ಬೆಂಗಳೂರು: ‘ಶಿಡ್ಲಘಟ್ಟ ಪೌರಾಯುಕ್ತೆ ಅಮೃತಾ ಗೌಡ ವಿರುದ್ಧ ಸ್ಥಳೀಯ ಕಾಂಗ್ರೆಸ್ ಮುಖಂಡ ಬಿ.ವಿ.ರಾಜೀವ್ ಗೌಡ ಬಳಸಿರುವ ನಿಂದನೀಯ ಭಾಷೆ ತನಿಖೆಗೆ ಅರ್ಹವಾಗಿದೆ’ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ರಾಜೀವ್ ಗೌಡ ವಿರುದ್ಧದ ಕ್ರಿಮಿನಲ್ ಪ್ರಕರಣ ರದ್ದುಗೊಳಿಸಲು ಸ್ಪಷ್ಟವಾಗಿ ನಿರಾಕರಿಸಿದೆ.

‘ನನ್ನ ವಿರುದ್ಧ ಶಿಡ್ಲಘಟ್ಟ ಟೌನ್ ಪೊಲೀಸ್ ಠಾಣೆಯಲ್ಲಿ ಅಮೃತಾ ಗೌಡ ದಾಖಲಿಸಿರುವ ಎಫ್ಐಆರ್ ರದ್ದುಪಡಿಸಬೇಕು’ ಎಂದು ಕೋರಿ ಬಿ.ವಿ.ರಾಜೀವ್ ಗೌಡ (46) ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿ ವಿಚಾರಣೆ ನಡೆಸಿ ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ಪ್ರಕಟಿಸಿತು.

ರಾಜೀವ್ ಗೌಡ ಬಳಸಿರುವ ಭಾಷೆಯ ಬಗ್ಗೆ ತೀವ್ರ ಆಘಾತ ವ್ಯಕ್ತಪಡಿಸಿರುವ ನ್ಯಾಯಪೀಠ, ‘ಅಧಿಕೃತ ಕರ್ತವ್ಯಗಳನ್ನು ನಿರ್ವಹಿಸುವ ಸರ್ಕಾರಿ ಅಧಿಕಾರಿಯೊಬ್ಬರ, ಅದೂ ಮಹಿಳೆಯೊಬ್ಬರಿಗೆ ಧಮಕಿ ಹಾಕಿ ಅವರ ಕರ್ತವ್ಯ ನಿಭಾವಣೆಗೆ ತಡೆಯೊಡ್ಡಿ ಭೀತಿ ಸೃಷ್ಟಿಸಿರುವ ರಾಜೀವ್ ಗೌಡ ವಿರುದ್ಧದ ಈ ಪ್ರಕರಣ ಮೇಲ್ನೋಟಕ್ಕೆ ಅಪರಾಧಿಕ ಕೃತ್ಯ ಎಸಗಿರುವುದನ್ನು ಪ್ರತಿಬಿಂಬಿಸುತ್ತದೆ’ ಎಂದು ಹೇಳಿದೆ.

‘ಅಮೃತಾ ತಮ್ಮ ಕರ್ತವ್ಯವನ್ನು ಶ್ರದ್ಧೆಯಿಂದ ನಿರ್ವಹಿಸಿದ್ದಾರೆ. ಸಾರ್ವಜನಿಕ ಸೇವಕಿಯೊಬ್ಬರು ಕಾನೂನುಬದ್ಧ ಕರ್ತವ್ಯಗಳನ್ನು ನಿರ್ವಹಿಸಿದಾಗ, ಯಾರೊಬ್ಬರೂ ಅಂಥವರನ್ನು ಬೆದರಿಸಲು ಅಥವಾ ನಿಂದಿಸಲು ಸಾಧ್ಯವೇ ಇಲ್ಲ. ಆದರೆ, ರಾಜೀವ್ ಗೌಡ ದೂರವಾಣಿ ಮೂಲಕ ಅಮೃತಾ ಜೊತೆ ನಡೆಸಿರುವ ಸಂಭಾಷಣೆ ಗಮನಿದರೆ, ಈತ ಮಹಿಳೆ ಮತ್ತು ಸಾರ್ವಜನಿಕ ಸೇವಕರ ಘನತೆಗೆ ಧಕ್ಕೆ ತರುವ ರೀತಿಯಲ್ಲಿ ಮಾತನಾಡಿರುವುದು ಸುಲಭವಾಗಿ ವೇದ್ಯವಾಗುತ್ತದೆ’ ಎಂದು ತೀರ್ಪಿನಲ್ಲಿ ಉಲ್ಲೇಖಿಸಿದೆ.

‘ಘಟನೆ ನಿಸ್ಸಂದೇಹವಾಗಿ ದಂಡದ ಪರಿಣಾಮಗಳನ್ನು ಎದುರಿಸಲು ಯೋಗ್ಯವಾಗಿದೆ. ರಾಜೀವ್ ಗೌಡ ಉದ್ಗರಿಸಿರುವ ಪದಗಳು ಮತ್ತು ಅವರ ಸ್ವಭಾವ, ಭಾರತೀಯ ನ್ಯಾಯ ಸಂಹಿತಾ–2023ರ ಕಲಂ79 ಮತ್ತು ಭಾರತೀಯ ದಂಡ ಸಂಹಿತೆಯ–1860ರ ಕಲಂ 509ರ ಅಪರಾಧಿಕ ದಂಡನೆಗಳ ವ್ಯಾಪ್ತಿಯಲ್ಲಿನ ತನಿಖೆಗೆ ಅನುಗುಣವಾಗಿದೆ’ ಎಂದು ಹೇಳಿದೆ.

‘ಕಲಂ 79ರ ಪ್ರಕಾರ ಬಳಸುವ ಪದಗಳು, ಧ್ವನಿ, ಸನ್ನೆ ಅಥವಾ ಕೃತ್ಯದ ಮೂಲಕ ಮಹಿಳೆಯ ವಿನಮ್ರತೆಯನ್ನು ಅವಮಾನಿಸುವುದು ಗುರುತರ ಅಪರಾಧ. ಇಂತಹ ಉದ್ದೇಶದಿಂದ ಕೃತ್ಯ ಎಸಗಿದವರಿಗೆ ದಂಡದ ಜೊತೆಗೆ 3 ವರ್ಷಗಳವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆ ವಿಧಿಸಲಾಗುತ್ತದೆ ಎಂಬುದನ್ನು ನೆನಪಿಡಬೇಕು. ಶಾಸನಬದ್ಧ ಕರ್ತವ್ಯ ನಿರ್ವಹಿಸುತ್ತಿರುವ ಸಾರ್ವಜನಿಕ ಸೇವಕಿಯನ್ನು ಉದ್ದೇಶಿಸಿ ಮಾತನಾಡುವಾಗ ನೆದರು ಇಟ್ಟುಕೊಳ್ಳಬೇಕು‘ ಎಂದು ನ್ಯಾಯಪೀಠ ಎಚ್ಚರಿಸಿದೆ. ಸರ್ಕಾರದ ಪರ ರಾಜ್ಯ ಹೆಚ್ಚುವರಿ ಪ್ರಾಸಿಕ್ಯೂಟರ್ ಬಿ.ಎನ್.ಜಗದೀಶ್ ವಾದ ಮಂಡಿಸಿದ್ದರು.

ಸರ್ಕಾರ ಆನಂದ ಕೊಳದಲ್ಲಿ ಈಜುತ್ತಿದೆ..!

‘ಸಾರ್ವಜನಿಕ ಸ್ಥಳಗಳಲ್ಲಿ ಚಲನಚಿತ್ರ ಪ್ರಚಾರಕ್ಕಾಗಿ ಅಥವಾ ಇನ್ಯಾವುದೇ ಕಾರಣಕ್ಕಾಗಿ ವಿವೇಚನೆಯಿಲ್ಲದೆ ಕಟ್ಟುವ ಬ್ಯಾನರ್ಗಳು, ಫ್ಲೆಕ್ಸ್ಗಳು ನಿಶ್ಚಿತವಾಗಿ ಸಾರ್ವಜನಿಕರಿಗೆ ಮತ್ತು ಸಂಚಾರಕ್ಕೆ ಅಡ್ಡಿಯುಂಟು ಮಾಡಿ ಅಪಾಯ ತಂದೊಡ್ಡುತ್ತವೆ. ಅಂತೆಯೇ, ನಗರದ ಸೌಂದರ್ಯವನ್ನು ಕೆಡಿಸುತ್ತವೆ ಎಂಬುದನ್ನು ಬಿಡಿಸಿ ಹೇಳಬೇಕಾಗಿಲ್ಲ. ಆದರೆ, ರಾಜ್ಯದೆಲ್ಲೆಡೆ ವ್ಯಾಪಕವಾಗಿರುವ ಇಂತಹ ನಡೆಯ ಬಗ್ಗೆ ರಾಜ್ಯ ಸರ್ಕಾರ ತೀವ್ರ ಅಸಡ್ಡೆ ತೋರುತ್ತಿದ್ದು ತನ್ನದೇ ಆದ ಆನಂದ ಸರೋವರದಲ್ಲಿ ಮೈ ಚೆಲ್ಲಿ ಈಜುತ್ತಿದೆ’ ಎಂದು ನ್ಯಾಯಪೀಠ ಕಿಡಿ ಕಾರಿದೆ.

‘ಬೇಕಾಬಿಟ್ಟಿ ಬ್ಯಾನರ್, ಬಂಟಿಂಗ್ಸ್, ಫ್ಲೆಕ್ಸ್ಗಳನ್ನು ನೇತು ಹಾಕುವ ಕೃತ್ಯಗಳನ್ನು ಎಸಗುವವರ ವಿರುದ್ಧ ಕ್ರಮ ಕೈಗೊಳ್ಳುವುದೇ ಅಪರೂಪವಾಗಿ ಬಿಟ್ಟಿದೆ. ಆದ್ದರಿಂದ, ರಾಜ್ಯ ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು; ಕರ್ನಾಟಕ ಸಾರ್ವಜನಿಕ ಸ್ಥಳಗಳ ವಿರೂಪಗೊಳಿಸುವಿಕೆಯನ್ನು ತಡೆಗಟ್ಟುವ ಕಾಯ್ದೆ–1981ರ ಅಡಿಯಲ್ಲಿ ಅಪರಾಧಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜಾರಿಗೊಳಿಸಲು ಇದು ಸೂಕ್ತ ಸಮಯ’ ಎಂದು ತಾಕೀತು ಮಾಡಿದೆ.

ಅಮೃತಾ ಕೇವಲ ಸಾರ್ವಜನಿಕ ಸೇವಕಿಯಲ್ಲ. ಅವರೊಬ್ಬ ಘನತೆಯುಳ್ಳ ಮಹಿಳೆ. ಯಾವುದೇ ಪುರುಷ, ನಾಗರಿಕತೆ ಮತ್ತು ಕಾನೂನಿನ ಸಹಿಷ್ಣುತೆಯ ಮಿತಿ ಮೀರಿ ಆಕ್ರಮಣಕಾರಿ ಭಾಷೆಯಲ್ಲಿ ಮಾತನಾಡುವುದು ದಂಡನೀಯ ಅಪರಾಧ.
ಎಂ.ನಾಗಪ್ರಸನ್ನ, ನ್ಯಾಯಮೂರ್ತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.