ಭಾನುವಾರ, ಸೆಪ್ಟೆಂಬರ್ 25, 2022
29 °C
ವೈಟ್‌ಫೀಲ್ಡ್: ಬೆಸ್ಕಾಂ ವಿರುದ್ಧ ಎಫ್‌ಐಆರ್ ದಾಖಲು

ಮಳೆ: ವಿದ್ಯುತ್ ತಗುಲಿ ಯುವತಿ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ನಗರದ ವೈಟ್‌ಫೀಲ್ಡ್‌ನಲ್ಲಿ ಸೋಮವಾರ ರಾತ್ರಿ ಧಾರಾಕಾರ ಮಳೆ ಸುರಿಯುವ ವೇಳೆ ವಿದ್ಯುತ್ ತಗುಲಿ ಅಖಿಲಾ (23) ಎಂಬುವರು ಮೃತಪಟ್ಟಿದ್ದು, ನಿರ್ಲಕ್ಷ್ಯ ವಹಿಸಿದ್ದ ಆರೋಪದಡಿ ಬೆಸ್ಕಾಂ ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

‘ಸಿದ್ದಾಪುರದ 5ನೇ ಅಡ್ಡರಸ್ತೆಯ ನಿವಾಸಿ ಅಖಿಲಾ, ಬಿ.ಕಾಂ ಪದವೀಧರೆ. ಬಿ.ಎಂ.ಎಲ್ ಬಡಾವಣೆಯಲ್ಲಿರುವ ತ್ರಿಷನ್ ಸಂಗೀತ ಸಂಸ್ಥೆಯ ಆಡಳಿತ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು. ಸೋಮವಾರ ರಾತ್ರಿ ಕೆಲಸ ಮುಗಿಸಿ ದ್ವಿಚಕ್ರ ವಾಹನದಲ್ಲಿ ಮನೆಗೆ ತೆರಳುತ್ತಿದ್ದಾಗ ಈ ಅವಘಡ ಸಂಭವಿಸಿದೆ’ ಎಂದು ವೈಟ್‌ಫೀಲ್ಡ್ ಠಾಣೆ ಪೊಲೀಸರು ಹೇಳಿದರು.

‘ಮಗಳು ಅಖಿಲಾ ಸಾವಿಗೆ ಬೆಸ್ಕಾಂ ಅಧಿಕಾರಿಗಳ ಬೇಜವಾಬ್ದಾರಿ ಹಾಗೂ ನಿರ್ಲಕ್ಷ್ಯ ಕಾರಣವೆಂದು ತಂದೆ ಸೋಮ ಶೇಖರ್ ದೂರು ನೀಡಿದ್ದಾರೆ. ಬೆಸ್ಕಾಂ ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ. ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿ, ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ. ಅಧಿಕಾರಿಗಳಿಗೆ ನೋಟಿಸ್ ನೀಡಿ ವಿಚಾ ರಣೆ ನಡೆಸಬೇಕಿದೆ’ ಎಂದು ತಿಳಿಸಿದರು.

ಉರುಳಿಬಿದ್ದಿದ್ದ ಬೈಕ್: ‘ಕಚೇರಿ ಕೆಲಸ ಮುಗಿಸಿದ್ದ ಅಖಿಲಾ, ದ್ವಿಚಕ್ರ ವಾಹನದಲ್ಲಿ ವರ್ತೂರು ಮುಖ್ಯರಸ್ತೆ ಮೂಲಕ ಸಿದ್ದಾಪುರದ ಮನೆಗೆ ಹೊರಟಿ ದ್ದರು. ಮಯೂರ ಬೇಕರಿ ಬಳಿ ರಸ್ತೆಯಲ್ಲಿ ನೀರು ಹರಿಯುತ್ತಿತ್ತು. ಅದರಲ್ಲೇ ವಾಹನ ಚಲಾಯಿಸಿದ್ದರು’ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದರು.

‘ನೀರಿನಲ್ಲಿ ಮುಂದಕ್ಕೆ ಹೋಗ ಲಾಗದೇ ದ್ವಿಚಕ್ರ ವಾಹನ ಉರುಳಿಬಿದ್ದಿತ್ತು. ನೀರಿನಲ್ಲಿ ಬಿದ್ದ ಅಖಿಲಾ, ರಕ್ಷಣೆಗಾಗಿ ರಸ್ತೆ ನಡುವೆ ಇದ್ದ ಕಂಬವೊಂದನ್ನು ಹಿಡಿದುಕೊಂಡಿದ್ದರು. ಆ ಕಂಬದಲ್ಲಿ ವಿದ್ಯುತ್ ತಂತಿಗಳು ತುಂಡರಿಸಿದ್ದವು. ಕಂಬ ಸ್ಪರ್ಶಿಸುತ್ತಿದ್ದಂತೆ ವಿದ್ಯುತ್ ತಗುಲಿ ಅಖಿಲಾ ಕುಸಿದು ಬಿದ್ದಿದ್ದರು.’

‘ರಕ್ಷಣೆಗೆ ಹೋಗಿದ್ದ ಸ್ಥಳೀಯರು, ಅಖಿಲಾ ಅವರನ್ನು ಜೀವಿಕಾ ಆಸ್ಪತ್ರೆಗೆ ಕರೆದೊಯ್ದಿದ್ದರು. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ್ ಆಸ್ಪತ್ರೆಗೂ ಕರೆದೊಯ್ಯಲಾಗಿತ್ತು. ಆದರೆ, ಅಷ್ಟರಲ್ಲೇ ಅಖಿಲಾ ಮೃತಪಟ್ಟಿದ್ದರು’ ಎಂದು ತಿಳಿಸಿದರು.

ಮಗಳಿಗಾಗಿ ಕಾಯುತ್ತಿದ್ದ ತಂದೆ: ‘ಅಖಿಲಾ ನಿತ್ಯವೂ ಕೆಲಸ ಮುಗಿಸಿ ರಾತ್ರಿ 8.30ಕ್ಕೆ ಮನೆಗೆ ಬರುತ್ತಿದ್ದರು. ಆದರೆ, ಸೋಮವಾರ ರಾತ್ರಿ ನಿಗದಿತ ಸಮಯಕ್ಕೆ ಮನೆಗೆ ಬಂದಿರಲಿಲ್ಲ. ಮಳೆ ಇರುವುದರಿಂದ ತಡವಾಗಿ ಬರಬಹುದೆಂದು ಕಾಯುತ್ತಿದ್ದೆ. ಘಟನಾ ಸ್ಥಳದಲ್ಲಿದ್ದ ವ್ಯಕ್ತಿಯೊಬ್ಬರು ಕರೆ ಮಾಡಿ ವಿಷಯ ತಿಳಿಸಿದರು. ಆಸ್ಪತ್ರೆಗೆ ಹೋಗಿ ನೋಡುವಷ್ಟರಲ್ಲೇ ಮಗಳು ಮೃತಪಟ್ಟಿದ್ದಳು’ ಎಂದು ತಂದೆ ಸೋಮಶೇಖರ್ ಅಳಲು ತೋಡಿಕೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು