ಶನಿವಾರ, ಮೇ 28, 2022
26 °C

ಮುಂದುವರಿದ ಮಳೆ: ಅಪಾರ್ಟ್‌ಮೆಂಟ್‌ಗೆ ನುಗ್ಗಿದ ನೀರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ನಗರದಲ್ಲಿ ಮೋಡ ಕವಿದ ವಾತಾವರಣ ಮುಂದುವರಿದಿದ್ದು, ಗುರುವಾರವೂ ಹಲವೆಡೆ ಮಳೆ ಆಯಿತು. ಸರ್ಜಾಪುರದಲ್ಲಿ ಅಪಾರ್ಟ್‌ಮೆಂಟ್ ಸಮುಚ್ಚಯವೊಂದಕ್ಕೆ ನೀರು ನುಗ್ಗಿತ್ತು.

ಕೆಲದಿನಗಳಿಂದ ಬಿಡುವು ಕೊಡುತ್ತಲೇ ಸುರಿಯುತ್ತಿತ್ತು, ಅದರ ಜೊತೆ ಜೋರು ಗಾಳಿಯೂ ಬೀಸುತ್ತಿದೆ. ಮಂಗಳವಾರ ಬೆಳಿಗ್ಗೆ ಹಲವೆಡೆ ಬಿಸಿಲು ಕಂಡುಬಂತು. ಮಧ್ಯಾಹ್ನದ ನಂತರ, ಮೋಡ ಕವಿದ ವಾತಾವರಣವೂ ಹೆಚ್ಚಾಯಿತು.

ನಂದಿನಿ ಲೇಔಟ್, ಮಹಾಲಕ್ಷ್ಮಿ ಲೇಔಟ್, ರಾಜಾಜಿನಗರ, ಬಸವೇಶ್ವರನಗರ, ಕುರುಬರಹಳ್ಳಿ ಹಾಗೂ ಸುತ್ತಮುತ್ತ ಸ್ಥಳಗಳಲ್ಲಿ ಮಧ್ಯಾಹ್ನವೇ ಜೋರು ಮಳೆ ಸುರಿಯಿತು.

ಗಾಂಧಿನಗರ, ಮೆಜೆಸ್ಟಿಕ್, ಎಂ.ಜಿ. ರಸ್ತೆ, ಶಿವಾಜಿನಗರ, ಅಶೋಕನಗರ, ಕೋರಮಂಗಲ, ಆಡುಗೋಡಿ, ಹೆಬ್ಬಾಳ ಹಾಗೂ ಸುತ್ತಮತ್ತಲೂ ಸಂಜೆ ಮಳೆ ಆಯಿತು.

ಮೆಜೆಸ್ಟಿಕ್ ರೈಲ್ವೆ ಕೆಳ ಸೇತುವೆ, ಶಿವಾನಂದ ವೃತ್ತ, ಓಕಳಿಪುರ ಕೆಳ ಸೇತುವೆಯಲ್ಲಿ ನೀರು ಹರಿಯಿತು. ಅದರಲ್ಲೇ ವಾಹನಗಳು ಸಂಚರಿಸಿದವು.

ಸಿಲ್ಕ್‌ ಬೋರ್ಡ್ ವೃತ್ತ, ಆರ್‌ಎಂವಿ 2ನೇ ಹಂತದ ಹಾಗೂ ಇತರೆ ಪ್ರಮುಖ ರಸ್ತೆಗಳಲ್ಲಿ ನೀರು ಹೊಳೆಯಂತೆ ಹರಿಯಿತು. ಗಾಂಧಿನಗರ, ರಾಜಾಜಿನಗರ, ವಿಜಯನಗರದ ಕೆಲವೆಡೆ ಮರದ ಕೊಂಬೆಗಳು ನೆಲಕ್ಕುರುಳಿದ್ದವು.

ಸರ್ಜಾಪುರ ಬಳಿಯ ಅಪಾರ್ಟ್‌ಮೆಂಟ್ ಸಮುಚ್ಚಯವೊಂದಕ್ಕೆ ನೀರು ನುಗ್ಗಿದ್ದರಿಂದ ನಿವಾಸಿಗಳು ತೊಂದರೆ ಅನುಭವಿಸಿದರು. ಹೊರಗೆ ಬರಲಾರದೇ ಫ್ಲ್ಯಾಟ್‌ಗಳಲ್ಲಿ ಸಿಲುಕಿದ್ದರು. ಬಿಬಿಎಂಪಿ, ಅಗ್ನಿಶಾಮಕ ದಳದ ಸಿಬ್ಬಂದಿ ಜಂಟಿ ಕಾರ್ಯಾಚರಣೆ ನಡೆಸಿ ನೀರು ತೆರವು ಮಾಡಿದರು.

ಬೊಮ್ಮನಹಳ್ಳಿ, ಮಹದೇವಪುರ, ಯಲಹಂಕ ಹಾಗೂ ಸುತ್ತಮುತ್ತ ಸ್ಥಳಗಳಲ್ಲಿ 7 ಸೆಂ.ಮೀ ಮಳೆ ಆಗಿರುವುದಾಗಿ ಹವಾಮಾನ ಇಲಾಖೆ ತಿಳಿಸಿದೆ.

ನೆಲಕ್ಕುರುಳಿದ ವಿದ್ಯುತ್ ಕಂಬಗಳು: ಜಿ.ಪಿ.ನಗರ 8ನೇ ಹಂತದಲ್ಲಿ ಬನ್ನೇರುಘಟ್ಟ ಮತ್ತು ಕೊತ್ತನೂರು ದಿಣ್ಣೆ ಮುಖ್ಯರಸ್ತೆಯಲ್ಲಿ ಆರು ವಿದ್ಯುತ್ ಕಂಬಗಳು ನೆಲಕ್ಕುರುಳಿದ್ದವು. ಟ್ರಾನ್ಸ್‌ಫಾರ್ಮರ್‌, ಪಕ್ಕದಲ್ಲಿ ನಿಲ್ಲಿಸಿದ್ದ ಕಾರು ಹಾಗೂ ಆಟೊ ಮೇಲೆ ಮೇ ತೆಂಗಿನ ಮರವೊಂದು ಬಿದ್ದಿತ್ತು. ಇದರಿಂದಾಗಿ ವಿದ್ಯುತ್ ವ್ಯತ್ಯಯ ಉಂಟಾಯಿತು. ಬೆಸ್ಕಾಂ ಸಿಬ್ಬಂದಿ ದುರಸ್ತಿ ಕಾರ್ಯದಲ್ಲಿ ತೊಡಗಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.