್ಣಕುಮಾರ್‌ ಗೌಡ ತಿಳಿಸಿದ್ದಾರೆ.

ಕಟ್ಟಡ ನಿಯಮ ಪುನರ್‌ ರಚನೆ ಅಗತ್ಯ: ಕಿರಣ್‌ ಮಜುಂದಾರ್‌ ಶಾ

‘ನಗರದಲ್ಲಿ ಈ ಹಿಂದೆ ಎಂದೂ ಕಾಣದಷ್ಟು ಪ್ರಮಾಣದಲ್ಲಿ ಮಳೆಯಾಗಿದೆ. ಸರ್ಕಾರ ಹಾಗೂ ಡೆವೆಲಪರ್‌ಗಳು ಒಟ್ಟಾಗಿ ಜವಾಬ್ದಾರಿ ತೆಗೆದುಕೊಂಡು, ಜಲಾವೃತ ಪ್ರದೇಶಗಳಲ್ಲಿ ಪರಿಹಾರ ಕಂಡುಕೊಳ್ಳಬೇಕು’ ಎಂದು ಬಯೊಕಾನ್‌ ಕಂಪನಿಯ ಮುಖ್ಯಸ್ಥೆ ಕಿರಣ್‌ ಮಜುಂದಾರ್‌ ಶಾ ಹೇಳಿದ್ದಾರೆ.

‘ಕಟ್ಟಡಗಳ ನಿಯಮಗಳನ್ನು ಪುನರ್‌ ರಚಿಸಬೇಕಿದೆ. ಮೂಲ ಸಮಸ್ಯೆಯನ್ನು ಬಗೆಹರಿಸಲು ಸೂಕ್ತ ಹಾಗೂ ನಿಯಂತ್ರಿತ ಕ್ರಿಯಾಯೋಜನೆಯ ಅಗತ್ಯವಿದೆ. ಟೀಕೆ ಮಾಡುವುದರಿಂದ ಪ್ರಯೋಜನವಿಲ್ಲ’ ಎಂದು ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT