ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಗಣರಾಜ್ಯೋತ್ಸವ: ಅತಿ ಎತ್ತರದಲ್ಲಿ ಹಾರಲಿದೆ ತ್ರಿವರ್ಣ ಧ್ವಜ

Published 24 ಜನವರಿ 2024, 22:43 IST
Last Updated 24 ಜನವರಿ 2024, 22:43 IST
ಅಕ್ಷರ ಗಾತ್ರ

ಬೆಂಗಳೂರು: ವಿಜಯನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಚಂದ್ರಾಲೇಔಟ್‌ನಲ್ಲಿರುವ ನಗರದ ಅತಿ ಎತ್ತರದ ಧ್ವಜಸ್ತಂಭದಲ್ಲಿ ಜ.26ರಂದು ತ್ರಿವರ್ಣ ಧ್ವಜ ಹಾರಲಿದೆ.

ಅಂದು ಬೆಳಿಗ್ಗೆ 8ಕ್ಕೆ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ್ ಅವರು ರಾಷ್ಟ್ರಧ್ವಜ ಸ್ತಂಭವನ್ನು ಲೋಕಾರ್ಪಣೆ ಮಾಡಿ, ಧ್ವಜಾರೋಹಣ ನೆರವೇರಿಸಲಿದ್ದಾರೆ. ವಿಜಯನಗರ ಶಾಸಕ ಎಂ. ಕೃಷ್ಣಪ್ಪ ಅಧ್ಯಕ್ಷತೆವಹಿಸಲಿದ್ದಾರೆ. ಗೋವಿಂದರಾಜನಗರ ಶಾಸಕ ಪ್ರಿಯ ಕೃಷ್ಣ ಪಾಲ್ಗೊಳ್ಳಲಿದ್ದಾರೆ.

ಆರಂಭದಲ್ಲಿ ವಿವಿಧ ಕಲಾ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು, ವಾದ್ಯಗೋಷ್ಠಿ ಸಹಿತವಾಗಿ ಶಾಲಾ-ಕಾಲೇಜು ವಿದ್ಯಾರ್ಥಿಗಳಿಂದ ಪಥ ಸಂಚಲನ ನಡೆಯಲಿದೆ. 

ಬೆಳಿಗ್ಗೆ 10ರಿಂದ ನಾಡಪ್ರಭು ವಾಣಿಜ್ಯ ಸಂಕೀರ್ಣ ಆವರಣದಲ್ಲಿ ರಕ್ತದಾನ ಶಿಬಿರ ಹಾಗೂ ಕ್ಯಾನ್ಸರ್ ಉಚಿತ ತಪಾಸಣಾ ಶಿಬಿರ ಆಯೋಜಿಸಲಾಗಿದೆ. ಸಂಜೆ 6.30ಕ್ಕೆ ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ಅವರ ನೇತೃತ್ವದಲ್ಲಿ ಗಾಯಕಿ ಶಮಿತಾ ಮಲ್ನಾಡ್ ತಂಡ ರಾಷ್ಟ್ರ ನಮನ ಸಂಗೀತ ಸಂಜೆ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಇದೇ ಸಂದರ್ಭದಲ್ಲಿ ಲೇಸರ್ ಶೋ ಪ್ರದರ್ಶನವನ್ನು ಆಯೋಜಿಸಲಾಗಿದೆ.

ವೈಶಿಷ್ಟ್ಯಗಳು: ಶಾಸಕ ಎಂ. ಕೃಷ್ಣಪ್ಪ ಅವರ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ₹ 1 ಕೋಟಿ ವೆಚ್ಚದಲ್ಲಿ ಗಣರಾಜ್ಯೋತ್ಸವದ ಅಂಗವಾಗಿ 215 ಅಡಿ ಎತ್ತರದ ರಾಷ್ಟ್ರಧ್ವಜಸ್ತಂಭ ನಿರ್ಮಿಸಲಾಗಿದೆ.

ಇಲ್ಲಿವರೆಗೆ ರಾಜಭವನದ ಹಿಂಬದಿ ರಸ್ತೆಯ ರಾಷ್ಟ್ರೀಯ ಸೇನಾ ವಸ್ತು ಸಂಗ್ರಹಾಲಯ ಆವರಣದಲ್ಲಿರುವ 213 ಅಡಿ ಎತ್ತರದ ಧ್ವಜಸ್ತಂಭ ಅತಿ ಎತ್ತರದ ಸ್ತಂಭವೆಂದು ಹೆಸರಾಗಿತ್ತು. ಇದೀಗ ಅದಕ್ಕಿಂತ ಎರಡು ಅಡಿ ಎತ್ತರದ ಸ್ತಂಭ ಉದ್ಘಾಟನೆಗೆ ಸಿದ್ಧವಾಗಿದೆ. 19 ಟನ್ ತೂಕವಿರುವ ಕಂಬದ ಮೇಲ್ಭಾಗದಲ್ಲಿ ಐದು ಅಡಿಯ ಅಶೋಕ ಚಕ್ರ, ಸಿಂಹಗಳ ಲಾಂಛನವಿದೆ. ರಾಷ್ಟ್ರಧ್ವಜವನ್ನು ಕೈಯಿಂದಲೂ, ಯಾಂತ್ರಿಕವಾಗಿಯೂ ಏರಿಸಿ ಹಾಗೂ ಇಳಿಸಲು ಅವಕಾಶವನ್ನು ಕಲ್ಪಿಸಲಾಗಿದೆ. ಧ್ವಜಸ್ತಂಭದ ಸುತ್ತ ನಿರ್ಮಿಸಿರುವ ಹುಲ್ಲು ಹಾಸು ಹಾಗೂ ಕಲ್ಲಿನ ಮೆಟ್ಟಿಲುಗಳು ವಿಶಿಷ್ಟ ಮೆರುಗು ನೀಡಿವೆ ಎಂದು ವಿಜಯನಗರದ ಪ್ರದೀಪ್ ಕೃಷ್ಣ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT