ಬುಧವಾರ, ಜೂನ್ 23, 2021
30 °C
ಬೆಂಗಳೂರು ಯುವಕನಿಗೆ ಹುತಾತ್ಮರ ಸ್ಮರಣೆ ಕಾರ್ಯಕ್ರಮಕ್ಕೆ ಸಿಆರ್‌ಪಿಎಫ್‌ ಆಹ್ವಾನ

ಪುಲ್ವಾಮಾ ನೆನಪು: ಮನೆಗೆ ಬಂದವನ ಕಂಡು ಮಗನಂತೆ ಇದ್ದೀ ಎಂದು ತಬ್ಬಿದ್ದರು ತಂದೆ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

‘ಎಷ್ಟೋ ಜನರ ಬಲಿದಾನದಿಂದ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದಿದೆ. ಸಿಕ್ಕಿರುವ ಸ್ವಾತಂತ್ರ್ಯ ಉಳಿಸಿಕೊಳ್ಳಲು ಎಷ್ಟೋ ಯೋಧರ ಬಲಿದಾನ ಇಂದಿಗೂ ಮುಂದುವರಿದಿದೆ. ಅವರ ಬಲಿದಾನವನ್ನು ವ್ಯರ್ಥವಾಗಲು ನಾವು ಬಿಡಬಾರದು. ಅವರ ನೆನಪು ಸದಾ ನಮ್ಮೊಡನೆ ಇರಬೇಕು’ ಎಂದು ಹನಿಗಣ್ಣಾಗುವ ಇವರ ಹೆಸರು ಉಮೇಶ್ ಗೋಪಿನಾಥ್ ಜಾಧವ್.

ಬಾಯಿಗೆ ಬಟ್ಟೆ ಸುತ್ತಿದ ಜಾಡಿಯನ್ನು ಕೈಲಿ ಹಿಡಿದಿದ್ದ ಉಮೇಶ್ ಜಾಧವ್ ಅವರನ್ನು ದೆಹಲಿಯ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರೊಬ್ಬರು ಮಾತಿಗೆಳೆದರು.

‘ಅದೇನು ನಿಮ್ಮ ಕೈಲಿರುವುದು’ ಎಂದಾಗ ಜಾಧವ್, ‘ಇದು ಪುಲ್ವಾಮಾದಲ್ಲಿ ಹುತಾತ್ಮರಾದ 40 ಸಿಆರ್‌ಪಿಎಫ್ ಯೋಧರ ಮನೆಗಳ ಹೊಸಿಲ ಬಳಿ ಸಂಗ್ರಹಿಸಿದ ಹಿಡಿಮಣ್ಣು ಇರುವ ಜಾಡಿ. ಈ ಜಾಡಿಯನ್ನು ಸಿಆರ್‌ಪಿಎಫ್‌ಗೆ ಒಪ್ಪಿಸುತ್ತೇನೆ’ ಎಂದು ಭಾವುಕರಾದರು.

ಟ್ವಿಟರ್ ಸೇರಿದಂತೆ ಹಲವು ಸಾಮಾಜಿಕ ಮಾಧ್ಯಮಗಳಲ್ಲಿ ಜಾಧವ್‌ ವಿವರಣೆ ನೀಡುವ ವಿಡಿಯೊ ಹರಿದಾಡುತ್ತಿದೆ. ಕೆಲ ರಾಷ್ಟ್ರೀಯ ಪತ್ರಿಕೆಗಳು ಮತ್ತು ಪ್ರತಿಷ್ಠಿತ ಜಾಲತಾಣಗಳಲ್ಲಿ ಜಾಧವ್ ಸಾಹಸದ ಬಗ್ಗೆ ಸುದೀರ್ಘ ವರದಿಗಳೂ ಪ್ರಕಟವಾಗಿವೆ.


ಗುಜರಾತ್‌ನಲ್ಲಿ ಜಾಧವ್‌ ಸಂಚಾರ

ಬಾಂಬ್ ಸ್ಫೋಟದ ದಿನವೇ ಮಾಡಿದ ಸಂಕಲ್ಪ

ಪುಲ್ವಾಮಾ ದಾಳಿಯಲ್ಲಿ 40 ಸಿಆರ್‌ಪಿಎಫ್‌ ಯೋಧರು ಹುತಾತ್ಮರಾದ ದಿನ ಗೋಪಿನಾಥ್‌ ರಾಜಸ್ಥಾನದ ಅಜ್ಮೇರ್‌ನಲ್ಲಿದ್ದರು. ಸಂಗೀತ ಕಾರ್ಯಕ್ರಮ ಮುಗಿಸಿಕೊಂಡು ಬೆಂಗಳೂರಿಗೆ ಹಿಂದಿರುಗಲೆಂದು ವಿಮಾನ ನಿಲ್ದಾಣಕ್ಕೆ ಬಂದಾಗ ಅಲ್ಲಿದ್ದ ಟಿವಿ ಪರದೆಗಳಲ್ಲಿ ಯೋಧರ ಕಾನ್‌ವಾಯ್‌ ಮೇಲೆ ಬಾಂಬ್‌ ದಾಳಿ ನಡೆದ ಸುದ್ದಿ ಬಿತ್ತರವಾಗುತ್ತಿತ್ತು.

ಯೋಧರ ಬಲಿದಾನದ ಸುದ್ದಿ ತಿಳಿದ ಉಮೇಶ್‌ ಅವರ ಮನದಲ್ಲಿ ಅದೇ ಕ್ಷಣ, ‘ಹುತಾತ್ಮರ ಗೌರವಾರ್ಥ ಏನಾದರೂ ಮಾಡಲೇಬೇಕು’ ಎಂಬ ಸಂಕಲ್ಪ ಮೂಡಿತು. ಕುಟುಂಬದ ಸದಸ್ಯರು, ಗೆಳೆಯರೊಂದಿಗೆ ಈ ವಿಚಾರ ಹಂಚಿಕೊಂಡಾಗ ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಎಲ್ಲ 40 ಯೋಧರ ಮನೆಗಳಿಗೆ ಭೇಟಿ ನೀಡಿ, ಅವರ ಮನೆಗಳ ಎದುರಿನ ಹಿಡಿಮಣ್ಣು ಸಂಗ್ರಹಿಸುವ ವಿಚಾರಕ್ಕೆ ಬೆಂಬಲ ಸಿಕ್ಕಿತು.

ಕ್ರೌಡ್‌ಫಂಡ್ ಮೂಲಕ ಅಗತ್ಯ ಹಣ ಹೊಂದಿಸಿಕೊಂಡ ಜಾಧವ್‌ ಸಂಚಾರ ಶುರು ಮಾಡಿದರು. ಆದರೆ ಇದೇನು ಸುಲಭದ ಕೆಲಸವಾಗಿರಲಿಲ್ಲ. ಪುಲ್ವಾಮಾದಲ್ಲಿ ಹುತಾತ್ಮರಾದ 40 ಯೋಧರ ಮನೆಗಳು 16 ರಾಜ್ಯಗಳಲ್ಲಿವೆ. ಇದಕ್ಕಾಗಿ ಒಂದು ವರ್ಷದ ಅವಧಿಯಲ್ಲಿ ಜಾಧವ್‌ 61,000 ಕಿ.ಮೀ. ಸಂಚರಿಸಬೇಕಾಯಿತು.

ಜಾಧವ್ ಅವರ ಕೆಲಸಕ್ಕೆ ಸಿಆರ್‌ಪಿಎಫ್‌ನ ಬೆಂಬಲವೂ ಇತ್ತು.

‘ಹುತಾತ್ಮರ ಗೌರವಾರ್ಥ ಜಾಧವ್ ಮಹತ್ವದ ಕೆಲಸ ಮಾಡುತ್ತಿದ್ದಾರೆ. ತಮ್ಮ ಸಂಚಾರದ ವೇಳೆ ‘ಭಾರತ್‌ ಕೆ ವೀರ್‌’ (ಹುತಾತ್ಮರಿಗೆ ಸಾರ್ವಜನಿಕರು ನೆರವು ನೀಡಲು ವೇದಿಕೆ) ಯೋಜನೆಗೂ ಪ್ರಚಾರ ಸಿಗುವಂತೆ ಮಾಡುತ್ತಿದ್ದಾರೆ’ ಎಂದು ಸಿಆರ್‌ಪಿಎಫ್‌ನ ಡಿಎಸ್‌ಪಿ ಕಶ್ಯಪ್ ಕಡಗತ್ತೂರ್ ಟ್ವೀಟ್ ಮಾಡಿದ್ದರು.

ಕಾಶ್ಮೀರದಲ್ಲಿ ಇಂದು (ಫೆ.14, 2020) ನಡೆಯುವ ಪುಲ್ವಾಮಾ ಹುತಾತ್ಮರ ಶ್ರದ್ಧಾಂಜಲಿ ಕಾರ್ಯಕ್ರಮಕ್ಕೂ ಜಾಧವ್ ಅವರಿಗೆ ಸಿಆರ್‌ಪಿಎಫ್‌ ಆಹ್ವಾನ ನೀಡಿದೆ.


ಹುತಾತ್ಮರ ಮನೆಗಳಿಂದ ಸಂಗ್ರಹಿಸಿದ ಮಣ್ಣು ಇರುವ ಮಡಿಕೆಗಳು

ಯಲಹಂಕದಿಂದ ಆರಂಭ

ಕ್ರೌಢ್‌ಫಂಡ್‌ ಮೂಲಕ ತಮ್ಮ ಯಾತ್ರೆಗೆ ನಿಧಿ ಸಂಚಯಿಸಿಕೊಂಡಿದ್ದ ಜಾಧವ್ ಏಪ್ರಿಲ್ 9ರಂದು ಬೆಂಗಳೂರಿನ ಯಲಹಂಕದಿಂದ ಮಂಡ್ಯದ ಹುತಾತ್ಮ ಯೋಧ ಗುರು ಅವರ ಮನೆಗೆ ತೆರಳುವ ಮೂಲಕ ಪ್ರಯಾಣ ಆರಂಭಿಸಿದ್ದರು.

ನೆನಪಿನ ಬುತ್ತಿ

ಕಾಶ್ಮೀರಕ್ಕೆ ತೆರಳುವ ಮಾರ್ಗಮಧ್ಯೆ ನವದೆಹಲಿಯ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರೊಬ್ಬರ ಜೊತೆಗೆ ಜಾಧವ್ ತಮ್ಮ ಕಾರ್ಯದ ಬಗ್ಗೆ ಮಾತನಾಡಿರುವ ವಿಡಿಯೊದ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

‘ನಾನು ಇಡೀ ವರ್ಷ ತಿರುಗಾಡಿದೆ. ಹುತಾತ್ಮ ಯೋಧರ ಪ್ರತಿ ಮನೆಗಳಿಗೂ ಭೇಟಿ ನೀಡಿ, ಅವರ ಮನೆ ಎದುರಿನ ಹಿಡಿಮಣ್ಣನ್ನು ಜೋಪಾನವಾಗಿ ಜಾಡಿಯಲ್ಲಿ ಸಂಗ್ರಹಿಸಿಕೊಂಡೆ. ಹುತಾತ್ಮ ಯೋಧರ ಮನೆಗಳನ್ನು ಹುಡುಕುವುದೇ ದೊಡ್ಡ ಸಮಸ್ಯೆಯಾಗಿತ್ತು. ಪೆಟ್ರೊಲ್‌ ಬಂಕ್‌ಗಳಲ್ಲಿಯೇ ಕಾರು ನಿಲ್ಲಿಸಿ, ಹಲವು ರಾತ್ರಿಗಳನ್ನು ಅದರಲ್ಲೇ ಕಳೆದೆ. ಹೊಟೆಲ್‌ ವಾಸ್ತವ್ಯಕ್ಕೆ ವ್ಯಯಿಸುವ ಹಣ ಉಳಿಸುವುದು ನನ್ನ ಉದ್ದೇಶವಾಗಿತ್ತು’ ಎಂದು ಜಾಧವ್ ತಮ್ಮ ಸಂಚಾರದ ದಿನಗಳನ್ನು ನೆನಪಿಸಿಕೊಂಡರು.

‘ಯೋಧರ ಮನೆಗಳಲ್ಲಿ ಊಟ ಮಾಡಿದೆ, ಅವರ ಕುಟುಂಬದ ಸದಸ್ಯರೊಂದಿಗೆ ಕಣ್ಣೀರು ಹಾಕಿದೆ. ಅಷ್ಟೇಕೆ, ಡಿಸೆಂಬರ್ 21ರಂದು ನನ್ನ ಹುಟ್ಟುವನ್ನು ಪಂಜಾಬ್‌ನ ರುಪಾರ್‌ನಲ್ಲಿ ಯೋಧರ ಕುಟುಂಬವೊಂದರ ಜೊತೆಗೆ ಆಚರಿಸಿಕೊಂಡೆ’ ಎಂದು ಜಾಧವ್ ನುಡಿದರು.

‘ನನ್ನ ಕೆಲಸದ ಬಗ್ಗೆ ನನ್ನ ಹೆಂಡತಿ ಮತ್ತು ಇಬ್ಬರು ಮಕ್ಕಳಿಗೆ ಸಂತೋಷವಿದೆ. ಮುಂದೊಂದು ದಿನ ನನ್ನ ಮಕ್ಕಳು ಸಶಸ್ತ್ರ ಪಡೆಗಳಿಗೆ ಸೇರಬಹುದು’ ಎಂದು ಹೆಮ್ಮೆಯಿಂದ ನುಡಿದರು.

ವೃತ್ತಿಯಲ್ಲಿ ಫಾರ್ಮಸಿಸ್ಟ್ ಆಗಿರುವ ಜಾಧವ್ ಪ್ರವೃತ್ತಿಯಲ್ಲಿ ಸಂಗೀತಾಭ್ಯಾಸಿ. ಕರ್ನಾಟಕ ಮತ್ತು ಹಿಂದೂಸ್ತಾನಿ ಶೈಲಿಯನ್ನು ಅಭ್ಯಾಸ ಮಾಡಿದ್ದಾರೆ.


ಉಮೇಶ್ ಜಾಧವ್

ಎಂದಿಗೂ ಮರೆಯಲಾರೆ

ಯೋಧರ ಕುಟುಂಬಗಳನ್ನು ಹುಡುಕುವುದು ಸವಾಲಿನ ಕೆಲಸವಾಗಿತ್ತು ಎನ್ನುವ ಜಾಧವ್‌ ಅವರಿಗೆ ‘ನಿಮ್ಮನ್ನು ಅತಿಯಾಗಿ ಕಾಡಿದ ಸನ್ನಿವೇಶ ನೆನಪಿಸಿಕೊಳ್ಳಿ’ ಎಂದು ಪ್ರಯಾಣಿಕರು ಕೇಳಿದ್ದಾರೆ.

‘ಪುಲ್ವಾಮಾದಲ್ಲಿ ಹುತಾತ್ಮರಾದ 40 ಮಂದಿಯ ಪೈಕಿ ಪಂಜಾಬ್‌ನ ರೌಲಿ ಎಂಬ ಹಳ್ಳಿಯ 26 ವರ್ಷದ ಯುವಕ ಕುಲ್ವಿಂದರ್‌ ಸಿಂಗ್ ಸಹ ಒಬ್ಬರು. ನವೆಂಬರ್ 24ರಂದು ನಾನು ಅವರ ಮನೆಗೆ ಹೋಗಿದ್ದೆ. ಚಾಲಕರಾಗಿರುವ ಅವರ ಅಪ್ಪ ದರ್ಶನ್‌ ಸಿಂಗ್ ನನ್ನನ್ನು ನೋಡಿ, ‘ನಮಗಿದ್ದ ಒಬ್ಬನೇ ಮಗ ಹೋಗಿಬಿಟ್ಟ. ಅವನ ಹುಟ್ಟುಹಬ್ಬದ ದಿನವೇ ನೀನು ಬಂದಿದ್ದಿ. ನೋಡೋಕೂ ಥೇಟ್ ನನ್ನ ಮಗನಂತೆಯೇ ಕಾಣ್ತೀ’ ಎಂದು ನನ್ನನ್ನು ತಬ್ಬಿಕೊಂಡು ಕಣ್ಣೀರಿಟ್ಟಿದ್ದರು’ ಎಂದು ಉಮೇಶ್‌ ಜಾಧವ್ ಹನಿಗಣ್ಣಾಗುತ್ತಾರೆ.

ಜಾಧವ್ ಅನುಭವದ ಬುತ್ತಿಯಲ್ಲಿ ಇಂಥ ಹಲವು ಭಾವುಕ ಸನ್ನಿವೇಶಗಳಿವೆ.

 

 

 

 

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು