ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೆ ಮೊಳಗಲಿದೆ ಬುಲ್ಡೋಜರ್‌ ಸದ್ದು: ಕೈಸೇರಿದೆ ರಾಜಕಾಲುವೆ ಗಡಿ ಗುರುತಿನ ವರದಿ

29ರಿಂದ ಒತ್ತುವರಿ ತೆರವು ಪುನರಾರಂಭ
Last Updated 21 ಅಕ್ಟೋಬರ್ 2018, 20:00 IST
ಅಕ್ಷರ ಗಾತ್ರ

ಬೆಂಗಳೂರು: ಎರಡು ವರ್ಷಗಳ ಹಿಂದೆ ಬಲು ಅಬ್ಬರದಿಂದ ಶುರುವಾಗಿ ಅಷ್ಟೇ ವೇಗದಲ್ಲಿ ತಣ್ಣಗಾಗಿದ್ದ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆಗೆ ಕೊನೆಗೂ ಮುಹೂರ್ತ ಕೂಡಿಬಂದಿದೆ. ತಿಂಗಳಾಂತ್ಯದಲ್ಲಿ ಬುಲ್ಡೋಜರ್‌ಗಳ ಸದ್ದು ಮತ್ತೆ ಮೊಳಗಲಿದೆ.

‘ಕಂದಾಯ ಇಲಾಖೆಯಿಂದ ಒತ್ತುವರಿ ಪ್ರಕರಣಗಳ ಪೂರ್ಣ ಮಾಹಿತಿ ಬಂದಿದೆ. 29ರಿಂದ ತೆರವು ಕಾರ್ಯಾಚರಣೆ ಆರಂಭಿಸುತ್ತೇವೆ’ ಎಂದು ಬಿಬಿಎಂಪಿ ಆಯುಕ್ತ ಎನ್‌. ಮಂಜುನಾಥ್‌ ಪ್ರಸಾದ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ರಾಜಕಾಲುವೆ ಒತ್ತುವರಿ ತೆರವಿನ ಬಗ್ಗೆ ಮುಖ್ಯ ಕಾರ್ಯದರ್ಶಿ ವಿಜಯ್‌ ಭಾಸ್ಕರ್‌ ಅವರು ಇತ್ತೀಚೆಗೆ ಸಭೆ ನಡೆಸಿದ್ದರು. ಬಿಬಿಎಂಪಿ ಆಯುಕ್ತರು, ನಗರ ಜಿಲ್ಲಾಧಿಕಾರಿ ಹಾಗೂ ಭೂದಾಖಲೆಗಳ
ನಿರ್ದೇಶನಾಲಯದ ಜಂಟಿ ನಿರ್ದೇಶಕರು ಈ ಸಭೆಯಲ್ಲಿ ಭಾಗವಹಿಸಿದ್ದರು. ಕಾಲಮಿತಿಯಲ್ಲಿ ಗಡಿ ಗುರುತಿಸುವ ಕೆಲಸ ಮಾಡಬೇಕು ಎಂದು ಮುಖ್ಯ ಕಾರ್ಯದರ್ಶಿ ಸೂಚನೆ ನೀಡಿದ್ದರು.

‌‘ತೆರವು ಮಾಡಬೇಕಾದ ಕಡೆ ಕಂದಾಯ ಇಲಾಖೆಯವರು ಗಡಿ ಗುರುತು ಮಾಡಿಕೊಡಬೇಕು ಎಂದು ನಾನು ಕೇಳಿಕೊಂಡಿದ್ದೆ. ಅದರಂತೆ ಸಿದ್ಧಪಡಿಸಲಾದ ವರದಿ ಕೈಸೇರಿದೆ’ ಎಂದು ಆಯುಕ್ತರು ಹೇಳಿದರು.

‘ಹಿಂದೆ ಸಮೀಕ್ಷೆ ನಡೆಸಿದ ಸರ್ವೇಯರ್‌ಗಳು ವರ್ಗವಾಗಿದ್ದರು. ಹಾಗಾಗಿ ನಿರ್ದಿಷ್ಟ ಅವಧಿಗೆ ಅವರನ್ನು ಮತ್ತೆ ನಗರಕ್ಕೆ ನಿಯೋಜನೆ ಮಾಡಿ ಗಡಿ ಗುರುತಿಸುವಂತೆ ಮುಖ್ಯ ಕಾರ್ಯದರ್ಶಿ ಸೂಚನೆ ನೀಡಿದ್ದರು. ಈಗ ಗಡಿ ಗುರುತು ಮಾಡಿದ ನಕ್ಷೆ ಸಿಕ್ಕಿದೆ. ಒತ್ತುವರಿ ತೆರವು ಕಾರ್ಯಾಚರಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ’ ಎಂದು ಬಿಬಿಎಂಪಿ ಬೃಹತ್‌ ನೀರುಗಾಲುವೆ ವಿಭಾಗದ ಎಂಜಿನಿಯರ್‌ಗಳು ಮಾಹಿತಿ ನೀಡಿದರು.

2016ರ ಜುಲೈ ತಿಂಗಳಲ್ಲಿ ಸುರಿದ ಮಳೆಗೆ ಬೊಮ್ಮನಹಳ್ಳಿ ವಲಯದ ಹಲವು ಪ್ರದೇಶಗಳು ಜಲಾವೃತವಾಗಿದ್ದವು. ಮಳೆನೀರು ಹರಿದುಹೋಗಲು ದಾರಿಯೇ ಇಲ್ಲದೆ ರಸ್ತೆಗಳೆಲ್ಲ ನದಿಯ ರೂಪ ತಾಳಿದ್ದವು.

‘ರಾಜಕಾಲುವೆಗಳು ಒತ್ತುವರಿಯಾಗಿದ್ದೇ ಸಮಸ್ಯೆಗೆ ಕಾರಣ’ ಎಂಬ ಖಚಿತ ಅಭಿಪ್ರಾಯಕ್ಕೆ ಬಂದಿದ್ದ ಬಿಬಿಎಂಪಿ, ಒತ್ತುವರಿ ತೆರವು ಕಾರ್ಯಾಚರಣೆಯನ್ನು ಆಗಸ್ಟ್‌ ತಿಂಗಳಲ್ಲಿ ಆರಂಭಿಸಿತ್ತು.

ಕಾರ್ಯಾಚರಣೆ ಆರಂಭಿಸಿದ ಮೊದಲ ದಿನ ಅವನಿ ಶೃಂಗೇರಿನಗರದಲ್ಲಿ ಎರಡು ಮನೆಗಳನ್ನು ಒಡೆದು ಹಾಕಲಾಗಿತ್ತು. ಬಳಿಕ ಕೋಡಿಚಿಕ್ಕನಹಳ್ಳಿ, ಹರಲೂರು, ಹಲಗೇವಡೇರಹಳ್ಳಿ, ದೊಡ್ಡಬೊಮ್ಮಸಂದ್ರ ಪ್ರದೇಶಗಳ ರಾಜಕಾಲುವೆಗಳ ಮೇಲೂ ಬುಲ್ಡೋಜರ್‌ಗಳು ಅಬ್ಬರಿಸಿದ್ದವು. 3–4 ದಿನಗಳಲ್ಲಿ ಅವುಗಳು ಮೌನವಾಗಿದ್ದವು.

ಬಡವರ ಮನೆ ಒಡೆಯುವಾಗ ಬಿಬಿಎಂಪಿಗೆ ಯಾವ ಸಮಸ್ಯೆಯೂ ಎದುರಾಗಲಿಲ್ಲ. ಅದೇ ಮಾಲ್‌ಗಳು, ಆಸ್ಪತ್ರೆಗಳು, ದೊಡ್ಡವರ ಮನೆಗಳು ರಾಜಕಾಲುವೆ ಮೇಲೆ ಗೋಚರಿಸಲು ಶುರುವಾದಾಗ ಮತ್ತೊಮ್ಮೆ ಸರ್ವೆ ನಡೆಸುವ ಜರೂರು ಕಾಡತೊಡಗಿತು. ಬುಲ್ಡೋಜರ್‌ಗಳು ಸಹ ಸ್ಥಳದಿಂದ ಮಾಯವಾದವು ಎಂದು ಸಂತ್ರಸ್ತರು ಆಕ್ರೋಶ ವ್ಯಕ್ತಪಡಿಸಿದ್ದರು.

ಸರ್ವೆಯರ್‌ಗಳನ್ನು ಒದಗಿಸುವಂತೆ ಬಿಬಿಎಂಪಿಯಿಂದ ಪತ್ರಗಳು ಹೊರಟರೆ, ಅಗತ್ಯ ಸಿಬ್ಬಂದಿಯನ್ನು ಹೊಂದಿಸಲು ಭೂದಾಖಲೆಗಳ ಇಲಾಖೆಯ ಹಿರಿಯ ಅಧಿಕಾರಿಗಳು ಕಾಲಾವಕಾಶ ಕೋರಿ ಮರುಪತ್ರ ಬರೆಯತೊಡಗಿದರು. ಇದರಿಂದ ಕಾಲಹರಣವಾಗಿತ್ತೆ ಹೊರತು ಕಾರ್ಯಾಚರಣೆ ಪುನರಾರಂಭಕ್ಕೆ ದಾರಿ ಆಗಿರಲಿಲ್ಲ.

‘ರಾಜಕಾಲುವೆಗಳ ನಿರ್ವಹಣೆಗೆ ಇದುವರೆಗೆ ನಿರ್ದಿಷ್ಟ ವ್ಯವಸ್ಥೆ ಇರಲಿಲ್ಲ. ಪದೇ ಪದೇ ಪ್ರವಾಹ ಕಾಣಿಸಿಕೊಳ್ಳುವ ಸೂಕ್ಷ್ಮ ಪ್ರದೇಶಗಳ ಕಡೆಗೆ ಮಾತ್ರ ಹೆಚ್ಚಿನ ನಿಗಾ ವಹಿಸಲಾಗುತ್ತಿತ್ತು. ಕಾಲುವೆಯನ್ನು ಸ್ವಚ್ಛಗೊಳಿಸಿದರೂ ತಿಂಗಳಲ್ಲಿ ಮತ್ತೆ ಕಸ ತುಂಬಿಕೊಳ್ಳುತ್ತಿತ್ತು. ಹೀಗಾಗಿ ಸಮಸ್ಯೆ ಬಿಗಡಾಯಿಸಿತ್ತು’ ಎಂದು ಬಿಬಿಎಂಪಿ ಎಂಜಿನಿಯರ್‌ಗಳು ಹೇಳಿದರು.

‘ಇನ್ನುಮುಂದೆ ನಗರದ ಎಲ್ಲ ರಾಜಕಾಲುವೆಗಳನ್ನು ವಾರ್ಷಿಕ ನಿರ್ವಹಣೆಯ ವ್ಯಾಪ್ತಿಗೆ ತರಲಿದ್ದೇವೆ. ಅದಕ್ಕಾಗಿ ಮುಂದಿನ ವಾರವೇ ಟೆಂಡರ್‌ ಕರೆಯಲಿದ್ದೇವೆ’ ಎಂದು ತಿಳಿಸಿದರು.

ರಾಜಕಾಲುವೆ ನಿರ್ವಹಣೆಗೆ ಯೋಜನೆ

ಬೆಂಗಳೂರು: ಮಳೆ ನೀರು ಕಾಲುವೆಗಳ ವಾರ್ಷಿಕ ನಿರ್ವಹಣೆಗೆ ಬಿಬಿಎಂಪಿ ಕ್ರಿಯಾ ಯೋಜನೆ ರೂಪಿಸಿದೆ. ಈ ಯೋಜನೆ ಮುಂದಿನ ವರ್ಷದಿಂದ ಕಾರ್ಯಾರಂಭ ಮಾಡಲಿದೆ. ಕಾಲುವೆಗಳ ಹೂಳೆತ್ತುವುದು, ಕಸ ತೆಗೆಯುವುದು, ನೀರು ಹರಿವಿಗಿರುವ ಅಡ್ಡಿ ಆತಂಕಗಳನ್ನು ನಿವಾರಿಸುವುದು ಈ ಕ್ರಿಯಾ ಯೋಜನೆಯಲ್ಲಿ ಸೇರಿದೆ. ಕಾಲುವೆಗಳ ಜೋಡಣೆ ಪ್ರದೇಶಗಳನ್ನು ಭೂ-ನಿರ್ದೇಶಾಂಕಗಳ ಮೂಲಕ ಜೋಡಿಸಿ ನಿರ್ವಹಣೆಗಾಗಿ ಗುತ್ತಿಗೆದಾರರಿಗೆ ಟೆಂಡರು ನೀಡಲಾಗುತ್ತದೆ.

ಗುತ್ತಿಗೆದಾರರ ಕೆಲಸ

ಕಾಲುವೆ ಸ್ವಚ್ಛಗೊಳಿಸುವುದು, ಪ್ರತಿದಿನ ತ್ಯಾಜ್ಯ ತೆರವು ಮಾಡುವುದು, ಕಾಲುವೆಗೆ ಕಸ ಎಸೆಯುವುದನ್ನು ತಡೆಯುವುದು, ಕಾಲುವೆ ಸಂಪರ್ಕಿಸುವ ಕಿರುಗಾಲುವೆ, ಕಚ್ಚಾ ಕಾಲುವೆ ನಿರ್ಮಾಣ. ಕಾಂಕ್ರಿಟ್‌ ತಡೆಗೋಡೆ ನಿರ್ಮಾಣ, ನಿರ್ವಹಣೆ

* 842 ಕಿಲೋಮೀಟರ್‌ – ನಗರದಲ್ಲಿ ಹಾದು ಹೋಗಿರುವ ಎಲ್ಲ ಕಾಲುವೆಗಳ ಒಟ್ಟು ಒದ್ದ

* 400 ಕಿಲೋಮೀಟರ್‌ – ಸುಸ್ಥಿತಿಯಲ್ಲಿರುವ ಕಾಲುವೆಗಳ ಉದ್ದ

* ₹7 ಲಕ್ಷ –(ಕಾಲುವೆಯ ಪ್ರತಿ ಕಿಲೋಮೀಟರ್‌ಗೆ ತಗಲುವ ವಾರ್ಷಿಕ ನಿರ್ವಹಣಾ ವೆಚ್ಚ. ಕಾಲುವೆಯ ಉದ್ದ, ಅಗಲ ಹೆಚ್ಚಾದಂತೆ ಇದು ವ್ಯತ್ಯಯವಾಗುತ್ತದೆ)

‌* ₹28 ಕೋಟಿ – ಕಾಲುವೆಗಳ ವಾರ್ಷಿಕ ನಿರ್ವಹಣೆಗೆ ಆಗಲಿರುವ ಒಟ್ಟು ವೆಚ್ಚ

ಆಗಬೇಕಾಗಿರುವುದು

ಪೂರ್ಣ ಪ್ರಮಾಣದ ಸಮೀಕ್ಷೆ, ಮ್ಯಾನ್‌ಹೋಲ್‌, ಪೈಪ್‌ಲೈನ್‌, ಕೇಬಲ್‌ ಅಡೆತಡೆಗಳ ನಿವಾರಣೆ

ಸಮಸ್ಯೆ

ಮಳೆ ನೀರು ಕಾಲುವೆ ವ್ಯಾಪಕವಾಗಿ ಒತ್ತುವರಿಯಾಗಿರುವುದು

* 1,988 – ನಗರ ಜಿಲ್ಲೆಯಲ್ಲಿ ಮಳೆ ನೀರು ಕಾಲುವೆ ಒತ್ತುವರಿಯಾದ ಪ್ರಕರಣಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT