ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ: ಗುರಪ್ಪನಪಾಳ್ಯದಲ್ಲಿ ಶಂಕಿತರ ಸಭೆ

* ಮುಸಾವೀರ್ ವಿರುದ್ಧ 2020ರಲ್ಲೇ ದಾಖಲಾಗಿದ್ದ ಎಫ್‌ಐಆರ್
Published 24 ಮಾರ್ಚ್ 2024, 20:40 IST
Last Updated 24 ಮಾರ್ಚ್ 2024, 20:40 IST
ಅಕ್ಷರ ಗಾತ್ರ

ಬೆಂಗಳೂರು: ದಿ ರಾಮೇಶ್ವರಂ ಕೆಫೆ ಬಾಂಬ್‌ ಸ್ಫೋಟದ ಪ್ರಮುಖ ಶಂಕಿತ ಎನ್ನಲಾದ ಮುಸಾವೀರ್ ಹುಸೇನ್ ಶಾಜೀಬ್, ಭಯೋತ್ಪಾದನಾ ಕೃತ್ಯಗಳಿಗೆ ಸಂಚು ರೂಪಿಸುವ ಬಗ್ಗೆ ಬೆಂಗಳೂರಿನ ಗುರಪ್ಪನಪಾಳ್ಯದಲ್ಲಿ ನಡೆಯುತ್ತಿದ್ದ ಸರಣಿ ಸಭೆಗಳಲ್ಲಿ ಪಾಲ್ಗೊಂಡಿದ್ದನೆಂಬ ಸಂಗತಿ ತನಿಖೆಯಿಂದ ಗೊತ್ತಾಗಿದೆ.

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಮುಸಾವೀರ್, ಐಎಸ್ (ಇಸ್ಲಾಮಿಕ್ ಸ್ಟೇಟ್) ಹಾಗೂ ಸಿಮಿ (ಸ್ಟೂಟೆಂಡ್ ಇಸ್ಲಾಮಿಕ್ ಮೂವ್‌ಮೆಂಟ್ ಆಫ್ ಇಂಡಿಯಾ) ಸೇರಿದಂತೆ ಹಲವು ನಿಷೇಧಿತ ಭಯೋತ್ಪಾದನಾ ಸಂಘಟನೆಗಳ ಸದಸ್ಯರ ಜೊತೆ ಒಡನಾಟ ಹೊಂದಿದ್ದ. ಸಂಘಟನೆ ಮುಖಂಡರ ನೇತೃತ್ವದಲ್ಲಿ ನಡೆಯುತ್ತಿದ್ದ ಸಭೆಗಳಲ್ಲಿ ಪಾಲ್ಗೊಂಡು, ಭಯೋತ್ಪಾದನಾ ಕೃತ್ಯದ ಸಂಚಿನ ಬಗ್ಗೆ ಚರ್ಚಿಸುತ್ತಿದ್ದನೆಂಬ ಮಾಹಿತಿ ತನಿಖಾ ತಂಡಗಳಿಗೆ ಲಭ್ಯವಾಗಿದೆ.

‘ಐಎಸ್‌ ಜೊತೆ ನಂಟು ಹೊಂದಿದ್ದ ಕೆಲ ವ್ಯಕ್ತಿಗಳು ಭಯೋತ್ಪಾದನಾ ಕೃತ್ಯ ಎಸಗಲು ಮುಸಾವೀರ್‌ನನ್ನು ಪ್ರಚೋದಿಸಿದ್ದರು. ವಿಧ್ವಂಸಕ ಕೃತ್ಯ ಹಾಗೂ ಸಂಚಿನಲ್ಲಿ ಭಾಗಿಯಾಗಿದ್ದ ಮುಸಾವೀರ್, ಹಲವು ವರ್ಷಗಳಿಂದ ತಲೆಮರೆಸಿಕೊಂಡಿದ್ದಾನೆ. ಉಗ್ರ ಸಂಘಟನೆ ಮುಖಂಡರು ನೀಡುವ ನಿರ್ದೇಶನದಂತೆ, ಪದೇ ಪದೇ ಭಯೋತ್ಪಾದನಾ ಕೃತ್ಯ ಎಸಗುತ್ತಿದ್ದಾನೆ. ಈತನ ಜೊತೆಯಲ್ಲಿ, ಶಂಕಿತ ಅಬ್ದುಲ್ ಮಥೀನ್ ಅಹ್ಮದ್ ತಾಹಾ ಸಹ ತಲೆಮರೆಸಿಕೊಂಡಿದ್ದಾನೆ. ಇಬ್ಬರೂ ಒಂದೇ ಕಡೆ ಇರುವ ಮಾಹಿತಿ ಇದ್ದು, ಪತ್ತೆಗೆ ಶೋಧ ಆರಂಭವಾಗಿದೆ’ ಎಂದು ತನಿಖಾ ತಂಡದ ಮೂಲಗಳು ಹೇಳಿವೆ.

ಜಿಹಾದಿ’ ಮುಖಂಡನ ಮನೆಯಲ್ಲಿ ಸಭೆ: ‘ಐಎಸ್‌ ಉಗ್ರರ ಜೊತೆ ನೇರ ನಂಟು ಹೊಂದಿದ್ದ ಎನ್ನಲಾದ ಶಂಕಿತ ಮೆಹಬೂಬ್ ಪಾಷಾ, ಜಿಹಾದಿ ಬೆಂಗಳೂರು ತಂಡದ ಮುಖ್ಯಸ್ಥನಾಗಿದ್ದ. ಗುರಪ್ಪನಪಾಳ್ಯದ ಮನೆಯೊಂದರಲ್ಲಿ ವಾಸವಿದ್ದ ಈತ, ಅದೇ ಮನೆಯಲ್ಲಿ 2019ರಿಂದ 2020ರವರೆಗೆ ಸರಣಿ ಸಭೆಗಳನ್ನು ನಡೆಸಿದ್ದ’ ಎಂದು ತನಿಖಾ ಮೂಲಗಳು ತಿಳಿಸಿವೆ.

‘ಮುಸ್ಲಿಂ ಸಮುದಾಯದ ವಿದ್ಯಾವಂತ ಯುವಕರನ್ನು ಸಂಪರ್ಕಿಸುತ್ತಿದ್ದ ಮೆಹಬೂಬ್ ಪಾಷಾ, ‘ಧರ್ಮ ರಕ್ಷಣೆಗೆ ಪ್ರಾಣವನ್ನೂ ಲೆಕ್ಕಿಸದೇ ಹೋರಾಡಬೇಕಿದೆ. ನನ್ನ ಜೊತೆ ಬನ್ನಿ’ ಎನ್ನುತ್ತಿದ್ದ. ಪ್ರಚೋದನಕಾರಿ ಪುಸ್ತಕ ಹಾಗೂ ಕರಪತ್ರಗಳನ್ನು ಯುವಕರಿಗೆ ಕೊಡುತ್ತಿದ್ದ. ಈತನ ಮಾತಿನಿಂದ ಪ್ರಚೋದನೆಗೊಂಡ ಮುಸಾವೀರ್‌ ಹಾಗೂ ಇತರರು, ಭಯೋತ್ಪಾದನಾ ಕೃತ್ಯ ಎಸಗಲು ಅಣಿಯಾಗಿದ್ದರು’ ಎಂದು ಮೂಲಗಳು ಹೇಳಿವೆ.

‘ಮೆಹಬೂಬ್ ಪಾಷಾ ನಡೆಸುತ್ತಿದ್ದ ಸಭೆಯಲ್ಲಿ ಮುಸಾವೀರ್ ಹಾಗೂ ಇತರೆ ಶಂಕಿತರು ಪಾಲ್ಗೊಳ್ಳುತ್ತಿದ್ದರು. ಕರ್ನಾಟಕ ಹಾಗೂ ತಮಿಳುನಾಡಿನಲ್ಲಿ ಭಯೋತ್ಪಾದನಾ ಕೃತ್ಯಗಳನ್ನು ಎಸಗುವ ಬಗ್ಗೆ ಚರ್ಚಿಸುತ್ತಿದ್ದರು. ಹಿಂದೂ ಸಂಘಟನೆಗಳ ಮುಖಂಡರನ್ನು ಹತ್ಯೆ ಹಾಗೂ ಮತೀಯ ಗಲಭೆ ಹುಟ್ಟುಹಾಕಲು ಸಂಚು ರೂಪಿಸುತ್ತಿದ್ದರು. ಇದಕ್ಕೆ ಅಗತ್ಯವಿದ್ದ ಸ್ಫೋಟಕಗಳನ್ನು ಸಂಗ್ರಹಿಸುವ ಹಾಗೂ ಹೊಸ ಯುವಕರನ್ನು ನೇಮಿಸಿಕೊಳ್ಳುವ ಬಗ್ಗೆಯೂ ಚರ್ಚೆ ನಡೆಯುತ್ತಿತ್ತು’ ಎಂದು ಮೂಲಗಳು ತಿಳಿಸಿವೆ.

ಶಂಕಿತರ ಜಾಡು ಭೇದಿಸಿದ್ದ ಸಿಸಿಬಿ: ‘ಶಂಕಿತ ಮೆಹಬೂಬ್ ಪಾಷಾ, 2019ರ ಜುಲೈ 1ರಿಂದ 2020ರ ಜನವರಿ 10ರವರೆಗೆ ಗುರಪ್ಪನಪಾಳ್ಯದ ಮನೆಯಲ್ಲಿ ವಾಸವಿದ್ದ. ಅದೇ ಮನೆಯಲ್ಲಿ ಸರಣಿ ಸಭೆ ನಡೆಸಿ ಭಯೋತ್ಪಾದನಾ ಕೃತ್ಯದ ಸಂಚಿನ ಬಗ್ಗೆ ಚರ್ಚಿಸುತ್ತಿದ್ದ. ಈ ಕುರಿತು ಸಿಸಿಬಿ ಪೊಲೀಸರು ಹಾಗೂ ಗುಪ್ತಚರ ಇಲಾಖೆ ಅಧಿಕಾರಿಗಳು ಮಾಹಿತಿ ಸಂಗ್ರಹಿಸಿದ್ದರು. ಬಳಿಕ, ಜಂಟಿ ಕಾರ್ಯಾಚರಣೆ ನಡೆಸಿ ಮೆಹಬೂಬ್ ಪಾಷಾ ಹಾಗೂ ಹಲವರನ್ನು ಬಂಧಿಸಿದ್ದರು. ಸ್ಫೋಟಕ ಹಾಗೂ ಇತರೆ ಸಾಮಗ್ರಿಗಳನ್ನೂ ಜಪ್ತಿ ಮಾಡಿದ್ದರು’ ಎಂದು ತನಿಖಾ ಸಂಸ್ಥೆ ಮೂಲಗಳು ವಿವರಿಸಿವೆ.

‘ತಮಿಳುನಾಡಿನ ಹಿಂದೂ ಸಂಘಟನೆ ಮುಖಂಡ ಸುರೇಶ್ ಹತ್ಯೆ ಪ್ರಕರಣ ಪ್ರಮುಖ ಆರೋಪಿ ಖ್ವಾಜಾ ಮುಹಿನುದ್ದೀನ್ ಅಲಿಯಾಸ್ ಜಲಾಲ್, ಈತನ ಸಹಚರರಾರ ಅಬ್ದುಲ್ ಸಮದ್, ತೌಸಿಫ್ ಅಲಿಯಾಸ್ ತೌಕಿರ್, ಸೈಯದ್ ಅಲಿ ನವಾಜ್, ಜಾಫರ್ ಅಲಿ ಅಲಿಯಾಸ್ ಉಮರ್, ಅಬ್ದುಲ್ ಶಮೀನ್, ಇಮ್ರಾನ್ ಖಾನ್, ಮೊಹಮ್ಮದ್ ಹನೀಫ್, ಮೊಹಮ್ಮದ್ ಮನ್ಸೂರ್, ಸಲೀಂ ಖಾನ್, ಅಬ್ದುಲ್ ಮಥೀನ್ ಅಹ್ಮದ್, ಹುಸೇನ್, ಅನಿಸ್, ಶಾಜಿಬ್ ಜಬೀವುಲ್ಲಾ, ಅಜಾಜ್ ಪಾಷ, ಜಬೀಬ್‌ವುಲ್ಲಾ ಹಾಗೂ ಮುಸಾವೀರ್ ಹುಸೇನ್ ಶಾಜೀಬ್ ಜೊತೆ ಮೆಹಬೂಬ್ ಪಾಷಾ ಸಭೆ ನಡೆಸಿದ್ದ ಮಾಹಿತಿ ಲಭ್ಯವಾಗಿತ್ತು. ಪುರಾವೆಗಳನ್ನು ಆಧರಿಸಿ ಎಲ್ಲರ ವಿರುದ್ಧವೂ 2020ರ ಜನವರಿ 10ರಂದು ಸುದ್ದಗುಂಟೆಪಾಳ್ಯ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ಇದೇ ಪ್ರಕರಣದ ತನಿಖೆ ಎನ್‌ಐಎಗೆ ವರ್ಗಾವಣೆಯಾಗಿದೆ. ಕೆಲ ಶಂಕಿತರು ಇದುವರೆಗೂ ಸಿಕ್ಕಿಬಿದ್ದಿಲ್ಲ’ ಎಂದು ಮೂಲಗಳು ತಿಳಿಸಿವೆ.

- ‘ಬಿಜೆಪಿ ಕಚೇರಿ ಎದುರಿನ ಸ್ಫೋಟದಲ್ಲಿ ಭಾಗಿ’

‘ಜಿಹಾದಿ ಬೆಂಗಳೂರು ತಂಡದ ಮುಖ್ಯಸ್ಥ ಮೆಹಬೂಬ್ ಪಾಷಾ ಹಾಗೂ ಈತನ ಸಹಚರರು ಮಲ್ಲೇಶ್ವರದ ಬಿಜೆಪಿ ಕಚೇರಿ ಎದುರು 2013ರಲ್ಲಿ ಸಂಭವಿಸಿದ್ದ ಬಾಂಬ್‌ ಸ್ಫೋಟ ಪ್ರಕರಣದಲ್ಲೂ ಭಾಗಿಯಾಗಿದ್ದರು. ಈ ಸ್ಫೋಟದ ನಂತರ ತಮಿಳುನಾಡಿನ ಹಲವೆಡೆ ಬಾಂಬ್ ಸ್ಫೋಟಿಸಲು ಸಂಚು ರೂಪಿಸುತ್ತಿದ್ದರು’ ಎಂದು ಮೂಲಗಳು ಹೇಳಿವೆ. ‘ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿ ‘ಅಲ್‌ ಹಿಂದ್’ ಟ್ರಸ್ಟ್ ಕಚೇರಿ ತೆರೆಯಲು ತಯಾರಿ ನಡೆಸಿದ್ದ ಮೆಹಬೂಬ್ ಪಾಷಾ ಅದೇ ಟ್ರಸ್ಟ್ ಹೆಸರಿನಲ್ಲಿ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯಲ್ಲೂ ಜಮೀನು ಖರೀದಿಸಲು ಮಾತುಕತೆ ನಡೆಸಿದ್ದನೆಂಬುದು ತನಿಖೆಯಿಂದ ತಿಳಿದುಬಂದಿತ್ತು’ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT