ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ ಮತದಾನದ ಭೀತಿ: ‘ಕೈ‘ ಶಾಸಕರು ಇಂದು ಹೋಟೆಲ್‌ಗೆ

Published 25 ಫೆಬ್ರುವರಿ 2024, 23:40 IST
Last Updated 25 ಫೆಬ್ರುವರಿ 2024, 23:40 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ ಮತದಾನದ ಭೀತಿ ಇರುವುದರಿಂದ ಕಾಂಗ್ರೆಸ್‌ನ ಎಲ್ಲ ಶಾಸಕರನ್ನು ಸೋಮವಾರ ಮಧ್ಯಾಹ್ನ ಹೋಟೆಲ್‌ಗೆ ಕರೆದೊಯ್ಯಲಾಗುತ್ತಿದೆ. ಆಡಳಿತ ಪಕ್ಷದ ಶಾಸಕರು ಹೋಟೆಲ್‌ನಿಂದಲೇ ಮಂಗಳವಾರ ಬೆಳಿಗ್ಗೆ ಮತದಾನಕ್ಕೆ ಬರಲಿದ್ದಾರೆ.

ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಮಂಗಳವಾರ (ಫೆ. 27) ಮತದಾನ ನಡೆಯಲಿದೆ. ಕಾಂಗ್ರೆಸ್‌ನ ಮೂವರು ಮತ್ತು ಎನ್‌ಡಿಎ ಮೈತ್ರಿಕೂಟದ ಇಬ್ಬರು ಕಣದಲ್ಲಿದ್ದಾರೆ. ಮೂರು ಸ್ಥಾನ ಗೆಲ್ಲುವ ಅವಕಾಶ ಕಾಂಗ್ರೆಸ್‌ಗೆ ಇದ್ದರೂ ಎನ್‌ಡಿಎ ಮೈತ್ರಿಕೂಟವು ಮತಗಳ ಕೊರತೆಯ ಮಧ್ಯೆಯೂ ಡಿ.ಕುಪೇಂದ್ರ ರೆಡ್ಡಿ ಅವರನ್ನು ಎರಡನೇ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿದೆ. ಇದರಿಂದಾಗಿ ಕಾಂಗ್ರೆಸ್‌ ತನ್ನ ಶಾಸಕರನ್ನು ಹಿಡಿದಿಟ್ಟುಕೊಳ್ಳಬೇಕಾಗಿದೆ.

ಸುರಪುರ ಶಾಸಕ ರಾಜಾ ವೆಂಕಟಪ್ಪ ನಾಯಕ ನಿಧನರಾಗಿರುವುದರಿಂದ ವಿಧಾನಮಂಡಲದಲ್ಲಿ ಸೋಮವಾರ ಸಂತಾಪ ಸೂಚನೆ ನಡೆಯಲಿದೆ. ಕಾಂಗ್ರೆಸ್‌ನ ಎಲ್ಲ ಸದಸ್ಯರು, ಸಂತಾಪ ಸೂಚನೆಯಲ್ಲಿ ಭಾಗವಹಿಸಿದ ಬಳಿಕ ವಿಧಾನಸೌಧದಿಂದ ನೇರವಾಗಿ ಹೋಟೆಲ್‌ಗೆ ತೆರಳಲಿದ್ದಾರೆ. ಕೋರಮಂಗಲದ ಎಂಬೆಸಿ ಗಾಲ್ಫ್‌ ಲಿಂಕ್ಸ್‌ ಬ್ಯುಸಿನೆಸ್‌ ಪಾರ್ಕ್‌ನಲ್ಲಿರುವ ಹಿಲ್ಟನ್‌ ಹೋಟೆಲ್‌ನಲ್ಲಿ ಕಾಂಗ್ರೆಸ್‌ನ ಎಲ್ಲ ಶಾಸಕರ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಶಾಸಕಾಂಗ ಪಕ್ಷದ ಸಭೆ:

ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆ ಹಿಲ್ಟನ್‌ ಹೋಟೆಲ್‌ನಲ್ಲಿ ಸೋಮವಾರ ಸಂಜೆ 6 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಯಾವ ಶಾಸಕರು ಯಾವ ಅಭ್ಯರ್ಥಿಗೆ ಮತ ಚಲಾಯಿಸಬೇಕು ಎಂದು ಅಲ್ಲಿ ಅಖೈರುಗೊಳಿಸಲಾಗುತ್ತದೆ ಎಂದು ಮೂಲಗಳು ಹೇಳಿವೆ.

ರಾಜ್ಯಸಭೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳಾಗಿರುವ ಅಜಯ್ ಮಾಕನ್‌, ಸೈಯದ್ ನಾಸಿರ್ ಹುಸೇನ್‌ ಮತ್ತು ಜಿ.ಸಿ.ಚಂದ್ರಶೇಖರ್‌ ಕೂಡಾ ಸಭೆಯಲ್ಲಿ ಪಾಲ್ಗೊಳ್ಳುವರು. ಪ್ರತಿ ಶಾಸಕರಿಗೂ ಪ್ರಾಶಸ್ತ್ಯದ ಮತಗಳ ಹಂಚಿಕೆ ಪಟ್ಟಿಯನ್ನು ನೀಡಲು ತಯಾರಿ ನಡೆದಿದೆ.

ಸಚಿವರಿಗೆ ಹೊಣೆ:

ಶಾಸಕರನ್ನು ಹೋಟೆಲ್‌ಗೆ ಕರೆತರುವ ಜವಾಬ್ದಾರಿಯನ್ನು ಬೈರತಿ ಸುರೇಶ್, ಕೃಷ್ಣ ಬೈರೇಗೌಡ ಸೇರಿದಂತೆ ಕೆಲವು ಸಚಿವರಿಗೆ ವಹಿಸಲಾಗಿದೆ. ಆಯಾ ಜಿಲ್ಲೆಯ ಕಾಂಗ್ರೆಸ್‌ ಶಾಸಕರು ಸೋಮವಾರ ಬೆಳಿಗ್ಗೆ ಕಡ್ಡಾಯವಾಗಿ ವಿಧಾನಸಭೆ ಕಲಾಪಕ್ಕೆ ಹಾಜರಾಗಿ, ಹೋಟೆಲ್‌ ತಲುಪುವಂತೆ ನಿಗಾ ಇರಿಸುವ ಹೊಣೆಯನ್ನು ಜಿಲ್ಲಾ ಉಸ್ತುವಾರಿ ಸಚಿವರಿಗೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಸರ್ವೋದಯ ಕರ್ನಾಟಕ ಪಕ್ಷದ ದರ್ಶನ್‌ ಪುಟ್ಟಣ್ಣಯ್ಯ, ಪಕ್ಷೇತರ ಶಾಸಕರಾದ ಲತಾ ಮಲ್ಲಿಕಾರ್ಜುನ ಮತ್ತು ಕೆ.ಎಚ್‌. ಪುಟ್ಟಸ್ವಾಮಿಗೌಡ ಅವರನ್ನೂ ಹಿಲ್ಟನ್‌ ಹೋಟೆಲ್‌ಗೆ ಕರೆದೊಯ್ಯುವ ಕಸರತ್ತಿನಲ್ಲಿ ಕಾಂಗ್ರೆಸ್‌ ನಾಯಕರು ನಿರತರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT