ಬುಧವಾರ, ಮಾರ್ಚ್ 3, 2021
29 °C

ಡಿಐಜಿ ಕಚೇರಿಯಲ್ಲಿ ಯಂತ್ರ ಕದ್ದಿದ್ದವನ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಡಿಐಜಿ ಕಚೇರಿಯಲ್ಲಿ ಯಂತ್ರಗಳನ್ನು ಕಳವು ಮಾಡಿದ್ದ ಆರೋಪಿ ವೆಂಕಟೇಶ್ ಪಿಳ್ಳ (31) ಎಂಬುವರನ್ನು ಉಪ್ಪಾರಪೇಟೆ ಪೊಲೀಸರು ಬಂಧಿಸಿದ್ದಾರೆ.

‘ದುಶ್ಚಟಗಳ ದಾಸನಾಗಿದ್ದ ಆರೋಪಿ, ಹಣ ಹೊಂದಿಸಲು ಕೃತ್ಯ ಎಸಗುತ್ತಿದ್ದರು. ಅವರಿಂದ ₹ 1.70 ಲಕ್ಷ ಮೌಲ್ಯದ ಜನರೇಟರ್, ಕಟ್ಟಿಗೆ ಕತ್ತರಿಸುವ ಯಂತ್ರ ಸೇರಿ ಹಲವು ಯಂತ್ರಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ತಿಳಿಸಿದರು.

‘ಆರೋಪಿ ಯಾವುದೇ ಕೆಲಸಕ್ಕೆ ಹೋಗುತ್ತಿರಲಿಲ್ಲ. ತಮ್ಮ ಖರ್ಚಿಗೆ ಹಣಹೊಂದಿಸಲು, ರಾತ್ರಿ ವೇಳೆ ಸುಲಿಗೆ ಮಾಡುತ್ತಿದ್ದರು. ರಸ್ತೆಯಲ್ಲಿ ಒಂಟಿಯಾಗಿ ಹೋಗುತ್ತಿದ್ದ ವ್ಯಕ್ತಿಗಳು ಹಾಗೂ ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರನ್ನು ಬೆದರಿಸಿ ಹಣ, ಮೊಬೈಲ್ ದೋಚುತ್ತಿದ್ದರು. ಕದ್ದ ಮೊಬೈಲ್‌ಗಳನ್ನು ಮಾರಾಟ ಮಾಡಿ ಬಂದ ಹಣದಲ್ಲಿ ಮೋಜು ಮಾಡುತ್ತಿದ್ದರು’ ಎಂದೂ ಹೇಳಿದರು.

‘ಕಬ್ಬನ್‌ ಉದ್ಯಾನ ಬಳಿ ಇರುವ ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಡಿಐಜಿ ಕಚೇರಿಯ ಕಟ್ಟಡದಲ್ಲಿ ಕಾಮಗಾರಿ ನಡೆಯುತ್ತಿತ್ತು. ಕಾರ್ಮಿಕರು ಅ. 13ರಂದು ಸಂಜೆ ಕೆಲಸ ಮುಗಿಸಿ ಜನರೇಟರ್, ಕಟ್ಟಿಗೆ ಕತ್ತರಿಸುವ ಯಂತ್ರ ಸೇರಿದಂತೆ ಹಲವು ಯಂತ್ರಗಳನ್ನು ಕೊಠಡಿಯೊಂದರಲ್ಲಿ ಇಟ್ಟು ಬೀಗ ಹಾಕಿಕೊಂಡು ಹೋಗಿದ್ದರು.’

‘ತಡರಾತ್ರಿ ಕೊಠಡಿಯ ಬೀಗ ಮುರಿದಿದ್ದ ಆರೋಪಿ, ಎಲ್ಲ ಯಂತ್ರಗಳನ್ನು ಕದ್ದೊಯ್ದಿದ್ದರು. ಮರುದಿನ ಬೆಳಿಗ್ಗೆ ಕೆಲಸ ಬಂದಿದ್ದ ಕಾರ್ಮಿಕರಿಗೆ ಕಳ್ಳತನ ಆಗಿರುವುದು ಗೊತ್ತಾಗಿತ್ತು. ಈ ಕುರಿತು ಪ್ರಕರಣ ದಾಖಲಾಗಿತ್ತು’ ಎಂದೂ ಪೊಲೀಸರು ಹೇಳಿದರು.

‘ಸಿ.ಸಿ. ಟಿ.ವಿ ಕ್ಯಾಮೆರಾ ದೃಶ್ಯಗಳ ಪರಿಶೀಲನೆ ವೇಳೆ ಆರೋಪಿಯ ಮುಖಚಹರೆ ಪತ್ತೆಯಾಗಿತ್ತು. ಅದನ್ನು ಆಧರಿಸಿ ತನಿಖೆ ಮುಂದುವರಿಸಿದಾಗ ಆರೋಪಿ ಸಿಕ್ಕಿಬಿದ್ದಿದ್ದಾರೆ’ ಎಂದರು.

ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ; ಅರ್ಚಕ ಬಂಧನ
ಬೆಂಗಳೂರು: ಹತ್ತು ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಆರೋಪದಡಿ ವೆಂಕಟರಾಮಪ್ಪ (62) ಎಂಬುವರನ್ನು ದೇವನಹಳ್ಳಿ ಪೊಲೀಸರು ಬಂಧಿಸಿದ್ದಾರೆ.

‘ಚಿಕ್ಕಬಳ್ಳಾಪುರದ ನಿವಾಸಿಯಾದ ವೆಂಕಟರಾಮಪ್ಪ, ದೇವಸ್ಥಾನವೊಂದರ ಅರ್ಚಕ. ದೇವನಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ವಾಸವಿರುವ ಮಗಳ ಮನೆಗೆ ಬಂದಿದ್ದಾಗ ಕೃತ್ಯ ಎಸಗಿದ್ದಾರೆ. ಬಾಲಕಿ ಪೋಷಕರು ನೀಡಿರುವ ದೂರು ಆಧರಿಸಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ (ಪೋಕ್ಸೊ) ಅಡಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಮಗಳ ಪತಿಯೂ ದೇವನಹಳ್ಳಿ ಬಳಿ ದೇವಸ್ಥಾನವೊಂದರ ಅರ್ಚಕರು. ದಂಪತಿ ಕೆಲಸ ನಿಮಿತ್ತ ಬೇರೆ ಊರಿಗೆ ಹೋಗಿದ್ದರು. ಹೀಗಾಗಿ, ಅಳಿಯ ಇರುತ್ತಿದ್ದ ದೇವಸ್ಥಾನದಲ್ಲಿ ಪೂಜೆ ಮಾಡಲು ವೆಂಕಟರಾಮಪ್ಪ ಬಂದಿದ್ದರು. ಮನೆಯಲ್ಲಿ ಒಬ್ಬರೇ ಇದ್ದರು.’

‘ದೇವಸ್ಥಾನ ಬಳಿಯೇ ಬಾಲಕಿ ಆಟವಾಡಲು ಹೋಗಿದ್ದಳು. ಅದೇ ವೇಳೆ ಆರೋಪಿ, ಸಿಹಿ ತಿನಿಸು ನೀಡಿ ಬಾಲಕಿಯನ್ನು ಮನೆಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದರು.’

‘ಬಾಲಕಿ ಕಾಣದಿದ್ದಾಗ ಆತಂಕಗೊಂಡಿದ್ದ ಪೋಷಕರು ಹುಡುಕಾಟ ನಡೆಸಿದ್ದರು. ಹೂವಿನ ವ್ಯಾಪಾರಿಯೊಬ್ಬರು ನೀಡಿದ್ದ ಮಾಹಿತಿಯಂತೆ ಆರೋಪಿ ಮನೆ ಬಳಿ ಹೋಗಿದ್ದರು. ಅಳುತ್ತ ಮನೆಯಿಂದ ಹೊರಬಂದಿದ್ದ ಬಾಲಕಿ, ಪೋಷಕರಿಗೆ ವಿಷಯ ತಿಳಿಸಿದ್ದಳು’ ಎಂದೂ ಪೊಲೀಸರು ವಿವರಿಸಿದರು.

‘ಪ್ರಕರಣ ದಾಖಲಾಗುತ್ತಿದ್ದಂತೆ ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಬಾಲಕಿ ಹೇಳಿಕೆ ಹಾಗೂ ಪ್ರತ್ಯಕ್ಷದರ್ಶಿಗಳ ಮಾಹಿತಿಯಂತೆ ವೆಂಕಟರಮಣಪ್ಪ ಅವರನ್ನು ಬಂಧಿಸಲಾಗಿದೆ’ ಎಂದೂ ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು