ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿನಲ್ಲಿ ಮಳೆ ಅಬ್ಬರ: ವಾಹನ ಸವಾರರ ಪರದಾಟ

ನಗರದ ಬಹುತೇಕ ಭಾಗಗಳಲ್ಲಿ ಸೋಮವಾರ ರಾತ್ರಿ ಧಾರಾಕಾರ ಮಳೆ
Published 7 ನವೆಂಬರ್ 2023, 16:05 IST
Last Updated 7 ನವೆಂಬರ್ 2023, 16:05 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಎರಡು ದಿನ ಸುರಿದ ಹಿಂಗಾರು ಮಳೆಯು ತಂಪೆರೆಯುವ ಜೊತೆಗೆ ಜನರಿಗೆ ಹಿತಾನುಭವ ನೀಡಿತು. ಜತೆಗೆ ಅಲ್ಲಲ್ಲಿ ಸಮಸ್ಯೆಯನ್ನೂ ಸೃಷ್ಟಿಸಿತ್ತು. ರಸ್ತೆಯ ಮೇಲೆ ನೀರು ಹರಿದ ಪರಿಣಾಮ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು.

ಸೋಮವಾರ ರಾತ್ರಿಯಿಡಿ ಹಲವು ಬಡಾವಣೆಗಳಲ್ಲಿ ಧಾರಾಕಾರ ಮಳೆ ಸುರಿದಿದೆ. ಮಂಗಳವಾರ ಬೆಳಿಗ್ಗೆ ಬಿಡುವು ನೀಡಿತ್ತು. ಜತೆಗೆ ಬಿಸಿಲು ವಾತಾವರಣ ಕಂಡುಬಂದಿತ್ತು. ಮಂಗಳವಾರ ಮಧ್ಯಾಹ್ನ ಹಾಗೂ ಸಂಜೆ ಮತ್ತೆ ಹಲವೆಡೆ ಸುರಿದ ಧಾರಾಕಾರ ಮಳೆಗೆ ರಸ್ತೆಗಳಲ್ಲಿ ನದಿಯಂತೆ ನೀರು ಹರಿಯಿತು. ತಗ್ಗುಪ್ರದೇಶದ ಬಡಾವಣೆ, ಹೋಟೆಲ್‌ ಹಾಗೂ ಪೆಟ್ರೋಲ್‌ ಬಂಕ್‌ಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿತ್ತು.

ಜಕ್ಕೂರು ಹಾಗೂ ಯಲಹಂಕ, ಯಲಹಂಕ ನ್ಯೂಟೌನ್‌ ಭಾಗದಲ್ಲಿ ಸೋಮವಾರ ರಾತ್ರಿ ಭಾರಿ ಮಳೆ ಸುರಿಯಿತು. ಇದರಿಂದ ಕೇಂದ್ರೀಯ ವಿಹಾರ ಅಪಾರ್ಟ್‌ಮೆಂಟ್‌ ಸಮುಚ್ಚಯವೂ ಸೇರಿದಂತೆ ರಾಜಕಾಲುವೆ ಆಸುಪಾಸಿನ ಕೆಲವು ಅಪಾರ್ಟ್‌ಮೆಂಟ್‌ ಸಮುಚ್ಚಯಗಳ ಪ್ರಾಂಗಣಕ್ಕೆ ನೀರು ನುಗ್ಗಿತ್ತು. ನಿವಾಸಿಗಳು ಸಮಸ್ಯೆಗೆ ಸಿಲುಕಿದ್ದರು. ‌

‘ಜೋರಾಗಿ ಮಳೆ ಸುರಿದ ಸಂದರ್ಭದಲ್ಲೂ ಸಂಕಷ್ಟ ತಪ್ಪುತ್ತಿಲ್ಲ’ ಎಂದು ಅಪಾರ್ಟ್‌ಮೆಂಟ್‌ ನಿವಾಸಿಗಳು ಅಳಲು ತೋಡಿಕೊಂಡರು. ಯಲಹಂಕದ ಕೋಗಿಲು ಕ್ರಾಸ್ ಜಲಾವೃತಗೊಂಡು ವಾಹನ ಸವಾರರು ಪರದಾಡಿದರು.

ಕುರುಬರಹಳ್ಳಿಯಲ್ಲಿ ಹಲವು ಮನೆಗಳಿಗೆ ನೀರು ನುಗ್ಗಿತ್ತು. ರೆಫ್ರಿಜರೇಟರ್‌, ಟಿ.ವಿ. ಮತ್ತಿತರ ಉಪಕರಣಗಳು ಹಾನಿಗೊಳಗಾಗಿವೆ. ಮಂಗಳವಾರ ಬೆಳಿಗ್ಗೆ ನಿವಾಸಿಗಳು ನೀರನ್ನು ಹೊರಹಾಕಿದರು. ಕೆಲವು ಭಾಗದಲ್ಲಿ ರಾಜಕಾಲುವೆ ನೀರು ಸರಾಗವಾಗಿ ಹರಿಯದೆ ಹಿಮ್ಮುಖವಾಗಿ ಬಂದು ರಸ್ತೆಗಳ ಮೇಲೆ ಹರಿಯಿತು.

ಹೆಬ್ಬಾಳ ಮೇಲ್ಸೇತುವೆಯಲ್ಲಿ ನೀರು ಸರಾಗವಾಗಿ ಹರಿಯದೇ ಅಲ್ಲಲ್ಲಿ ನಿಂತಿತ್ತು. ಇದರಿಂದ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಮಧ್ಯರಾತ್ರಿಯೇ ಸ್ಥಳಕ್ಕೆ ತೆರಳಿದ ಬಿಬಿಎಂಪಿ ಸಿಬ್ಬಂದಿ ಹಾಗೂ ಸಂಚಾರ ಪೊಲೀಸರು ನೀರು ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಗಾಂಧಿನಗರ, ಮೆಜೆಸ್ಟಿಕ್, ಶೇಷಾದ್ರಿಪುರ, ಮಲ್ಲೇಶ್ವರ, ರಾಜಾಜಿನಗರ, ವಿಜಯನಗರ, ಬಸವೇಶ್ವರನಗರ, ಯಶವಂತಪುರ, ಮಹಾಲಕ್ಷ್ಮಿ ಲೇಔಟ್, ಗಿರಿನಗರ, ಬಸವನಗುಡಿ, ಬನಶಂಕರಿ, ಕೆಂಗೇರಿ, ರಾಜರಾಜೇಶ್ವರಿ ನಗರ, ಕುಮಾರಸ್ವಾಮಿ ಲೇಔಟ್, ಹನುಮಂತನಗರ, ಜೆ.ಪಿ.ನಗರ ಹಾಗೂ ಜಯನಗರ ಪ್ರದೇಶದಲ್ಲೂ ಮಳೆ ಅಬ್ಬರಿಸಿತು. ಹಲವು ಕಡೆ ನೀರು ಸಂಗ್ರಹಗೊಂಡು ಸಮಸ್ಯೆ ಎದುರಾಗಿತ್ತು.

ಹೆಬ್ಬಾಳ, ಆರ್‌.ಟಿ.ನಗರ, ಸಂಜಯನಗರ, ವಸಂತನಗರ, ಶಿವಾಜಿನಗರ, ಕಮರ್ಷಿಯಲ್ ಸ್ಟ್ರೀಟ್, ಅಶೋಕನಗರ, ಎಂ.ಜಿ.ರಸ್ತೆ, ಹಲಸೂರು, ಇಂದಿರಾನಗರ, ಮಡಿವಾಳ ಹಾಗೂ ಸುತ್ತಮುತ್ತ ಪ್ರದೇಶಗಳಲ್ಲೂ ಮಳೆ ಸುರಿದಿದೆ. ಪ್ರಮುಖ ರಸ್ತೆಗಳಲ್ಲಿ ನೀರು ಹರಿದಿದ್ದು, ಅದರಲ್ಲೇ ವಾಹನಗಳು ಸಂಚರಿಸಿದವು.

ನಾಗಸಂದ್ರ, ದಾಬಸ್‌ಪೇಟೆ, ಎಚ್‌.ಗೊಲ್ಲಹಳ್ಳಿ, ಹೆಮ್ಮಿಗೆಪುರ, ಜಾಲಹಳ್ಳಿ, ಜ್ಞಾನಭಾರತಿ, ಎಚ್‌ಎಎಲ್‌ ವಿಮಾನ ನಿಲ್ದಾಣ, ಸುಂಕದಕಟ್ಟೆ, ನಾಯಂಡಹಳ್ಳಿ, ಸಾರಕ್ಕಿ, ದೊರೆಸಾನಿಪಾಳ್ಯ, ರಾಜ್‌ಮಹಲ್‌ ಗುಟ್ಟಹಳ್ಳಿ, ನಾಗಪುರ, ಬೆಳ್ಳಂದೂರು, ಮಾರತಹಳ್ಳಿ, ಪೀಣ್ಯ ಕೈಗಾರಿಕಾ ಪ್ರದೇಶ, ಅರೆಕೆರೆ, ಬೇಗೂರು, ಹೆಗ್ಗನಹಳ್ಳಿ, ಕೋರಮಂಗಲ, ವಿದ್ಯಾಪೀಠ ವ್ಯಾಪ್ತಿಯಲ್ಲೂ ಮಳೆಯಾಗಿದೆ.

ನಗರದ ಬಹುತೇಕ ಕೆಳಸೇತುವೆಗಳಲ್ಲಿ ಅಪಾರ ಪ್ರಮಾಣದ ನೀರು ಸಂಗ್ರಹಗೊಂಡಿದ್ದರಿಂದ ಮಂಗಳವಾರ ಬೆಳಿಗ್ಗೆ 10 ಗಂಟೆ ವರೆಗೂ ವಾಹನ ಸಂಚಾರ ಸಾಧ್ಯವಾಗಲಿಲ್ಲ. ಶಿವಾನಂದ ವೃತ್ತ ಸೇರಿದಂತೆ ನಗರದ ಹಲವು ರಸ್ತೆಗಳಲ್ಲಿ ವಾಹನ ದಟ್ಟಣೆಯಿಂದ ಸವಾರರು ಪರದಾಡಿದರು.

ಶಂಕರ್‌ನಗರದಲ್ಲಿರುವ ರೆಸ್ಟೊರೆಂಟ್‌ಗೆ ನುಗ್ಗಿದ್ದ ಮಳೆ ನೀರನ್ನು ಹೊರ ಹಾಕುತ್ತಿರುವ ದೃಶ್ಯ.
ಶಂಕರ್‌ನಗರದಲ್ಲಿರುವ ರೆಸ್ಟೊರೆಂಟ್‌ಗೆ ನುಗ್ಗಿದ್ದ ಮಳೆ ನೀರನ್ನು ಹೊರ ಹಾಕುತ್ತಿರುವ ದೃಶ್ಯ.
ಪಟ್ಟಣಗೆರೆ ಬಳಿಯಿರುವ ನೇತ್ರಾವತಿ ಪೆಟ್ರೋಲ್ ಬಂಕ್ ಕೆಸರಿನಿಂದ ತುಂಬಿದ್ದು ಸಿಬ್ಬಂದಿ ಮಂಗಳವಾರ ಸ್ವಚ್ಛಗೊಳಿಸಿದರು. ಪ್ರಜಾವಾಣಿ ಚಿತ್ರ/ ಪ್ರಶಾಂತ್ ಎಚ್.ಜಿ.
ಪಟ್ಟಣಗೆರೆ ಬಳಿಯಿರುವ ನೇತ್ರಾವತಿ ಪೆಟ್ರೋಲ್ ಬಂಕ್ ಕೆಸರಿನಿಂದ ತುಂಬಿದ್ದು ಸಿಬ್ಬಂದಿ ಮಂಗಳವಾರ ಸ್ವಚ್ಛಗೊಳಿಸಿದರು. ಪ್ರಜಾವಾಣಿ ಚಿತ್ರ/ ಪ್ರಶಾಂತ್ ಎಚ್.ಜಿ.

ಎಲ್ಲೆಲ್ಲಿ ಸಮಸ್ಯೆ?

* ಶೇಷಾದ್ರಿಪುರ ರೈಲ್ವೆ ಕೆಳಸೇತುವೆಯಲ್ಲಿ ಅಪಾರ ಪ್ರಮಾಣದ ನೀರು ಸಂಗ್ರಹಗೊಂಡು ವಾಹನ ಸಂಚಾರಕ್ಕೆ ಅಡ್ಡಿ. * ಕೆಂಪೇಗೌಡ ಕೆಳಸೇತುವೆಯಲ್ಲಿ ನೀರು ನಿಂತಿದ್ದರಿಂದ ವಿಜಿನಾಪುರ ಕಡೆಗೆ ತೆರಳುವ ವಾಹನಗಳು ಪರ್ಯಾಯ ಮಾರ್ಗದಲ್ಲಿ ಚಲಿಸಿದವು. * ಪಣತ್ತೂರು ರೈಲ್ವೆ ಕೆಳಸೇತುವೆಯಲ್ಲಿ ನೀರು ನಿಂತು ಸಮಸ್ಯೆ. * ಜಯಮಹಲ್‌ ರಸ್ತೆಯಲ್ಲಿ ಹೊಳೆಯಂತೆ ನೀರು ಹರಿಯಿತು.

ಜಲಪಾತದಂತೆ ಧುಮ್ಮಿಕ್ಕಿದ ನೀರು

ಪೀಣ್ಯ ಮೇಲ್ಸೇತುವೆಯ ಅಲ್ಲಲ್ಲಿ ಜಲಪಾತದಂತೆ ನೀರು ಧುಮ್ಮಿಕ್ಕಿತು. ಮೇಲ್ಸೇತುವೆ ಕೆಳಗಿನ ರಸ್ತೆಯಲ್ಲಿ ತೆರಳುತ್ತಿದ್ದ ಕಾರು ಬಸ್‌ಗಳ ಮೇಲೆ ಹಾಗೂ ಬೈಕ್‌ ಸವಾರರ ಮೇಲೆ ನೀರು ಅಪ್ಪಳಿಸಿತು. ನಗರದ ಬಹುತೇಕ ಮೇಲ್ಸೇತುವೆಗಳ ಜಾಯಿಂಟ್‌ಗಳ ಸ್ಥಳಗಳಿಂದ ನೀರು ಜಲಪಾತದಂತೆ ಸುರಿದು ವಾಹನ ಸವಾರರಿಗೆ ಸಮಸ್ಯೆ ಉಂಟು ಮಾಡಿತು. ಮೆಟ್ರೊ ಮಾರ್ಗದ ಕೆಳಭಾಗದಲ್ಲೂ ಇಂತಹದ್ದೇ ಸಮಸ್ಯೆಯಿಂದ ಜನರು ಸಂಕಷ್ಟಕ್ಕೆ ಒಳಗಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT