ಶುಕ್ರವಾರ, 12 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣ: ಶಂಕಿತ ಮಾಝ್ ಮುನೀರ್ ಅಹ್ಮದ್‌ ವಶಕ್ಕೆ

ತುಂಗಾ ತೀರದಲ್ಲಿ ಪರೀಕ್ಷಾರ್ಥ ಸ್ಫೋಟ- ಎರಡು ಪ್ರಕರಣದಲ್ಲಿ ಜೈಲು ಸೇರಿದ್ದ ಆರೋಪಿ
Published 16 ಮಾರ್ಚ್ 2024, 1:00 IST
Last Updated 16 ಮಾರ್ಚ್ 2024, 1:00 IST
ಅಕ್ಷರ ಗಾತ್ರ

ಬೆಂಗಳೂರು: ದಿ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣದ ಸಂಚಿನಲ್ಲಿ ಭಾಗಿಯಾಗಿರುವ ಶಂಕೆಯಡಿ ಶಂಕಿತ ಮಾಝ್‌ ಮುನೀರ್ ಅಹ್ಮದ್‌ನನ್ನು (26) ಎನ್‌ಐಎ ಅಧಿಕಾರಿಗಳು ಗುರುವಾರ ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯ ಫಿಶ್ ಮಾರ್ಕೆಟ್ ರಸ್ತೆಯ ಮಾಝ್, ಎಂಜಿನಿಯರಿಂಗ್ ಪದವೀಧರ. ಭಯೋತ್ಪಾದನಾ ಸಂಘಟನೆಗಳ ಪರ ಮಂಗಳೂರಿನಲ್ಲಿ ಗೋಡೆ ಬರಹ ಬರೆದಿದ್ದ ಪ್ರಕರಣ ಹಾಗೂ ಶಿವಮೊಗ್ಗದ ತುಂಗಾ ನದಿ ತೀರದಲ್ಲಿ ಬಾಂಬ್‌ಗಳನ್ನು ಪರೀಕ್ಷಾರ್ಥ ಸ್ಫೋಟಿಸಿದ್ದ ಪ್ರಕರಣದಲ್ಲಿ ಈತನನ್ನು ತನಿಖಾ ಸಂಸ್ಥೆಗಳು ಬಂಧಿಸಿದ್ದವು. ಸದ್ಯ ಈತ, ಬೆಂಗಳೂರು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದ.

‘ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ಶಂಕಿತ ಮೊಹಮ್ಮದ್ ಶಾರೀಕ್ ಹಾಗೂ ಅರಾಫತ್ ಜೊತೆಯಲ್ಲಿ ಮಾಝ್‌ ಒಡನಾಟ ಹೊಂದಿದ್ದ. ಐಎಸ್‌ (ಇಸ್ಲಾಮಿಕ್ ಸ್ಟೇಟ್) ಸಂಘಟನೆಯ ಉಗ್ರರ ಜೊತೆ ಸಂಪರ್ಕವಿಟ್ಟುಕೊಂಡು, ರಾಜ್ಯದಲ್ಲಿ ಭಯೋತ್ಪಾದನಾ ಕೃತ್ಯ ಎಸಗಲು ಸಂಚು ರೂಪಿಸುತ್ತಿದ್ದ. ಇದರ ಭಾಗವಾಗಿಯೇ ದಿ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟವಾಗಿರುವ ಅನುಮಾನವಿದ್ದು, ಇದೇ ಕಾರಣಕ್ಕೆ ಮಾಝ್‌ನನ್ನು ಕಸ್ಟಡಿಗೆ ಪಡೆಯಲಾಗಿದೆ’ ಎಂದು ತನಿಖಾ ಸಂಸ್ಥೆಯ ಮೂಲಗಳು ಹೇಳಿವೆ.

‘ಪ್ರಕರಣ ಸಂಬಂಧ ಸಂಗ್ರಹಿಸಲಾಗಿರುವ ಪುರಾವೆಗಳನ್ನು ಆಧರಿಸಿ, ಮಾಝ್‌ನನ್ನು ವಿಚಾರಣೆಗಾಗಿ ಕಸ್ಟಡಿಗೆ ನೀಡುವಂತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿತ್ತು. ಅರ್ಜಿ ಮನ್ನಿಸಿದ ನ್ಯಾಯಾಲಯ, ಮಾಝ್‌ನನ್ನು 7 ದಿನಗಳವರೆಗೆ ಕಸ್ಟಡಿಗೆ ನೀಡಿದೆ. ಗುರುವಾರವೇ (ಮಾರ್ಚ್ 14) ಮಾಝ್‌ನನ್ನು ವಶಕ್ಕೆ ಪಡೆಯಲಾಗಿದ್ದು, ವಿಚಾರಣೆ ಮುಂದುವರಿಸಲಾಗಿದೆ’ ಎಂದು ಮೂಲಗಳು ತಿಳಿಸಿವೆ.

ಆ್ಯಪ್‌ ಮೂಲಕ ಮಾತು, ಕೃತ್ಯಕ್ಕೆ ತಯಾರಿ: ‘ತೀರ್ಥಹಳ್ಳಿಯ ಮಾಝ್‌, ಬಟ್ಟೆ ವ್ಯಾಪಾರಿ ಶಾರೀಕ್‌ ಹಾಗೂ ಇತರರು, ಧಾರ್ಮಿಕ ವಿಚಾರದಲ್ಲಿ ಪ್ರಚೋದಿತರಾಗಿ ಭಯೋತ್ಪಾದನಾ ಸಂಘಟನೆ ಜೊತೆ ಒಡನಾಟ ಬೆಳೆಸಿಕೊಂಡಿದ್ದರು. ಆ್ಯಪ್‌ ಮೂಲಕ ಮಾತುಕತೆ ನಡೆಸುತ್ತಿದ್ದರು. ಐಎಸ್‌ ಉಗ್ರರು, ಆ್ಯಪ್ ಮೂಲಕ ಇವರಿಗೆ ಪ್ರಚೋದನಕಾರಿ ಪುಸ್ತಕಗಳನ್ನು ಓದಲು ನೀಡುತ್ತಿದ್ದರು. ಸೂಚನೆಗಳನ್ನೂ ನೀಡುತ್ತಿದ್ದರು’ ಎಂದು ಹೇಳಿವೆ.

‘ಭಯೋತ್ಪಾದನಾ ಕೃತ್ಯ ಎಸಗಲು ಸಂಚು ರೂಪಿಸಿದ್ದ ಮಾಝ್ ಹಾಗೂ ಇತರರು, ಕಚ್ಚಾ ಬಾಂಬ್ (ಐಇಡಿ) ತಯಾರಿಸುವುದು ಹೇಗೆ? ಎಂಬುದರ ತರಬೇತಿ ಪಡೆದಿದ್ದರು. ತಾವೇ ತಯಾರಿಸಿದ್ದ ಐಇಡಿ ಪರೀಕ್ಷಾರ್ಥ ಸ್ಫೋಟಿಸುತ್ತಿದ್ದರು’ ಎಂದು ಮೂಲಗಳು ತಿಳಿಸಿವೆ.

‘ಶಿವಮೊಗ್ಗದ ಗುರುಪುರ–ಪುರಲೆ ಸಮೀಪದಲ್ಲಿರುವ ತುಂಗಾ ನದಿಯ ತೀರದಲ್ಲಿ ಶಂಕಿತರು ಪರೀಕ್ಷಾರ್ಥವಾಗಿ ಹಲವು ಬಾರಿ ಬಾಂಬ್‌ಗಳನ್ನು ಸ್ಫೋಟಿಸಿದ್ದರು. ರಾಷ್ಟ್ರಧ್ವಜವನ್ನೂ ಸುಟ್ಟಿದ್ದರು. ಇದನ್ನು ಪತ್ತೆ ಮಾಡಿದ್ದ ಶಿವಮೊಗ್ಗ ಜಿಲ್ಲಾ ಪೊಲೀಸರು, ಮಾಝ್‌, ಸೈಯದ್ ಯಾಸೀನ್‌ನನ್ನು ಬಂಧಿಸಿದ್ದರು. ವಿಚಾರಣೆ ನಡೆಸಿದಾಗ ಭಯೋತ್ಪಾದನಾ ಕೃತ್ಯಕ್ಕೆ ಸಂಚು ರೂಪಿಸಿದ್ದ ಸಂಗತಿ ಗೊತ್ತಾಗಿತ್ತು’ ಎಂದು ಮೂಲಗಳು ಹೇಳಿವೆ.

‘ಶಿವಮೊಗ್ಗ ಪೊಲೀಸರು ಶಂಕಿತರಿಂದ 14 ಮೊಬೈಲ್‌, ಡಾಂಗಲ್, 2 ಲ್ಯಾಪ್‌ಟಾಪ್, ಪೆನ್‌ಡ್ರೈವ್, ಎಲೆಕ್ಟ್ರಾನಿಕ್ ಉಪಕರಣ, ರಿಲೆ ಸರ್ಕಿಟ್, ಬಲ್ಬ್‌ಗಳು, ಬೆಂಕಿಪೊಟ್ಟಣ, ಬ್ಯಾಟರಿಗಳು, ಸ್ಫೋಟದ ಕಚ್ಚಾ ವಸ್ತುಗಳು, ಪ್ರಮುಖ ದಾಖಲೆಗಳು ಹಾಗೂ ಕಾರು ಜಪ್ತಿ ಮಾಡಿದ್ದರು’ ಎಂದು ಮೂಲಗಳು ತಿಳಿಸಿವೆ.

ಮಾಝ್ ಬಂಧನದಿಂದ ಮಾನಸಿಕವಾಗಿ ನೊಂದಿದ್ದ ಅವರ ತಂದೆ ಮುನೀರ್‌ ಅಹಮದ್‌ ಹೃದಯಾಘಾತದಿಂದ ಮೃತಪಟ್ಟಿದ್ದರು.

‘ಸ್ಫೋಟದ ವಸ್ತುಗಳಿಗೆ ಸಾಮ್ಯತೆ’

‘ಪರೀಕ್ಷಾರ್ಥ ಬಾಂಬ್ ಸ್ಫೋಟಿಸಿದ್ದ ಸ್ಥಳದಲ್ಲಿ ದೊರೆತಿದ್ದ ವಸ್ತುಗಳಿಗೂ ರಾಮೇಶ್ವರಂ ಕೆಫೆಯಲ್ಲಿ ಸಿಕ್ಕ ವಸ್ತುಗಳಿಗೂ ಸಾಮ್ಯತೆ ಇದೆ. ಹೀಗಾಗಿ ಮಾಝ್‌ ಹಾಗೂ ತಂಡದವರ ಮೇಲೆ ಹೆಚ್ಚಿನ ಅನುಮಾನವಿದೆ. ವಿಚಾರಣೆಯಿಂದಲೇ ಮತ್ತಷ್ಟು ಮಾಹಿತಿ ಲಭ್ಯವಾಗಲಿದೆ’ ಎಂದು ತನಿಖಾ ಸಂಸ್ಥೆ ಮೂಲಗಳು ಹೇಳಿವೆ. ‘ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಇರಿಸಿದ್ದ ಶಂಕಿತನನ್ನು ಮಾಝ್ ಪ್ರಚೋದಿಸಿರುವ ಬಗ್ಗೆ ಮಾಹಿತಿ ಇದೆ. ಬಾಂಬ್ ಇರಿಸಿದ್ದ ಶಂಕಿತ ಯಾರು ಎಂಬುದು ಈತನಿಗೆ ಗೊತ್ತಿದೆ. ಜೊತೆಗೆ ಬಾಂಬ್ ಸ್ಫೋಟದ ಸಂಚಿನಲ್ಲಿ ಈತನ ಪಾತ್ರವೂ ಇರುವ ಶಂಕೆ ಇದೆ’ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT