ಶನಿವಾರ, ಏಪ್ರಿಲ್ 1, 2023
29 °C
‘ಇಳಿದು ಬಾ ತಾಯಿ ಇಳಿದು ಬಾ....’ ಬೇಂದ್ರೆ ನಮನ ಕಾರ್ಯಕ್ರಮ

ಸಾಹಿತ್ಯ, ಸಂಸ್ಕೃತಿಗೆ ಜೀವಂತಿಕೆ ನೀಡಿದ ಕವಿ: ಡಾ.ಬಸವರಾಜ ಕಲ್ಗುಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಕನ್ನಡ ಸಾಹಿತ್ಯ ಹಾಗೂ ಸಂಸ್ಕೃತಿಗೆ ಜೀವಂತಿಕೆ ನೀಡಿದ ಅಪರೂಪದ ಕವಿ ದ.ರಾ.ಬೇಂದ್ರೆ. ಅವರು ಸಂಖ್ಯಾಶಾಸ್ತ್ರ ಇಟ್ಟುಕೊಂಡು ಕವನಗಳನ್ನು ರಚಿಸಿದ್ದರು’ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದ ನಿಕಟಪೂರ್ವ ನಿರ್ದೇಶಕ ಡಾ.ಬಸವರಾಜ ಕಲ್ಗುಡಿ ಅಭಿಪ್ರಾಯಪಟ್ಟರು.

ವರಕವಿ ದ.ರಾ.ಬೇಂದ್ರೆ ಅವರ 127ನೇ ಜನ್ಮದಿನದ ಅಂಗವಾಗಿ ಕನ್ನಡ ಸಾಹಿತ್ಯ ಪರಿಷತ್‌ ಮಂಗಳವಾರ ‘ಇಳಿದು ಬಾ ತಾಯಿ ಇಳಿದು ಬಾ... ಬೇಂದ್ರೆ ನಮನ’ ವಿಶೇಷ ಕಾರ್ಯಕ್ರಮದಲ್ಲಿ ʻಬೇಂದ್ರೆ ಅವರ ಸೃಜನಶೀಲತೆಯ ವಿಶಿಷ್ಟತೆʼ ಎಂಬ ವಿಷಯ ಕುರಿತು ಮಾತನಾಡಿದರು.

‘ಬೇಂದ್ರೆ ಅವರ ಸಾಹಿತ್ಯದಲ್ಲಿ ವ್ಯಕ್ತಿ ವಿಶಿಷ್ಟತೆಗಳ ಹುಡುಕಾಟದ ಬದಲಿಗೆ ಜೀವನ ಸೃಜನಶೀಲತೆ ಹುಡುಕಾಟವೇ ಇತ್ತು’ ಎಂದು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ ಜೋಶಿ ಮಾತನಾಡಿ, ‘ನಿತ್ಯವೂ ನೂತನವಾಗಿರುವ ಸಾಹಿತ್ಯವನ್ನು ನೀಡಿದ ದ.ರಾ.ಬೇಂದ್ರೆ ಅವರ ನೆನಪು ಕನ್ನಡಕ್ಕೆ ಹಾಗೂ ಕನ್ನಡ ನಾಡಿಗೆ ಸದಾ ಚೇತೋಹಾರಿ’ ಎಂದು ಹೇಳಿದರು.

‘ಜಗದ ಕವಿ ಕುವೆಂಪು ಹಾಗೂ ವರಕವಿ ಬೇಂದ್ರೆ ಇವರಿಬ್ಬರೂ ಕನ್ನಡ ಸಾಹಿತ್ಯದ ಎರಡು ಕಣ್ಣುಗಳು. ಮನಸ್ಸಿನಲ್ಲಿ ಯಾವುದೇ ತರಹದ ಬೇಸರವಾದಾಗ ನೆನಪಾಗುವುದೇ ಬೇಂದ್ರೆ ಅವರ ಸಾಹಿತ್ಯ. ಕಾರಣ ಅದರಲ್ಲಿ ಜೀವನದ ಎಲ್ಲಾ ಕಾಲಘಟ್ಟಗಳು ಅಡಕವಾಗಿದೆ’ ಎಂದು ಬಣ್ಣಿಸಿದರು.

ಕವಿಯಿತ್ರಿ ಪ್ರೊ.ಎಂ.ಆರ್‌.ಕಮಲಾ ಮಾತನಾಡಿ, ‘ಬೇಂದ್ರೆ ಬರವಣಿಗೆಯಲ್ಲಿ ಅಂತಃಕರಣ ಇರುವುದನ್ನು ಕಂಡಿದ್ದೇವೆ. ʻಒಲವುʼ ಎನ್ನುವ ಶಬ್ದಕ್ಕೆ ಬೇಂದ್ರೆ ಅವರು ಸಾಕಷ್ಟು ಅರ್ಥವನ್ನು ಇಟ್ಟುಕೊಂಡು ಸಾಹಿತ್ಯವನ್ನು ಕನ್ನಡಕ್ಕೆ ನೀಡಿದ ಮಹಾನ್‌ ಅಂತಃಕರಣವಾದಿ’ ಎಂದು ಬಣ್ಣಿಸಿದರು.

ಬೇಂದ್ರೆಯವರ ಕಾವ್ಯಗಳ ಗಾಯನವನ್ನು ಸ್ಮಿತಾ ಕಾರ್ತಿಕ್‌ ಹಾಗೂ ಅವರ ಸಂಗಡಿಗರು ಪ್ರಸ್ತುತ ಪಡಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು