ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿವೃತ್ತ ಎಸ್ಪಿಗೆ ₹ 1 ಕೋಟಿ ದಂಡ, 4 ವರ್ಷ ಜೈಲು: 15 ವರ್ಷ ಸುದೀರ್ಘ ವಿಚಾರಣೆ

Last Updated 2 ಜುಲೈ 2022, 3:11 IST
ಅಕ್ಷರ ಗಾತ್ರ

ಬೆಂಗಳೂರು: ಸರ್ಕಾರಿ ನೌಕರಿಯಲ್ಲಿದ್ದಾಗ ಭ್ರಷ್ಟಾಚಾರ ಎಸಗಿ ₹ 40.60 ಲಕ್ಷ ಮೌಲ್ಯದ ಅಕ್ರಮ ಆಸ್ತಿ ಸಂಪಾದಿಸಿದ್ದ ಪ್ರಕರಣದಲ್ಲಿ ನಿವೃತ್ತ ಎಸ್ಪಿ ಸಿ.ಎ. ಶ್ರೀನಿವಾಸ್ ಅಯ್ಯರ್‌ಗೆ 4 ವರ್ಷಗಳ ಜೈಲು ಶಿಕ್ಷೆ ಹಾಗೂ ₹ 1 ಕೋಟಿ ದಂಡ ವಿಧಿಸಿ ನಗರದ 78ನೇ ಸಿಸಿಎಚ್‌ನ್ಯಾಯಾಲಯಆದೇಶಹೊರಡಿಸಿದೆ.

ಲೋಕಾಯುಕ್ತ ಪೊಲೀಸರು 2007ರಲ್ಲಿ ದಾಖಲಿಸಿದ್ದ ಪ್ರಕರಣ ವಿಚಾರಣೆ ನಡೆಸಿದ್ದ 78ನೇ ಸಿಸಿಎಚ್‌ ನ್ಯಾಯಾಧೀಶ ಎಸ್‌.ವಿ. ಶ್ರೀಕಾಂತ್ ಅವರು ಶ್ರೀನಿವಾಸ್‌ಗೆ ಶಿಕ್ಷೆ ವಿಧಿಸಿ ಜೂನ್ 28ರಂದು ಆದೇಶ ಹೊರಡಿಸಿದ್ದಾರೆ. ‘₹ 1 ಕೋಟಿ ದಂಡ ಪಾವತಿಸಲು ವಿಫಲವಾದರೆ, ಹೆಚ್ಚುವರಿಯಾಗಿ ಎರಡು ವರ್ಷ ಶಿಕ್ಷೆ ಅನುಭವಿಸಬೇಕು’ ಎಂದೂ ಆದೇಶದಲ್ಲಿ ತಿಳಿಸಿದ್ದಾರೆ. ಪಬ್ಲಿಕ್ ಪ್ರಾಸಿಕ್ಯೂಟರ್ ಸುನೀತಾ ಅವರು ವಾದಿಸಿದ್ದರು.

‘1973ರಲ್ಲಿ ಡಿವೈಎಸ್ಪಿ (ಮೀಸಲು) ಆಗಿ ಪೊಲೀಸ್ ಇಲಾಖೆಗೆ ಸೇರಿದ್ದ ಶ್ರೀನಿವಾಸ್, ಹಲವು ಹುದ್ದೆಗಳಲ್ಲಿ ಕೆಲಸ ಮಾಡಿದ್ದರು. 2007ರಲ್ಲಿ ಯಲಹಂಕದಲ್ಲಿರುವ ಪೊಲೀಸ್ ತರಬೇತಿ ಶಾಲೆಯಲ್ಲಿ ಪ್ರಾಂಶುಪಾಲನಾಗಿದ್ದರು. ಇದೇ ಸಂದರ್ಭದಲ್ಲೇ ಶ್ರೀನಿವಾಸ್ ಅಕ್ರಮ ಆಸ್ತಿ ಸಂಪಾದನೆ ಮಾಡಿರುವ ಮಾಹಿತಿ ಲೋಕಾಯುಕ್ತಕ್ಕೆ ಸಿಕ್ಕಿತ್ತು’ ಎಂದು ಪಬ್ಲಿಕ್ ಪ್ರಾಸಿಕ್ಯೂಟರ್ ಸುನೀತಾ ಹೇಳಿದರು.

‘ಶ್ರೀನಿವಾಸ್ ಮನೆ ಮೇಲೆ ದಾಳಿ ಮಾಡಿದ್ದ ಲೋಕಾಯುಕ್ತ ಪೊಲೀಸರು, ಅವರು ₹ 81.92 ಲಕ್ಷ ಮೌಲ್ಯದ ಆಸ್ತಿ ಸಂಪಾದಿಸಿರುವುದನ್ನು ಹಾಗೂ ₹ 34.44 ಲಕ್ಷ ಖರ್ಚು ಮಾಡಿದ್ದನ್ನು ಪತ್ತೆ ಹಚ್ಚಿದ್ದರು. ಕೆಲಸಕ್ಕೆ ಸೇರಿದ ದಿನದಿಂದ ದಾಳಿಯಾಗುವವರೆಗೂ ಶ್ರೀನಿವಾಸ್ ಒಟ್ಟು ₹ 1.16 ಕೋಟಿ ಸಂಪಾದಿಸಿದ್ದರು. ಈ ಪೈಕಿ ₹ 75.77 ಲಕ್ಷ ಸಂಪಾದನೆಗೆ ಮಾತ್ರ ದಾಖಲೆ ಒದಗಿಸಿದ್ದ ಶ್ರೀನಿವಾಸ್, ಉಳಿದ ₹ 40.60 ಲಕ್ಷ ಸಂಪಾದನೆ ಬಗ್ಗೆ ಮಾಹಿತಿ ನೀಡಿರಲಿಲ್ಲ. ಇದು ಅಕ್ರಮ ಆಸ್ತಿ ಎಂಬುದನ್ನು ಪತ್ತೆ ಮಾಡಿದ್ದ ಲೋಕಾಯುಕ್ತ ಡಿವೈಎಸ್ಪಿ ವಿ. ಶೇಖರ್, ಭ್ರಷ್ಟಾಚಾರ ತಡೆ ಕಾಯ್ದೆಯಡಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು’ ಎಂದೂ ಅವರು ತಿಳಿಸಿದರು.

ಪ್ರಕರಣಕ್ಕೆ ಸಂಬಂಧಪಟ್ಟಂತೆ 15 ವರ್ಷ ಸುದೀರ್ಘ ವಿಚಾರಣೆ ನಡೆಸಿದ್ದ ನ್ಯಾಯಾಲಯ, ಇದೀಗ ಆದೇಶ ಹೊರಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT