ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವೆಂಬರ್‌ಗೆ ಎಲ್ಲೆಡೆ ರಸ್ತೆ ದುರಸ್ತಿ ಪೂರ್ಣ: ತುಷಾರ್ ಗಿರಿನಾಥ್ ಭರವಸೆ

ಪ್ರಮುಖ ಜಂಕ್ಷನ್‌ಗಳಿಗೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಭೇಟಿ, ಪರಿಶೀಲನೆ
Last Updated 4 ಸೆಪ್ಟೆಂಬರ್ 2022, 22:22 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಎಲ್ಲಾ ರಸ್ತೆಗಳು ನವೆಂಬರ್ ವೇಳೆಗೆ ಸರಿಯಾಗಲಿವೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಭರವಸೆ ನೀಡಿದರು.

ನಗರದಲ್ಲಿ ಸೆ. 7ರ ತನಕ ಮಳೆಯಾಗಲಿದೆ. ಈ ಅವಧಿಯಲ್ಲಿ ತಾತ್ಕಾಲಿಕವಾಗಿ ಸರಿಪಡಿಸಲಾಗುವುದು. ಎರಡನೇ ವಾರದಿಂದ ಒಣ ಹವೆ ನಿರೀಕ್ಷಿಸಲಾಗಿದ್ದು, ಬಳಿಕ ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದರು.

‘ಟೆಂಡರ್ ಪ್ರಕ್ರಿಯೆ ಪೂರ್ಣ ಗೊಂಡಿದ್ದು, ಅಕ್ಟೋಬರ್ ಮೊದಲ ಅಥವಾ ಎರಡನೇ ವಾರದಲ್ಲಿ ಕಾಮಗಾರಿ ಆರಂಭಿಸಲಾಗುವುದು. ನವೆಂಬರ್‌ ವೇಳೆಗೆ ಎಲ್ಲೆಡೆ ಹೊಸ ರಸ್ತೆಗಳು ಇರಲಿವೆ. ಗುಂಡಿಗಳಿಂದ ಮುಕ್ತವಾಗಲಿವೆ’ ಎಂದು ಹೇಳಿದರು.

ಮುಖ್ಯಮಂತ್ರಿಗಳ ನವ ನಗ ರೋತ್ಥಾನ ಕಾರ್ಯಕ್ರಮದಡಿ ಬಿಡು ಗಡೆಯಾದ ₹6 ಸಾವಿರ ಕೋಟಿ ಅನು ದಾನದಲ್ಲಿ ₹3,698 ಕೋಟಿಯನ್ನು ‌ವಾರ್ಡ್‌ ಮಟ್ಟದ ಬಡಾವಣೆ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುವುದು. ಪ್ರಮುಖ ರಸ್ತೆಗಳಿಗೆ ಡಾಂಬರ್ ಹಾಕಲು ₹700 ಕೋಟಿ ನಿಗದಿ ಮಾಡಲಾಗಿದೆ ಎಂದು ವಿವರಿಸಿದರು.

ಪ್ರಮುಖ ಜಂಕ್ಷನ್‌ಗಳಿಗೆ ಭೇಟಿ: ವಾಹನಗಳ ಸುಗಮ ಸಂಚಾರ ಮತ್ತು ಮಳೆ ನೀರು ರಸ್ತೆ ಮೇಲೆ ನಿಲ್ಲುವುದನ್ನು ತಪ್ಪಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಲು ನಗರದ ಪ್ರಮುಖ ಜಂಕ್ಷನ್‌ಗಳಲ್ಲಿ ತುಷಾರ್ ಗಿರಿನಾಥ್ ಶನಿವಾರ ರಾತ್ರಿ ಪರಿಶೀಲನೆ ನಡೆಸಿದರು.

ಹೊರವರ್ತುಲ ರಸ್ತೆಯಲ್ಲಿ ಇಕೊಸ್ಪೇಸ್ ಬಳಿ ರಾಜ ಕಾಲುವೆಯ ಪುನರ್ ವಿನ್ಯಾಸ ಕಾಮಗಾರಿ ಪ್ರಗತಿಯಲ್ಲಿದ್ದು, ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸಬೇಕು. ಮಳೆ ನೀರು ಸರಾಗವಾಗಿ ಹರಿಯಲು ಪರ್ಯಾಯವಾಗಿ ಕ್ರಾಸ್ ಕಲ್ವರ್ಟ್‌ಗಳನ್ನು ನಿರ್ಮಿಸಬೇಕು ಎಂದು ಸೂಚಿಸಿದರು.

ಸದ್ಯ ಇರುವ ಪ್ರಮುಖ ನೀರು ಗಾಲುವೆಗೆ ಅಳವಡಿಸಿರುವ ಮೂರು ಕೊಳವೆಗಳು ಚಿಕ್ಕದಾಗಿವೆ. ಅದನ್ನು ವಿಸ್ತರಿಸಬೇಕು. ಮೇಲ್ಸೇತುವೆ ಬಳಿ ನೀರು ಕೆಳಭಾಗದಲ್ಲಿ ಸರಾಗವಾಗಿ ಹರಿದು ಹೋಗಲು ಕಾಮಗಾರಿ ಕೈಗೆತ್ತಿಕೊಳ್ಳಬೇಕು. ಇಕೊಸ್ಪೇಸ್ ಆವರಣದ ಕೆಇಬಿ ಸ್ಟೇಷನ್ ಬಳಿ ರಾಜಕಾಲುವೆ ಒತ್ತುವರಿ ತೆರವಾಗಿದೆ. ನೀರು ಸರಾಗವಾಗಿ ಹರಿದು ಹೋಗಲು ಕಾಲುವೆಯ ಮೇಲೆ ಅಳವಡಿಸಿರುವ ಸ್ಲ್ಯಾಬ್‌ಗಳನ್ನೂ ತೆಗೆಯಬೇಕು ಎಂದು ತಿಳಿಸಿದರು.

ಬಳಿಕ ಇಬ್ಲೂರು ಜಂಕ್ಷನ್ ಪರಿಶೀಲನೆ ನಡೆಸಿದ ಅವರು, ಪಾದಚಾರಿ ಮಾರ್ಗ ಅಭಿವೃದ್ಧಿ ಪಡಿಸಲು ಸೂಚನೆ ನೀಡಿದರು.
ಜೆಡಿ ಮರ ಜಂಕ್ಷನ್‌ನಲ್ಲಿ ರಸ್ತೆ ಬದಿಯ ಸಣ್ಣ ಕಾಲುವೆಗಳನ್ನು ಸ್ವಚ್ಛಗೊಳಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಸುಮನಹಳ್ಳಿ ಜಂಕ್ಷನ್‌ನಲ್ಲಿ ಶೌಚಾ ಲಯವನ್ನು ಸಾರ್ವಜನಿಕರ ಸೇವೆಗೆ ಕೂಡಲೇ ಒದಗಿಸಬೇಕು. ಪಾದಚಾರಿ ಮೇಲ್ಸೇತುವೆ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಬೇಕು. ಮೇಲ್ಸೇತುವೆ ಕೆಳಭಾಗದಲ್ಲಿ ಕಿರು ಉದ್ಯಾನ ನಿರ್ಮಾಣ ಮಾಡಬೇಕು ಎಂದು ಸೂಚನೆ ನೀಡಿದರು.

ಕೆ.ಆರ್.ಪುರ, ಗೊರಗುಂಟೆ ಪಾಳ್ಯ, ಸಾರಕ್ಕಿ ಜಂಕ್ಷನ್‌ಗಳಲ್ಲೂ ಪರಿಶೀಲನೆ ನಡೆಸಿದರು. ವಲಯ ಆಯುಕ್ತರಾದ ತ್ರಿಲೋಕ್ ಚಂದ್ರ, ಹರೀಶ್
ಕುಮಾರ್, ರಾಮ್ ಪ್ರಸಾದ್ ಮನೋಹರ್, ವಲಯ ಜಂಟಿ ಆಯುಕ್ತರಾದ ಪೂರ್ಣಿಮಾ, ವೆಂಕಟಾ ಚಲಪತಿ, ನಾಗರಾಜ್, ಮುಖ್ಯ ಎಂಜಿನಿಯರ್ ಲೋಕೇಶ್, ಬಸವರಾಜ್ ಕಬಾಡೆ, ಶಶಿಕುಮಾರ್, ವಿಜಯಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT