ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಶೋಧನಾ ಪ್ರಬಂಧಗಳಲ್ಲಿ ಕೃತಿ ಚೌರ್ಯ: ಎ.ವಿ.ನಾವಡ

‘ಶ್ರೀಮತಿ ಸಾವಿತ್ರಮ್ಮ ಪ್ರೊ. ಎಂ.ವಿ.ಸೀತಾರಾಮಯ್ಯ ಸಾಹಿತ್ಯ ಪ್ರಶಸ್ತಿ ಪ್ರದಾನ
Published : 9 ಸೆಪ್ಟೆಂಬರ್ 2024, 20:42 IST
Last Updated : 9 ಸೆಪ್ಟೆಂಬರ್ 2024, 20:42 IST
ಫಾಲೋ ಮಾಡಿ
Comments

ಬೆಂಗಳೂರು: ‘ಇತ್ತೀಚೆಗೆ ವಿಶ್ವವಿದ್ಯಾಲಯಗಳ ಸಂಶೋಧನಾ ಪ್ರಬಂಧಗಳಲ್ಲಿ ಕೃತಿ ಚೌರ್ಯ ಢಾಳಾಗಿ ಕಾಣಿಸುತ್ತಿದೆ. ಹಿಂದೆ ಯಾರೋ ರಚಿಸಿದ ಅಧ್ಯಯನ ಪ್ರಬಂಧಗಳಲ್ಲಿನ ವಾಕ್ಯಗಳನ್ನೇ ತಮ್ಮ ಪ್ರಬಂಧಗಳಲ್ಲಿ ಯಥಾವತ್ತು ದಾಖಲಿಸಿರುವುದನ್ನು ಗಮನಿಸಿದ್ದೇನೆ’ ಎಂದು ಸಂಶೋಧಕ ಪ್ರೊ.ಎ.ವಿ.ನಾವಡ ಹೇಳಿದರು.

ಬಿಎಂಶ್ರೀ ಪ್ರತಿಷ್ಠಾನ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಶ್ರೀಮತಿ ಸಾವಿತ್ರಮ್ಮ ಪ್ರೊ. ಎಂ.ವಿ.ಸೀತಾರಾಮಯ್ಯ ಸಾಹಿತ್ಯ ಪುರಸ್ಕಾರ’ ಸ್ವೀಕರಿಸಿ ಅವರು ಮಾತನಾಡಿದರು.

‘ಒಂದೇ ವಿಷಯದ ಮೇಲಿನ ಬೇರೆ ಬೇರೆ ಸಂಶೋಧನಾ ಪ್ರಬಂಧಗಳಲ್ಲಿ ಇಂಥ ನಕಲು ವಾಕ್ಯಗಳನ್ನು ಗುರುತಿಸಿದ್ದೇನೆ. ಹೀಗೆ ನಕಲು ಮಾಡಿ, ಸಂಶೋಧನೆಯಲ್ಲಿ ಬಳಸಿರುವ ಸಾಹಿತ್ಯದ ಮೂಲ ಆಕರವನ್ನು ಹೇಳದೇ, ತಾವೇ ಬರೆದಿದ್ದೇವೆಂಬ ಭ್ರಮೆ ಉಂಟು ಮಾಡುತ್ತಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಅನೇಕ ವಿದ್ಯಾರ್ಥಿಗಳು ಸಾಹಿತ್ಯದ ಮೂಲ ಆಕರಗಳನ್ನು ಬಳಸದೇ, ‘ಗೂಗಲ್‌ ಸರ್ಚ್‌’ ಮೂಲಕ ‘ಸಂಶೋಧನೆ’ ಮಾಡುವ ಪ್ರವೃತ್ತಿ ಬೆಳೆಸಿಕೊಂಡಿದ್ದಾರೆ. ಇದರಿಂದ ಅನೇಕ ಸಂಶೋಧನಾ ಪ್ರಬಂಧಗಳಲ್ಲಿ ತಪ್ಪು ವಿಚಾರಗಳು ದಾಖಲಾಗುತ್ತಿವೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ಪ್ರೊ. ಎಂ.ವಿ.ಸೀತಾರಾಮಯ್ಯ(ಎಂವಿಸೀ) ಅವರ ಆಲೋಚನೆಗಳು, ಆದರ್ಶಗಳು ನನ್ನ ಬದುಕನ್ನು ರೂಪಿಸಿವೆ. ಅಂಥ ಮೇರು ವ್ಯಕ್ತಿಯ ಹೆಸರಿನಲ್ಲಿ ಸಾಹಿತ್ಯ ಪ್ರಶಸ್ತಿಯನ್ನು ಸ್ವೀಕರಿಸುತ್ತಿರುವುದು ನನ್ನ ಬದುಕಿನ ಭಾಗ್ಯ’ ಎಂದು ಹೇಳಿದರು.

ಬಿಎಂಶ್ರೀ ಪ್ರತಿಷ್ಠಾನದ ಸಂಸ್ಥಾಪಕರ ದಿನಾಚರಣೆ ಕುರಿತು ಮಾತನಾಡಿದ ಸಾಹಿತಿ ಪಿ.ವಿ.ನಾರಾಯಣ, ‘ಸರ್ಕಾರ ಬಿ.ಎಂ.ಶ್ರೀಕಂಠಯ್ಯನವರ(ಬಿಎಂಶ್ರೀ) ಕುರಿತು ಏನೂ ಕೆಲಸ ಮಾಡದಿದ್ದ ಕಾಲಘಟ್ಟದಲ್ಲಿ ಎಂವಿಸೀ ಅವರೇ ತಮ್ಮ ಗುರು ಬಿಎಂಶ್ರೀ ಅವರ ಹೆಸರಲ್ಲಿ ಪ್ರತಿಷ್ಠಾನ ಆರಂಭಿಸಿದರು’ ಎಂದು ಸ್ಮರಿಸಿದರು.

‘ನಾಲ್ಕು ದಶಕಗಳಿಂದ ನಡೆಯುತ್ತಿರುವ ಈ ಪ್ರತಿಷ್ಠಾನ ನೂರಾರು ಎಂ.ಫಿಲ್ ಮತ್ತು ಪಿಎಚ್‌.ಡಿ ವಿದ್ಯಾರ್ಥಿಗಳಿಗೆ ನೆರವಾಗಿದೆ. ಹತ್ತಾರು ದತ್ತಿ ಪ್ರಶಸ್ತಿಗಳು, ವಿಚಾರ ಸಂಕಿರಣಗಳನ್ನೂ ವರ್ಷಪೂರ್ತಿ ನಡೆಸುತ್ತಿದೆ’ ಎಂದರು.

ಮಲ್ಲೇಪುರಂ ಜಿ. ವೆಂಕಟೇಶ್ ಮಾತನಾಡಿ ‘ಪ್ರೊ. ಎಂವಿಸೀ ಅವರು ಸಾಹಿತ್ಯ ಕೃಷಿಯ ಜೊತೆಗೆ, ತಾವು ಬೆಳೆಯುತ್ತಾ, ಎಲ್ಲರನ್ನೂ ಬೆಳೆಸುವ ಪ್ರಯತ್ನ ಮಾಡಿದರು. ಅವರಂತೆ ನಡೆಯುತ್ತಿರುವ ಪ್ರೊ.ಎ.ವಿ. ನಾವಡ ಅವರಿಗೆ, ಪ್ರೊ.ಎಂವಿಸೀ ಸಾಹಿತ್ಯ ಪುರಸ್ಕಾರ ಸಂದಿರುವುದು ಅರ್ಥಪೂರ್ಣವಾಗಿದೆ’ ಎಂದರು.

ಕಾರ್ಯಕ್ರಮದಲ್ಲಿ ಬಿಎಂಶ್ರೀ ಪ್ರತಿಷ್ಠಾನದ ಅಧ್ಯಕ್ಷ ಬೈರಮಂಗಲ ರಾಮೇಗೌಡ ಭಾಗವಹಿಸಿದ್ದರು. ಕಾರ್ಯಾಧ್ಯಕ್ಷ ಶಾಂತರಾಜು, ಪ್ರತಿಷ್ಠಾನದ ಗುರುಪ್ರಸಾದ್, ಪ್ರೊ. ಎಂ.ವಿ.ಸೀತಾರಾಮಯ್ಯ ಅವರ ನಾಲ್ವರು ಪುತ್ರರೂ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT