ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆಗಾಗಿ ಮಹದೇಶ್ವರನ ಪರವು

Last Updated 22 ಮೇ 2019, 19:48 IST
ಅಕ್ಷರ ಗಾತ್ರ

ಹೊಂಗೆ ಮರದ ಎಲೆಗಳಿಂದ ನಿರ್ಮಿಸಿದ ಹಸಿರು ಚಪ್ಪರ, ಐದು ಬೆನಕ ವಿಗ್ರಹ ಸ್ಥಾಪನೆ, ರಾಶಿ ಹಾಕಿದ ದವಸ ಧಾನ್ಯಗಳು, ಹೊಸ ಬಟ್ಟೆ ತೊಟ್ಟು ಸಂಭ್ರಮಿಸಿದ ಚಿಣ್ಣರು, ಗ್ರಾಮದ ಹಿರಿಯರ ಸಂಭ್ರಮ, ಮನೆಗಳ ಮುಂದೆ ಅರಳಿದ ರಂಗೋಲಿ, ಇವೆಲ್ಲವು ದಾಸನಪುರ ಹೋಬಳಿಯ ಗೋಪಾಲಪುರ ಗ್ರಾಮದ ಮಹದೇಶ್ವರ ಪರವಿನಲ್ಲಿ ಮೇಳೈಸಿದವು.

ಮಳೆ, ಬೆಳೆಯಿಲ್ಲದೆ ಕಂಗಾಲಾಗಿರುವ ರೈತರಿಗೆ ಈ ಪರವು ಆಶಾದಾಯಕವಾಗಿದೆ ಎಂದು ಊರಿನ ಮುಖಂಡರು ಹೇಳಿದರು.

ಗ್ರಾಮಸ್ಥರಿಂದ ಸಂಗ್ರಹಿಸಿದ ದವಸ ಧಾನ್ಯಗಳಿಂದ ಅನ್ನಸಂತರ್ಪಣೆ ಆಯೋಜಿಸಲಾಗಿತ್ತು. ರಾಗಿ ಮುದ್ದೆ, ಕಾಳುಹುಳಿ ಸಾರು, ಪಾಯಸಗಳ ರುಚಿಯನ್ನು ಗ್ರಾಮಸ್ಥರು ಸವಿದರು. ಬೆಳಿಗ್ಗೆ ಗ್ರಾಮ ದೇವತೆಗಳಿಗೆ ಪೂಜೆ ಸಲ್ಲಿಸಿ, ಆಂಜನೇಯ ಸ್ವಾಮಿಯ ಪಲ್ಲಕ್ಕಿಯನ್ನು ಹೊತ್ತು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಮೆರವಣಿಗೆ ದೇವರಿಗೆ ಗ್ರಾಮಸ್ಥರು ಭಕ್ತಿ ಭಾವಗಳಿಂದ ಹೂ, ಬಾಳೆಹಣ್ಣು, ತೆಂಗಿನಕಾಯಿಯನ್ನು ಸರ್ಮಪಿಸಿದರು.

ಬಳಿಕ ಗ್ರಾಮದ ಅರಳಿಮರದ ಬುಡದಲ್ಲಿ ಮಹದೇಶ್ವರ ಸ್ವಾಮಿಯನ್ನು ಪ್ರತಿಷ್ಠಾಪಿಸಿ ಗ್ರಾಮದ ಸುಭಿಕ್ಷೆಗಾಗಿ ಪ್ರಾರ್ಥನೆ ಸಲ್ಲಿಸಲಾಯಿತು. ಕುಕ್ಕನಹಳ್ಳಿ, ತೋಟಗೆರೆ, ಹುಸ್ಕೂರು, ಗುಡ್ಡದಹಳ್ಳಿ, ಹೆಸರಘಟ್ಟ ಗ್ರಾಮಸ್ಥರು ಈ ಪರವಿನಲ್ಲಿ ಭಾಗವಹಿಸಿ ಮಳೆಗಾಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ಸಂಜೆ ಪಲ್ಲಕ್ಕಿಯನ್ನು ಹೊತ್ತು ಆಂಜನೇಯ ಸ್ವಾಮಿಯ ಮೆರವಣಿಗೆ ಮಾಡಿ ಗ್ರಾಮಸ್ಥರಿಂದ ಪೂಜೆ ಸ್ವೀಕರಿಸಿ, ಗುಡಿಗೆ ದೇವರನ್ನು ಸೇರಿಸಲಾಯಿತ್ತು. ಆರಳಿಮರದ ಬುಡದಲ್ಲಿ ನಿರ್ಮಿಸಿದ ಹಸಿರು ಚಪ್ಪರದಲ್ಲಿದ್ದ ಐದು ಬೆನಕಗಳನ್ನು ಗ್ರಾಮದ ಮಹಿಳೆಯರು ಒಂದು ವಾರ ಬಿಟ್ಟು ಮನೆಗಳಿಗೆ ತೆಗೆದುಕೊಂಡು ಹೋಗುತ್ತಾರೆ. ಈ ಬೆನಕಗಳನ್ನು ಯಾರು ಬೇಕಾದರೂ ತೆಗೆದುಕೊಂಡು ಹೋಗಬಹುದು. ಬೆನಕವನ್ನು ಪೂಜಿಸಿದರೆ ಮನೆಗೆ ಶ್ರೇಯಸ್ಸು ಅಗುತ್ತದೆ ಎಂಬ ನಂಬಿಕೆ ಗ್ರಾಮಸ್ಥರಲ್ಲಿದೆ.

‘ಮಹದೇಶ್ವರ ಪರವು ಮಾಡುವುದರಿಂದ ಗ್ರಾಮದ ದನಕರುಗಳು, ಮಕ್ಕಳಿಗೆ ಶ್ರೇಯಸ್ಸು ಆಗುತ್ತದೆ. ಬೆವರು ಹರಿಸಿ ವರ್ಷ ಪೂರ್ತಿ ದುಡಿದ ರೈತರ ಬೆಳೆ ಕ್ಷೇಮವಾಗಿ ಕೈಗೆ ಸಿಗಲಿ, ಮಳೆಯಾಗಲಿ ಎನ್ನುವ ಆಶಯವು ಇದರಲ್ಲಿದೆ’ ಎನ್ನುತ್ತಾರೆ ಗ್ರಾಮದ ನಿವಾಸಿ ಶ್ಯಾಮೇಗೌಡ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT