ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಬೈನಲ್ಲೇ ಕುಳಿತು ಕಳ್ಳನನ್ನು ಹಿಡಿದರು!

ರಾಜಾಜಿನಗರದ ಎಟಿಎಂ ಯಂತ್ರಕ್ಕೆ ಸ್ಕಿಮ್ಮರ್ ಅಳವಡಿಸಿದ್ದ ಸ್ನೇಹಿತರು
Last Updated 16 ನವೆಂಬರ್ 2018, 19:03 IST
ಅಕ್ಷರ ಗಾತ್ರ

ಬೆಂಗಳೂರು: ಎಟಿಎಂ ಯಂತ್ರಕ್ಕೆ ಸ್ಕಿಮ್ಮಿಂಗ್ ಉಪಕರಣ ಹಾಗೂ ಮೈಕ್ರೊ ಕ್ಯಾಮೆರಾ ಅಳವಡಿಸಿದ್ದ ಉಗಾಂಡದ ನೈರೋ ಇಸ್ಮಾಯಿಲ್ ಎಂಬಾತನನ್ನು ಸೆಕ್ಯುರಿಟಿ ಏಜೆನ್ಸಿಯವರೇ ಹಿಡಿದು ರಾಜಾಜಿನಗರ ಪೊಲೀಸರ ವಶಕ್ಕೆ ಕೊಟ್ಟಿದ್ದಾರೆ.

ನೈರೋ ಹಾಗೂ ಆತನ ಸ್ನೇಹಿತ ಜೇಮ್ಸ್‌ ರಿಟ್ಟೆ‌, ಆರು ತಿಂಗಳ ಹಿಂದೆ ನಗರಕ್ಕೆ ಬಂದು ಬಾಬುಸಾಪಾಳ್ಯದಲ್ಲಿ ನೆಲೆಸಿದ್ದರು. ಗ್ರಾಹಕರ ಕ್ರೆಡಿಟ್/ಡೆಬಿಟ್ ಕಾರ್ಡ್‌ಗಳ ವಿವರಗಳನ್ನು ಕದಿಯುವ ಸಲುವಾಗಿ ಗುರುವಾರ ಬೆಳಿಗ್ಗೆ 5.30ರ ಸುಮಾರಿಗೆ ಎಂ.ಕೆ.ಕೆ ರಸ್ತೆಯ ಎಚ್‌ಡಿಎಫ್‌ಸಿ ಬ್ಯಾಂಕ್‌ ಎಟಿಎಂ ಘಟಕಕ್ಕೆ ಬಂದಿದ್ದ ಅವರು, ಯಂತ್ರಕ್ಕೆ ಸ್ಕಿಮ್ಮಿಂಗ್ ಹಾಗೂ ರಹಸ್ಯ ಕ್ಯಾಮೆರಾ ಅಳವಡಿಸಿ ಹೋಗಿದ್ದರು.

ಮುಂಬೈನ ‘ಕ್ಲಿಯರ್ ಸೆಕ್ಯುರಿಟಿ ಸರ್ವಿಸ್’ ಏಜೆನ್ಸಿಯು ಈ ಎಟಿಎಂನ ಭದ್ರತೆಯ ಹೊಣೆಯನ್ನು ಹೊತ್ತಿದ್ದು, ಘಟಕದಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಕ್ಯಾಮೆರಾಗಳನ್ನು ಅಳವಡಿಸಿದೆ. ಏಜೆನ್ಸಿಯ ಮುಖ್ಯ ಕಚೇರಿ ಮುಂಬೈನಲ್ಲಿದ್ದು, ಅಲ್ಲಿಂದಲೇ 24X7 ಮಾದರಿಯಲ್ಲಿ ಕಣ್ಗಾವಲು ಇಟ್ಟಿರುತ್ತದೆ.

ಬೆಳಿಗ್ಗೆ ಇಬ್ಬರು ವಿದೇಶಿ ಪ್ರಜೆಗಳು ಬಂದು ಸ್ಕಿಮ್ಮಿಂಗ್ ಅಳವಡಿಸಿದ್ದನ್ನು ಪರದೆಯಲ್ಲಿ ನೋಡಿದ್ದ ಮುಂಬೈ ಏಜೆನ್ಸಿಯವರು, ತಕ್ಷಣ ಬೆಂಗಳೂರಿನ ‘ಇ–ಸರ್ವೆಲೆನ್ಸ್ ಲೈವ್ ಮಾನಿಟರಿಂಗ್ ಟೀಮ್‌’ನವರಿಗೆ ಮಾಹಿತಿ ರವಾನಿಸಿದ್ದರು. ನಂತರ ಇಲ್ಲಿನ ನೌಕರರು ಘಟಕಕ್ಕೆ ಹೋಗಿ ಯಂತ್ರ ಪರಿಶೀಲಿಸಿದಾಗ ಸ್ಕಿಮ್ಮಿಂಗ್ ಹಾಗೂ ಕ್ಯಾಮೆರಾ ಇರುವುದು ಗೊತ್ತಾಗಿತ್ತು.

ಅವುಗಳನ್ನು ತೆಗೆದುಕೊಂಡು ಹೋಗುವುದಕ್ಕೆ ಆರೋಪಿಗಳು ಮತ್ತೆ ಬಂದೇ ಬರುತ್ತಾರೆಂದು ನೌಕರರು ಘಟಕದ ಸಮೀಪದಲ್ಲೇ ಕಾದು ಕುಳಿತಿದ್ದರು. ಅಂತೆಯೇ ಮಧ್ಯಾಹ್ನ 12 ಗಂಟೆಗೆ ಬಂದ ಆರೋಪಿಗಳು, ಒಳಗೆ ಹೋಗಿ ಉಪಕರಣ ಬಿಚ್ಚಿಕೊಳ್ಳುತ್ತಿದ್ದಾಗ ನೌಕರರು ಇಬ್ಬರನ್ನೂ ಹಿಡಿದುಕೊಂಡರು. ಆದರೆ, ಬಲಿಷ್ಠನಾದ ಜೇಮ್ಸ್ ರಿಟ್ಟೆ ಎಲ್ಲರನ್ನೂ ತಳ್ಳಿ ಓಡಿ ಹೋಗಿದ್ದಾನೆ ಎಂದು ಪೊಲೀಸರು ಹೇಳಿದರು.

ಹಣ ಹೇಗೆ ಎಗರಿಸುತ್ತಾರೆ?

‘ಗ್ರಾಹಕರು ಯಂತ್ರದೊಳಗೆ ಕಾರ್ಡ್‌ ಹಾಕಿದಾಗ ಅದರ ಡೇಟಾ ನಾವು ಅಳವಡಿಸಿರುತ್ತಿದ್ದ ಸ್ಕಿಮ್ಮಿಂಗ್ ಪ್ಲೇಟ್‌ನಲ್ಲಿ ದಾಖಲಾಗುತ್ತದೆ. ಅವರು ಪಿನ್‌ ನಂಬರ್ ಒತ್ತುವುದೂ ಮೈಕ್ರೊ ಕ್ಯಾಮೆರಾದಲ್ಲಿ ಸೆರೆಯಾಗಿರುತ್ತದೆ. ಸ್ಕಿಮ್ಮಿಂಗ್‌ನಲ್ಲಿ ದಾಖಲಾಗುವ ಡೇಟಾವನ್ನು ‘ಎಂ.ಎಸ್.ಆರ್ 2000’ ಸಾಫ್ಟ್‌ವೇರ್ ಮೂಲಕ ನಕಲಿ ಕಾರ್ಡ್‌ಗಳಿಗೆ ತುಂಬುತ್ತೇವೆ’ ಎಂದು ಆರೋಪಿ ನೈರೋ ವಂಚನೆ ಶೈಲಿಯನ್ನು ವಿವರಿಸಿದ್ದಾನೆ.

'ಆ ಕಾರ್ಡ್‌ಗಳ ಮೇಲೆ ನಮೂದು ಮಾಡಬೇಕಾದ 16 ಅಂಕಿಗಳು ಹಾಗೂ ಬ್ಯಾಂಕಿನ ಹೆಸರನ್ನು ಎಂಬೋಸರ್ ಯಂತ್ರದ ಮೂಲಕ ಪಂಚ್ ಮಾಡಿ, ನಕಲಿ ಕ್ರೆಡಿಟ್/ಡೆಬಿಟ್ ಕಾರ್ಡ್‌ಗಳನ್ನು ತಯಾರಿಸುತ್ತೇವೆ. ಬಳಿಕ, ಪಿನ್ ನಂಬರ್ ಬಳಸಿ ಹಣ ಡ್ರಾ ಮಾಡುತ್ತೇವೆ’ ಎಂದು ಆತ ಹೇಳಿರುವುದಾಗಿ ಪೊಲೀಸರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT