ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಗಡಿ ತೆರವು: ಬಿಬಿಎಂಪಿ ಅಧಿಕಾರಿಗಳ ಮೇಲೆ ಪ್ರಕರಣ ದಾಖಲಿಸಿ- ವ್ಯಾಪಾರಿಗಳ ಆಗ್ರಹ

ಬೆಂಗಳೂರು ಜಿಲ್ಲಾ ಬೀದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟ ಆಗ್ರಹ
Published 28 ನವೆಂಬರ್ 2023, 16:08 IST
Last Updated 28 ನವೆಂಬರ್ 2023, 16:08 IST
ಅಕ್ಷರ ಗಾತ್ರ

ಬೆಂಗಳೂರು: ‘ನಗರದಲ್ಲಿ ಇತ್ತೀಚೆಗೆ ಬೀದಿ ವ್ಯಾಪಾರಿಗಳನ್ನು ತೆರವುಗೊಳಿಸಿ, ಅವರ ವಸ್ತುಗಳನ್ನು ಜಪ್ತಿ ಮಾಡಿರುವ ಬಿಬಿಎಂಪಿ ಅಧಿಕಾರಿಗಳ ಮೇಲೆ ಪ್ರಕರಣ ದಾಖಲಿಸಬೇಕು’ ಎಂದು ಬೆಂಗಳೂರು ಜಿಲ್ಲಾ ಬೀದಿ ವ್ಯಾಪಾರಿಗಳ ಸಂಘಟನೆಗಳ ಒಕ್ಕೂಟ ಆಗ್ರಹಿಸಿದೆ.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಎಸ್. ಬಾಬು, ‘ಬ್ರ್ಯಾಂಡ್‌ ಬೆಂಗಳೂರಿನಲ್ಲಿ ಬಡವರಿಗೆ ವ್ಯಾಪಾರ ಮಾಡಲು ಜಾಗವಿಲ್ಲವೇ? ಕಳೆದ ಆರು ತಿಂಗಳಲ್ಲಿ ಮಹದೇವಪುರ ವ್ಯಾಪ್ತಿಯೊಂದರಲ್ಲಿ 1 ಸಾವಿರಕ್ಕೂ ಹೆಚ್ಚು ಬೀದಿ ವ್ಯಾಪಾರಿಗಳನ್ನು ಎತ್ತಂಗಡಿ ಮಾಡಲಾಗಿದೆ. ಮಲ್ಲೇಶ್ವರ, ಜಯನಗರ 4ನೇ ಬಡಾವಣೆ ಹಾಗೂ ಬನಶಂಕರಿಯಲ್ಲಿ ಬೀದಿ ವ್ಯಾಪಾರಿಗಳನ್ನು ಬಿಬಿಎಂಪಿ ಅಧಿಕಾರಿಗಳು ಒತ್ತಾಯಪೂರ್ವಕವಾಗಿ ತೆರವುಗೊಳಿಸಿದ್ದಾರೆ. ಇದರಿಂದ, ಹಲವಾರು ವ್ಯಾಪಾರಿಗಳು ನಷ್ಟ ಅನುಭವಿಸಿ ಬೀದಿ ಪಾಲಾಗಿದ್ದು, ಇಂತಹ ವ್ಯಾಪಾರಿಗಳಿಗಾಗಿರುವ ನಷ್ಟವನ್ನು ಭರಿಸಬೇಕು’ ಎಂದು ಒತ್ತಾಯಿಸಿದರು.

ವಕೀಲ ವಿನಯ್ ಶ್ರೀನಿವಾಸ್, ‘ಬೀದಿ ವ್ಯಾಪಾರಿಗಳ ಜೀವನೋಪಾಯ ರಕ್ಷಣೆ ಹಾಗೂ ನಿಯಂತ್ರಣ ಕಾಯ್ದೆ–2014ರ ಪ್ರಕಾರ ನಗರದಲ್ಲಿರುವ ಬೀದಿ ವ್ಯಾಪಾರಿಗಳ ಸಮೀಕ್ಷೆ ನಡೆಸಬೇಕು. ಈ ಕಾಯ್ದೆಯ ಬಗ್ಗೆ ಬಿಬಿಎಂಪಿ ಅಧಿಕಾರಿಗಳು ಮತ್ತು ಪೊಲೀಸರಿಗೆ ಈ ಅರಿವು ಮೂಡಿಸುವ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಪಟ್ಟಣ ವ್ಯಾಪಾರ ಸಮಿತಿಗಳಿಗೆ ಕಾನೂನಿನ ಪ್ರಕಾರ ಕಚೇರಿ, ಬಜೆಟ್‌ ನೀಡಬೇಕು. ಏನಾದರೂ ಸಮಸ್ಯೆಗಳು ಬಂದಾಗ ಮೊದಲು ಸಮಿತಿಯಲ್ಲಿ ಚರ್ಚಿಸಬೇಕು. ಕಾಯ್ದೆಯ ಕಲಂ 20ರಂತೆ ದೂರು ನಿವಾರಣೆ ಸಮಿತಿ ರಚಿಸಬೇಕು’ ಎಂದು ಹೇಳಿದರು.

‘2017ರಲ್ಲಿ ಬೀದಿ ವ್ಯಾಪಾರಿಗಳಿಗೆ ಬಿಬಿಎಂಪಿ ನೀಡಿರುವ ಗುರುತಿನ ಚೀಟಿ ಹಾಗೂ ವ್ಯಾಪಾರ ಪ್ರಮಾಣ ಪತ್ರದ ಸಿಂಧುತ್ವವನ್ನು ಮುಂದಿನ ಸಮೀಕ್ಷೆ ನಡೆಸುವವರೆಗೂ ಮುಂದುವರಿಸುವಂತೆ ಆದೇಶ ಹೊರಡಿಸಬೇಕು’ ಎಂದು ಹೇಳಿದರು.

ಸಂಘದ ಉಪಾಧ್ಯಕ್ಷ ಸಯ್ಯದ್ ಜಮೀರ, ಸದಸ್ಯೆ ವನಜಾಕ್ಷಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT