ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹40ರ ಮಾಸ್ಕ್‌ಗೆ ₹147 ಕೊಟ್ಟು ಖರೀದಿ

ಎನ್‌–95 ಮಾಸ್ಕ್ ದರದಲ್ಲಿ 5 ಲಕ್ಷ ಕೆಎನ್‌–95 ಮಾಸ್ಕ್ ಖರೀದಿ: ರವಿಕೃಷ್ಣ ರೆಡ್ಡಿ
Last Updated 18 ಜುಲೈ 2020, 19:36 IST
ಅಕ್ಷರ ಗಾತ್ರ

ಬೆಂಗಳೂರು: ವೈದ್ಯಕೀಯ ಸಲಕರಣೆಗಳ ಖರೀದಿಯಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪದ ಬೆನ್ನಲ್ಲೇ ಈಗ 5 ಲಕ್ಷ ನಕಲಿ ಮಾಸ್ಕ್‌ಗಳನ್ನು ನಾಲ್ಕೈದು ಪಟ್ಟು ಹೆಚ್ಚಿನ ದರದಲ್ಲಿ ಖರೀದಿ ಮಾಡಿರುವ ಆರೋಪ ಮುನ್ನೆಲೆಗೆ ಬಂದಿದೆ.

‘ಚೀನಾದ ಗುನ್ಡಾಂಗ್ ಪ್ರಾಂತ್ಯದ ಶೆನ್‌ಜೆನ್ ನಗರದಲ್ಲಿ ಕೇಂದ್ರ ಕಚೇರಿ ಹೊಂದಿರುವ ಬಿವೈಡಿ ಇಂಡಿಯಾ ಪ್ರೈವೆಟ್ ಲಿಮಿಟೆಡ್ ಕಂಪನಿಯು ಚೈನ್ನೈನಲ್ಲಿ ಘಟಕ ಹೊಂದಿದೆ. ಇಲ್ಲಿಂದ 5 ಲಕ್ಷ ಮಾಸ್ಕ್‌ಗಳನ್ನುಕರ್ನಾಟಕ ಡ್ರಗ್ಸ್‌ ಲಾಜಿಸ್ಟಿಕ್ ಆ್ಯಂಡ್ ವೇರ್ ಹೌಸಿಂಗ್ ಸೊಸೈಟಿ (ಕೆಡಿಎಲ್‌ಡಬ್ಲ್ಯೂಎಸ್‌) ಮೂಲಕ ರಾಜ್ಯ ಸರ್ಕಾರ ಖರೀದಿಸಿದೆ’ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಅಧ್ಯಕ್ಷ ರವಿಕೃಷ್ಣ ರೆಡ್ಡಿ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘5 ಲಕ್ಷ ಎನ್‌–95 ಮಾಸ್ಕ್ ಖರೀದಿಗೆ ‌ಮಾರ್ಚ್‌ನಲ್ಲಿ ಟೆಂಡರ್ ಕರೆದು ₹147 ದರ ನಿಗದಿ ಮಾಡಿ ಇದೇ ಕಂಪನಿಗೆ ಖರೀದಿ ಆದೇಶವನ್ನುಕೆಡಿಎಲ್‌ಡಬ್ಲ್ಯೂಎಸ್ ನೀಡಿತು. ಎನ್–95 ಮಾಸ್ಕ್ ಪೂರೈಸಲು ಒಪ್ಪಿದ್ದ ಆ ಕಂಪನಿ, ಕೆಎನ್‌–95 ಮಾಸ್ಕ್‌ಗಳನ್ನು ಸರಬರಾಜು ಮಾಡಿದೆ. ಕರ್ನಾಟಕ ಮಾತ್ರವಲ್ಲ ತಮಿಳುನಾಡಿಗೂ ಇದೇ ಮಾಸ್ಕ್‌ಗಳನ್ನು ಪೂರೈಸಿದೆ’ ಎಂದರು.

‘ಅದೇ ಕಂಪನಿಯ ಕ್ಯಾಟ್‌ಲಾಗ್‌ನಲ್ಲಿ ದಾಖಲಿಸಿರುವಂತೆ ಕೆಎನ್‌–95 ಮಾಸ್ಕ್‌ಗಳು ಧೂಳಿನಿಂದ ರಕ್ಷಣೆ ನೀಡಬಲ್ಲವೇ ಹೊರತು ಕೊರೊನಾದಂತಹ ವೈರಾಣುಗಳಿಂದ ರಕ್ಷಣೆ ನೀಡುವುದಿಲ್ಲ. ಎನ್‌–95 ಮಾಸ್ಕ್ ತಯಾರಿಸಲು ನ್ಯಾಷನಲ್‌ ಇನ್‌ಸ್ಟಿಟ್ಯೂಟ್ ಆಫ್ ಆಕ್ಯೂಪೇಷನಲ್ ಆ್ಯಂಡ್ ಹೆಲ್ತ್‌ನಿಂದ (ಎನ್‌ಐಒಎಸ್‌ಎಚ್‌) ಪ್ರಮಾಣ ಪತ್ರವನ್ನು ಜೂನ್ 9 ರಂದು ಬಿವೈಡಿ ಕಂಪನಿ ಪಡೆದುಕೊಂಡಿದೆ. ಅದಕ್ಕೂ ಮೊದಲೇ ಎನ್‌–95 ಮಾಸ್ಕ್ ಪೂರೈಸಲು ಎರಡೂ ಸರ್ಕಾರಗಳ ಜತೆ ಒಪ್ಪಂದ ಮಾಡಿಕೊಂಡಿದೆ’ ಎಂದು ವಿವರಿಸಿದರು.

‘₹25ರಿಂದ ₹40 ದರದಲ್ಲಿ ಮಾರುಕಟ್ಟೆಯಲ್ಲಿ ದೊರೆಯಬಹುದಾದ ಉತ್ಪನ್ನಕ್ಕೆ ನಾಲ್ಕರಿಂದ ಐದು ಪಟ್ಟು ಹೆಚ್ಚಿನ ದರ ನೀಡಲಾಗಿದೆ. ಅಧಿಕಾರಿಗಳು ಈ ಕಂಪನಿ ಜತೆ ಶಾಮೀಲಾಗಿ ಆರೋಗ್ಯ ಸಿಬ್ಬಂದಿಯ ರಕ್ಷಣೆ ವಿಷಯದಲ್ಲಿ ಪ್ರಮಾದ ಎಸಗಿದ್ದಾರೆ’ ಎಂದು ರವಿಕೃಷ್ಣ ರೆಡ್ಡಿ ಆರೋಪಿಸಿದರು.

‘ಆರೋಗ್ಯ ಸಿಬ್ಬಂದಿಯ ಪ್ರಾಣದ ಜತೆಗೆ ಚೆಲ್ಲಾಟವಾಡಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಸಮಗ್ರ ತನಿಖೆ ನಡೆಸಿ ಬಿವೈಡಿ ಕಂಪನಿಗೆ ಪಾವತಿಸಿರುವ ಹೆಚ್ಚುವರಿ ಮೊತ್ತವನ್ನು ವಾಪಸ್ ಪಡೆಯಬೇಕು’ ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT