ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ನಿಯಂತ್ರಣಕ್ಕೆ ಮೆಚ್ಚುಗೆ: ವಿ.ವಿ ಬೆಳ್ಳಿಹಬ್ಬ ಉದ್ಘಾಟಿಸಿದ ಮೋದಿ

ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ
Last Updated 1 ಜೂನ್ 2020, 20:30 IST
ಅಕ್ಷರ ಗಾತ್ರ

ಬೆಂಗಳೂರು: ಕೊರೊನಾ ಸೋಂಕು ನಿಯಂತ್ರಿಸುವಲ್ಲಿ ಕರ್ನಾಟಕ ತೆಗೆದುಕೊಂಡಿರುವ ಕ್ರಮಗಳನ್ನು ಶ್ಲಾಘಿಸಿರುವ ಪ್ರಧಾನಿ ನರೇಂದ್ರ ಮೋದಿ, ಕೊರೊನಾ ವಿರುದ್ಧ ಸೆಣಸುತ್ತಿರುವ ಸೇನಾನಿಗಳ ಮೇಲಿನ ಹಲ್ಲೆ ಅಥವಾ ಯಾವುದೇ ರೀತಿಯ ಹಿಂಸೆಯನ್ನು ಸಹಿಸುವುದಿಲ್ಲ ಎಂದು ಎಚ್ಚರಿಸಿದರು.

ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ರಜತ ಮಹೋತ್ಸವವನ್ನು ಸೋಮವಾರ ದೆಹಲಿಯಿಂದ ವಿಡಿಯೊ ಕಾನ್ಫರೆನ್ಸ್‌ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ‘ಜಗತ್ತು ಕಂಡಿರುವ ಎರಡು ಮಹಾಯುದ್ಧಗಳ ನಂತರದ ಇನ್ನೊಂದು ಸಮರ ಇದು. ಇಲ್ಲಿ ಹೋರಾಡುತ್ತಿರುವ ಸಮವಸ್ತ್ರ ರಹಿತ ಸೈನಿಕರ ರಕ್ಷಣೆಗೆ ಸರ್ಕಾರ ಬದ್ಧವಾಗಿದೆ. ಅವರಿಗಾಗಿಯೇ ₹ 50 ಲಕ್ಷದ ವಿಮೆಯನ್ನು ಒದಗಿಸಲಾಗಿದೆ’ ಎಂದರು.

‘ಆರೋಗ್ಯಕರ ಸಮಾಜಕ್ಕಾಗಿ ಆರೋಗ್ಯ ಕ್ಷೇತ್ರದಲ್ಲಿ ಭಾರತದಲ್ಲೇ ತಯಾರಿಸಿದ ಉತ್ಪನ್ನಗಳನ್ನು ಮತ್ತು ಮಾಹಿತಿ ತಂತ್ರಜ್ಞಾನವನ್ನು ಬಳಸಬೇಕು. ಭಾರತದಲ್ಲೇ ತಯಾರಿಸಿ ಅಭಿಯಾನಕ್ಕೆ ಆರಂಭದಲ್ಲೇ ಸಿಕ್ಕಿದ ಪ್ರಯೋಜನಗಳಿಗೆ ಪಿಪಿಇ ಕಿಟ್‌ಗಳು, ಎನ್‌ 95 ಮುಖಗವಸುಗಳು ಉತ್ಪಾದನೆಯೇ ನಿದರ್ಶನ. ಟೆಲಿಮೆಡಿಸಿನ್‌ ಅನ್ನು ಮತ್ತಷ್ಟು ಪ್ರಚಾರ ಮಾಡುವುದಕ್ಕೆ ಏನು ಮಾಡಬಹುದು ಎಂಬುದರ ಚಿಂತನೆ ನಡೆಯುತ್ತಿದೆ’ ಎಂದು ಹೇಳಿದರು.

‘ಭಾರತದಂತಹ ದೇಶ ವೈದ್ಯಕೀಯ ಮೂಲಸೌಲಭ್ಯವನ್ನು ವೃದ್ಧಿಸಿಕೊಳ್ಳಲೇಬೇಕಾಗಿದೆ. ಅದರಲ್ಲಿ ಸ್ವಾವಲಂಬನೆಯನ್ನೂ ಸಾಧಿಸಬೇಕಿದೆ. ಇದೇ ಕಾರಣಕ್ಕೆ ಪ್ರತಿಯೊಂದು ಜಿಲ್ಲೆಯಲ್ಲೂ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಕೇಂದ್ರ ಸ್ಥಾಪಿಸಲು ಕೇಂದ್ರ ಮುಂದಾಗಿದೆ. ಐದು ವರ್ಷಗಳಲ್ಲಿ ಹೆಚ್ಚುವರಿಯಾಗಿ 30 ಸಾವಿರ ಎಂಬಿಬಿಎಸ್‌ ಮತ್ತು 15 ಸಾವಿರ ಸ್ನಾತಕೋತ್ತರ ವೈದ್ಯಕೀಯ ಸೀಟುಗಳನ್ನು ಒದಗಿಸಲಾಗಿದೆ. 22 ನೂತನ ಅಖಿಲ ಭಾರತ ವೈದ್ಯ ವಿಜ್ಞಾನ ಸಂಸ್ಥೆಗಳನ್ನು ಸ್ಥಾಪಿಸಲಾಗುತ್ತಿದೆ. ಸ್ವಾತಂತ್ರ್ಯಾನಂತರ ವೈದ್ಯಕೀಯ ಕ್ಷೇತ್ರದಲ್ಲಿ ಇಷ್ಟೊಂದು ಪ್ರಗತಿಯನ್ನು ಯಾವ ಸರ್ಕಾರವೂ ಸಾಧಿಸಿರಲಿಲ್ಲ’ ಎಂದರು.

ಕೊಡುಗೆಗೆ ಶ್ಲಾಘನೆ: ‘ಕೋವಿಡ್‌ನಂತಹ ಸನ್ನಿವೇಶದಲ್ಲಿ ವಿಶ್ವವಿದ್ಯಾಲಯ ವಹಿಸುತ್ತಿರುವ ಪಾತ್ರ ಅಮೋಘವಾದುದು. ಉತ್ತಮ ಗುಣಮಟ್ಟದ ವೈದ್ಯಕೀಯ ಸಿಬ್ಬಂದಿಯನ್ನು ನಾಡಿಗೆ ನೀಡುವ ತನ್ನ ಧ್ಯೇಯವನ್ನು ವಿ.ವಿ. ಮುಂದುವರಿಸಲಿ‌’ ಎಂದರು.

ರಾಜ್ಯಪಾಲ ವಜುಭಾಯಿ ವಾಲಾ ಅವರು ವಿಶ್ವವಿದ್ಯಾಲಯ ಹಮ್ಮಿಕೊಂಡಿರುವ ಹ್ಯಾಕಥಾನ್‌ ಕೈಪಿಡಿ ಹಾಗೂ ರಜತ ಮಹೋತ್ಸವ ಪ್ರಯುಕ್ತ ಹೊರತರಲಾದ ವಿಶೇಷ ಅಂಚೆ ಲಕೋಟೆಯನ್ನು ಬಿಡುಗಡೆಗೊಳಿಸಿದರು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಉಪಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ, ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌, ಸಂಸದ ತೇಜಸ್ವಿ ಸೂರ್ಯ, ಕುಲಪತಿ ಡಾ.ಎಸ್‌.ಸಚ್ಚಿದಾನಂದ ಇದ್ದರು.

50ವಿವಿಧ ವೈದ್ಯಕೀಯ ಕೋರ್ಸ್‌
‘ಕೇಂದ್ರವು ಹೊಸ ಕಾಯ್ದೆಯೊಂದನ್ನು ಜಾರಿಗೆ ತಂದು 50 ವಿವಿಧ ವೈದ್ಯಕೀಯ ಕೋರ್ಸ್‌ಗಳ ಅಧ್ಯಯನಕ್ಕೆ ಅವಕಾಶ ಮಾಡಿಕೊಡಲಿದೆ. ಇದರಿಂದ ದೇಶದಲ್ಲಿನ ಅರೆ ವೈದ್ಯಕೀಯ ಸಿಬ್ಬಂದಿಯ ಕೊರತೆ ನಿವಾರಣೆಯಾಗಲಿದೆ ಹಾಗೂ ವಿದೇಶ
ಗಳಿಗೂ ಇಂತಹ ಸಿಬ್ಬಂದಿಯನ್ನು ಒದಗಿಸುವುದು ಸಾಧ್ಯವಾಗಲಿದೆ’ ಎಂದು ಪ್ರಧಾನಿ ಹೇಳಿದರು.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT