ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀಸಲಾತಿ ಪರ ಮತ್ತೆ ಆಂದೋಲನ: ಸಿದ್ದರಾಮಯ್ಯ

ರಾಜ್ಯ ಹಿಂದುಳಿದ ವರ್ಗಗಳ ವಕೀಲರ ಸಂಘದ ಉದ್ಘಾಟನೆ
Last Updated 10 ಜೂನ್ 2022, 19:45 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಷ್ಟ್ರದಲ್ಲಿ ಮೀಸಲಾತಿ ಪರ ಮತ್ತೊಂದು ಆಂದೋಲನ ನಡೆಯಬೇಕಿದೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.

ನಗರದಲ್ಲಿ ಶುಕ್ರವಾರ ರಾಜ್ಯ ಹಿಂದುಳಿದ ವರ್ಗಗಳ ವಕೀಲರ ಸಂಘವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಮೀಸಲಾತಿಯನ್ನೇ ತೆಗೆಯುವ ಪ್ರಯತ್ನಗಳು ಸದ್ದಿಲ್ಲದೆ ನಡೆಯುತ್ತಿವೆ. ಸರ್ಕಾರಿ ನೌಕರಿಗಳು ಕಡಿತಗೊಳ್ಳುತ್ತಿವೆ. ಖಾಸಗೀಕರಣ ಹೆಚ್ಚುತ್ತಿದೆ. ಸಾಮಾಜಿಕ ನ್ಯಾಯ ಕಲ್ಪಿಸಬೇಕಾದ ಕೇಂದ್ರ ಸರ್ಕಾರವು ತಾರತಮ್ಯ ಧೋರಣೆ ಮಾಡುತ್ತಿದೆ’ ಎಂದು ಆಪಾದಿಸಿದರು.
‘ಸಂವಿಧಾನಕ್ಕೆ ತಿದ್ದುಪಡಿ ತಂದ ಮೋದಿ ಸರ್ಕಾರವು ಆರ್ಥಿಕವಾಗಿ ಹಿಂದುಳಿದ ಮೇಲ್ಜಾತಿಯವರಿಗೆ ಶೇ 10ರಷ್ಟು ಮೀಸಲಾತಿ ಕಲ್ಪಿಸಿದೆ. ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿ ನೀಡಬೇಕು ಎಂಬುದು ಸಂವಿಧಾನದಲ್ಲಿ ಎಲ್ಲಿದೆ? ಸಾಮಾಜಿಕವಾಗಿ ಹಿಂದುಳಿದ ತಳ ಸಮುದಾಯಕ್ಕೆ ಮೀಸಲಾತಿ ಕಲ್ಪಿಸಬೇಕೆಂಬುದು ಸಂವಿಧಾನದ ಆಶಯ’ ಎಂದು ಪ್ರತಿಪಾದಿಸಿದರು.

‘ಸಂವಿಧಾನವನ್ನೇ ಬದಲಾಯಿಸಲು ಅಧಿಕಾರಕ್ಕೆ ಬಂದಿದ್ದೇವೆ ಎಂದು ಕರೆ ಕೊಟ್ಟರೂ ಹೇಳಿಕೆಯ ವಿರುದ್ಧ ಗಟ್ಟಿಧ್ವನಿ ಮೊಳಗಲಿಲ್ಲ. ಸ್ಥಳೀಯ ಸಂಸ್ಥೆಗಳಲ್ಲಿ ಅಧ್ಯಕ್ಷ– ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಕಲ್ಪಿಸಿದ್ದು ನಾವು. ಆದರೆ, ಅದನ್ನೇ ತೆಗೆಯಲಾಗಿದೆ. ಎಚ್‌.ಕಾಂತರಾಜ್‌ ಅಧ್ಯಕ್ಷತೆಯಲ್ಲಿ ಹಿಂದುಳಿದ ವರ್ಗಗಳ ಸ್ಥಿತಿಗತಿಯ ಅಧ್ಯಯನ ನಡೆಸಲಾಗಿತ್ತು. ಅದೇ ವರದಿ ಸ್ವೀಕರಿಸಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸುವಂತೆ ಸರ್ಕಾರಕ್ಕೆ ಹೇಳಿದರೆ ರಾಜ್ಯ ಸರ್ಕಾರವು ಪ್ರತ್ಯೇಕ ಸಮಿತಿ ರಚಿಸಿದೆ. ಬಿಜೆಪಿಯುವರು ಮೀಸಲಾತಿ ವಿರೋಧಿ ಧೋರಣೆ ಅನುಸರಿಸುತ್ತಿದ್ದಾರೆ’ ಎಂದು ಆಪಾದಿಸಿದರು.

‘ಸ್ವಾತಂತ್ರ್ಯ ಬಂದು 75 ವರ್ಷವಾದರೂ ಬಡವರಿಗೆ ಹಕ್ಕುಗಳು ಸಿಕ್ಕಿಲ್ಲ. ಜಾತಿ ವ್ಯವಸ್ಥೆಯಿರುವ ತನಕ ಮೀಸಲಾತಿ ಅಗತ್ಯ. ಅಂಬೇಡ್ಕರ್‌ ಸಹ ಇದನ್ನೇ ಪ್ರತಿಪಾದಿಸಿದ್ದರು’ ಎಂದು ಹೇಳಿದರು.

ವಕೀಲರ ಸಂಘಧ ಅಧ್ಯಕ್ಷ ಸುರೇಶ್‌ ಎಂ. ಲಾತೂರು ಮಾತನಾಡಿ, ‘ಜಾತಿ ವ್ಯವಸ್ಥೆಯಿಂದ ಹಿಂದುಳಿದ ವರ್ಗವು ತುಳಿತಕ್ಕೆ ಒಳಗಾಗಿದೆ. ಹಿಂದುಳಿದ ವರ್ಗಕ್ಕೆ ರಾಜಕೀಯ ಹಾಗೂ ಶೈಕ್ಷಣಿಕ ಮೀಸಲಾತಿ ಇನ್ನೂ ಸಿಕ್ಕಿಲ್ಲ. ಕೇಂದ್ರ ರಾಜ್ಯ ಸರ್ಕಾರಗಳು ಸಂವಿಧಾನ ಉದ್ದೇಶಗಳನ್ನು ಅನುಷ್ಠಾನಕ್ಕೆ ತರುತ್ತಿಲ್ಲ. ವಿ.ಪಿ.ಸಿಂಗ್‌ ಅವಧಿಯಲ್ಲಿ ಶೇ 27ರಷ್ಟು ಮೀಸಲಾತಿ ಸಿಕ್ಕರೂ ಅನುಷ್ಠಾನವು ಸಮರ್ಪಕವಾಗಿ ನಡೆಯುತ್ತಿಲ್ಲ. ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿಯಲ್ಲೂ ಅನ್ಯಾಯವಾಗಿದೆ’ ಎಂದು ಹೇಳಿದರು.

ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎಚ್‌.ಬೆಳ್ಳಪ್ಪ, ‘ಜೀವನದಲ್ಲಿ ಬದಲಾವಣೆ ಪ್ರಮುಖಘಟ್ಟ. ಆದರೆ, ಬದಲಾವಣೆಗೆ ಮನಸ್ಸು ಒಪ್ಪಿಕೊಳ್ಳುತ್ತಿಲ್ಲ. ಅಂಬೇಡ್ಕರ್ ಬದಲಾವಣೆಗೆ ದಾರಿ ತೋರಿದರೂ, ನಾವು ಮುನ್ನೆಡೆಯುತ್ತಿಲ್ಲ. ಶಿಕ್ಷಣದಿಂದ ದೂರವುಳಿದರೆ ಜೀವನದಿಂದಲೇ ವಂಚನೆಗೆ ಒಳಗಾದಂತೆ’ ಎಂದು ಹೇಳಿದರು.

ರಾಜ್ಯ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಎಚ್‌.ಕಾಂತರಾಜ್‌, ‘ಹಿಂದುಳಿದ ವರ್ಗಕ್ಕೆ ಶೇ 27ರಷ್ಟು ಮೀಸಲಾಯಿದ್ದರೂ ಅನುಷ್ಠಾನದಲ್ಲಿ ಸಮಸ್ಯೆಯಾಗಿದೆ. ಒಳವರ್ಗೀಕರಣ ಆಗಬೇಕು. ಹಿಂದುಳಿದ ವರ್ಗಗಳ ನಾಯಕರಿಗೆ ಅಧಿಕಾರ ಸಿಕ್ಕರೆ ಮಾತ್ರ ರಾಜಕೀಯ, ಶಿಕ್ಷಣ ಕ್ಷೇತ್ರದಲ್ಲಿ ಮುಂದುವರಿಯಲು ಸಾಧ್ಯ’ ಎಂದು ಎಚ್ಚರಿಸಿದರು.

ಹಿರಿಯೂರು ಕ್ಷೇತ್ರದ ಶಾಸಕಿ ಪೂರ್ಣಿಮಾ ಶ್ರೀನಿವಾಸ್‌, ಪಿ.ಆರ್‌.ರಮೇಶ್‌, ಮಾಜಿ ಶಾಸಕ ಎಂ.ಡಿ.ಲಕ್ಷ್ಮೀನಾರಾಯಣ, ವೇಣುಗೋಪಾಲ್‌, ಸ್ವಕುಳಸಾಲಿ ಸಂಘದ ಗೌರವಾಧ್ಯಕ್ಷ ಎಸ್‌.ಶ್ರೀನಿವಾಸ್‌ ಮೂರ್ತಿ, ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ಅಧ್ಯಕ್ಷ ರಾಮಚಂದ್ರಪ್ಪ, ಧಾರವಾಡ ಕರ್ನಾಟಕದ ವಿಶ್ವವಿದ್ಯಾಲಯ ಉಪನ್ಯಾಸಕ ಡಾ.ಎಸ್.ಕೆ.ಮೇಲ್ಕರ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT