ಬುಧವಾರ, ಮೇ 18, 2022
23 °C

11 ನಾಡ ಬಂದೂಕು ಜಪ್ತಿ; ಆರೋಪಿ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ನಗರದಲ್ಲಿ ಅಕ್ರಮವಾಗಿ ಮಾರಾಟ ಮಾಡಲು ತರಲಾಗಿದ್ದ 11 ನಾಡ ಬಂದೂಕುಗಳನ್ನು ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸರು ಜಪ್ತಿ ಮಾಡಿದ್ದು, ಆ ಸಂಬಂಧ ಲಿಂಗಾಚಾರಿ ಎಂಬುವರನ್ನು (58) ಬಂಧಿಸಿದ್ದಾರೆ.

‘ರಾಮನಗರ ಜಿಲ್ಲೆಯ ಕನಕಪುರದ ಮಹಾರಾಜ್‌ ಕಟ್ಟೆಯ ನಿವಾಸಿ ಲಿಂಗಾಚಾರಿ, ತನ್ನ ಬಳಿ ಬಂದೂಕು ಇಟ್ಟುಕೊಂಡು ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದ. ಅದೇ ವೇಳೆ ದಾಳಿ ಮಾಡಿ ಆತನನ್ನು ಬಂಧಿಸಲಾಗಿದೆ. ಆತನಿಂದ 11 ನಾಡ ಬಂದೂಕು (ಸಿಂಗಲ್ ಬ್ಯಾರಲ್) ಹಾಗೂ ಬಂದೂಕಿನ ಬಿಡಿ ಭಾಗಗಳನ್ನು ಜಪ್ತಿ ಮಾಡಲಾಗಿದೆ' ಎಂದು ಪೊಲೀಸರು ಹೇಳಿದರು.

'ಬೈಕ್‌ನಲ್ಲಿ ನಗರಕ್ಕೆ ಬಂದಿದ್ದ ಆರೋಪಿ, ಬನಶಂಕರಿ ಮೂರನೇ ಹಂತದ ಇಟ್ಟಮಡು ಬಳಿ ನಿಂತಿದ್ದ. ಬಂದೂಕುಗಳನ್ನು ಪ್ಲಾಸ್ಟಿಕ್ ಚೀಲದಿಂದ ಮುಚ್ಚಿಕೊಂಡಿದ್ದ. ಅನುಮಾನಗೊಂಡ ಸ್ಥಳೀಯರೊಬ್ಬರು ಠಾಣೆಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದಾಗ ಆರೋಪಿ ಸಿಕ್ಕಿಬಿದ್ದ' ಎಂದೂ ಅವರು ತಿಳಿಸಿದರು.

'ನಗರದಲ್ಲಿ ಕೆಲವರಿಗೆ ಬಂದೂಕು ಮಾರಾಟ ಮಾಡಲು ಬಂದಿರುವುದಾಗಿ ಆರೋಪಿ ಹೇಳಿಕೆ ನೀಡಿದ್ದಾನೆ. ಯಾರಿಗೆ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದ ಎಂಬುದನ್ನು ಪತ್ತೆ ಮಾಡಲಾಗುತ್ತಿದೆ' ಎಂದೂ ಅವರು ಹೇಳಿದರು.

‘ಕಬ್ಬಿಣದ ಬ್ಯಾರಲ್ ಕೊಳವೆಗಳು, ಮದ್ದು ತುಂಬಲು ಬಳಸುವ ಸರಳುಗಳು, ಕಬ್ಬಿಣದ ಇಕ್ಕಳ ಹಾಗೂ ಇತರೆ ವಸ್ತುಗಳೂ ಆರೋಪಿ ಬಳಿ ಸಿಕ್ಕಿವೆ. ಆರೋಪಿಯೇ ಬಂದೂಕು ತಯಾರಿ ಮಾಡುತ್ತಿದ್ದ ಅನುಮಾನವೂ ಇದೆ’ ಎಂದೂ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು