ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರಾಜಕಾಲುವೆ: ₹1,500 ಕೋಟಿ ಬಿಡುಗಡೆ ಆಗಿಲ್ಲ’–ಸಿದ್ದರಾಮಯ್ಯ

ಹೂಳು ತೆಗೆಯಲು ನೀಡಿದ್ದ ₹80 ಕೋಟಿ ಎಲ್ಲಿ ಹೋಯಿತು: ಸಿದ್ದರಾಮಯ್ಯ ಪ್ರಶ್ನೆ
Last Updated 19 ಮೇ 2022, 19:44 IST
ಅಕ್ಷರ ಗಾತ್ರ

ಬೆಂಗಳೂರು: ‘ನಗರದ ರಾಜಕಾಲುವೆಗಳನ್ನು ಅಭಿವೃದ್ಧಿ ಪಡಿಸಲು ₹ 1500 ಕೋಟಿ ವಿನಿಯೋಗಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಳೆದ ನವೆಂಬರ್‌ನಲ್ಲಿ ಹೇಳಿದ್ದರು.ಈವರೆಗೆ ಒಂದು ರೂಪಾಯಿಯನ್ನೂ ಬಿಡುಗಡೆ ಮಾಡಿಲ್ಲ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟೀಕಿಸಿದರು.

ಮಳೆಯಿಂದ ಹಾನಿಗೊಳಗಾದ ವಿವಿಧ ಪ್ರದೇಶಗಳಿಗೆ ಗುರುವಾರ ಭೇಟಿ ನೀಡಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಬಿಬಿಎಂಪಿಯ 8 ವಲಯಗಳೂ ಸೇರಿದಂತೆ ಸುಮಾರು 700 ಕಡೆ ರಾಜಕಾಲುವೆಗಳಲ್ಲಿ ಮಳೆ ನೀರು ಹರಿವಿಗೆ ಸಮಸ್ಯೆ ಉಂಟಾಗುತ್ತಿದೆ. ಈ ಸಮಸ್ಯೆಯನ್ನು ನಿಭಾಯಿಸಲು ವೈಜ್ಞಾನಿಕವಾದ ತಿಳಿವಳಿಕೆ ಇರಬೇಕಾಗುತ್ತದೆ. ಈ ಸರ್ಕಾರಕ್ಕೆ ಅಂತಹ ತಿಳಿವಳಿಕೆಯೇ ಇಲ್ಲ’ ಎಂದರು.

‘ಸರ್ಕಾರದ ಬೇಜವಾಬ್ದಾರಿಯಿಂದಾಗಿ ಈಗ ಸಮಸ್ಯೆ ಉದ್ಭವಿಸಿದೆ. ಹಲವರು ಪ್ರಾಣ ಕಳೆದುಕೊಂಡಿದ್ದಾರೆ. ಜನರು ಭಾರಿ ಪ್ರಮಾಣದಲ್ಲಿ ಆಸ್ತಿಪಾಸ್ತಿ ಕಳೆದುಕೊಂಡಿದ್ದಾರೆ. ಅವರಿಗೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕು. ಸಮಗ್ರ, ವೈಜ್ಞಾನಿಕ ದೃಷ್ಟಿಕೋನವನ್ನಿಟ್ಟುಕೊಂಡು ಚರಂಡಿ ಮತ್ತು ರಸ್ತೆಗಳನ್ನು ಅಭಿವೃದ್ಧಿ ಮಾಡಬೇಕು’ ಎಂದು ಹೇಳಿದರು.

‘ಬೆಂಗಳೂರಿನ ರಸ್ತೆ, ಚರಂಡಿಗಳನ್ನು ಅಭಿವೃದ್ಧಿ ಮಾಡುತ್ತಿರುವುದಾಗಿ ಸರ್ಕಾರ ಹೇಳುತ್ತಿದೆ. ರಾಜಕಾಲುವೆಗಳ ಹೂಳು ತೆಗೆಯಲು ಎರಡು ವರ್ಷಗಳಿಂದ ವರ್ಷಕ್ಕೆ ತಲಾ ₹80 ಕೋಟಿಗಳನ್ನು ಖರ್ಚು ಮಾಡಿದೆ. ಅದನ್ನು ನುಂಗುವುದಕ್ಕೆ ಬಳಸಲಾಗುತ್ತಿದೆಯೆ ಹೊರತು ಇದರಿಂದ ಯಾವುದೇ ಪ್ರಯೋಜನವಾಗಿಲ್ಲ. ಹೂಳು ತೆಗೆಯುವ ಗುತ್ತಿಗೆದಾರ ಅದನ್ನು ತೆಗೆದು ಎಲ್ಲಿಗೆ ಸಾಗಿಸಿದ್ದಾನೆ? ಎಲ್ಲಿ ಹಾಕಿದ್ದಾನೆ ಎಂಬ ಲೆಕ್ಕವನ್ನು ಕೊಡಬೇಕಲ್ಲವೇ? ಕೇವಲ ದಾಖಲೆಗಳಲ್ಲಿ ಮಾತ್ರ ಹೂಳು ತೆಗೆಯಲಾಗಿದೆಯೆಂದು ತೋರಿಸಿ ಹಣ ನುಂಗಿ ಹಾಕಲಾಗಿದೆ. ಇದು ಶೇ 40ರಷ್ಟು ಪರ್ಸೆಂಟ್ ವ್ಯವಹಾರವಲ್ಲ; ಶೇ 100 ಪರ್ಸೆಂಟ್ ವ್ಯವಹಾರ’ ಎಂದರು.

‘ಬಿಜೆಪಿ ಅಧಿಕಾರಕ್ಕೆ ಬಂದರೆ ಬೆಂಗಳೂರನ್ನು ಸಿಂಗಪುರ ಮಾಡುತ್ತೇವೆ. ಸ್ಮಾರ್ಟ್‌ ಸಿಟಿಯನ್ನಾಗಿ ರೂಪಿಸುತ್ತೇವೆ ಎನ್ನುತ್ತಿದ್ದರು. ಈಗ ಏನು ಮಾಡಿದ್ದಾರೆ? ಯಡಿಯೂರಪ್ಪ ಅವರು ಎರಡು ವರ್ಷದಲ್ಲಿ ಬೆಂಗಳೂರಿನ ಚಿತ್ರಣವನ್ನೇ ಬದಲಾಯಿಸುತ್ತೇನೆ ಎಂದಿದ್ದರು. ಬದಲಾಗಿದೆಯೇ’ ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT