ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೋಬೊ ಬಳಕೆ: ಶಸ್ತ್ರಚಿಕಿತ್ಸೆ ನಿಖರ: ಡಾ.ಆನಂದ ಕುಮಾರ್‌

ಲ್ಯಾಪ್ರೊಸ್ಕೋಪಿಕ್‌ ಮತ್ತು ಜನರಲ್‌ ಸರ್ಜನ್‌ ಡಾ.ಆನಂದ ಕುಮಾರ್‌
Last Updated 23 ಫೆಬ್ರುವರಿ 2020, 19:58 IST
ಅಕ್ಷರ ಗಾತ್ರ

ಬೆಂಗಳೂರು: ‘ರೊಬೋಟಿಕ್ಸ್‌ ತಂತ್ರಜ್ಞಾನ ಬಳಕೆಯಿಂದಾಗಿ ಶಸ್ತ್ರಚಿಕಿತ್ಸೆಯನ್ನು ಹೆಚ್ಚು ನಿಖರವಾಗಿ ನಡೆಸುವುದು ಸಾಧ್ಯವಾಗಿದೆ. ಇದು ಶಸ್ತ್ರಚಿಕಿತ್ಸಕರ ಶ್ರಮವನ್ನು ಕಡಿಮೆ ಮಾಡಿದೆ. ಕೈಗಳಿಂದ ನಡೆಸಲಾಗದ ಕ್ಲಿಷ್ಟ ಶಸ್ತ್ರಚಿಕಿತ್ಸೆಗಳನ್ನು ರೋಬೊಗಳ ಮೂಲಕ ನಡೆಸುವುದು ಸಾಧ್ಯವಾಗಿದೆ’ ಎಂದು ಲ್ಯಾಪ್ರೊಸ್ಕೋಪಿಕ್‌ ಮತ್ತು ಜನರಲ್‌ ಸರ್ಜನ್‌ ಡಾ.ಆನಂದ ಕುಮಾರ್‌ ಅಭಿಪ್ರಾಯಪಟ್ಟರು.

‘ಮುನ್ನೋಟ’ ವತಿಯಿಂದ ಭಾನುವಾರ ಏರ್ಪಡಿಸಿದ್ದ ‘ಅರಿಮೆ’ ಕಾರ್ಯಕ್ರಮದಲ್ಲಿ ಕ್ರಿಸ್ತಪೂರ್ವ500ನೇ ಶತಮಾನದಲ್ಲಿ ಶುಶ್ರುತನ ಕಾಲದಿಂದ ಆರಂಭವಾಗಿ ರೋಬೋಟಿಕ್‌ ಶಸ್ತ್ರಚಿಕಿತ್ಸೆಯವರೆಗಿನ ಶಸ್ತ್ರಚಿಕಿತ್ಸೆ ಕ್ಷೇತ್ರದಲ್ಲಿ ಆಗಿರುವ ಬೆಳವಣಿಗೆಗಳ ಬಗ್ಗೆ ಅವರು ಬೆಳಕು ಚೆಲ್ಲಿದರು.

‘ನಗರದ ಹಲವು ಆಸ್ಪತ್ರೆಗಳಲ್ಲೂ ರೋಬೋಟಿಕ್‌ ಶಸ್ತ್ರಚಿಕಿತ್ಸೆ ಸೌಕರ್ಯ ಲಭ್ಯ. ಶಸ್ತ್ರಚಿಕಿತ್ಸಕರು ರೋಬೋಟ್‌ಗಳನ್ನು ನಿಯಂತ್ರಿಸುತ್ತಾರೆ. ಈ ಸೌಕರ್ಯ ಹೊಂದುವುದಕ್ಕೆ ಹಾಗೂ ಇದನ್ನು ಬಳಸಿ ಶಸ್ತ್ರಚಿಕಿತ್ಸೆ ನಡೆಸುವುದಕ್ಕೆ ದುಬಾರಿ
ವೆಚ್ಚವಾಗುತ್ತದೆ. ಹಾಗಾಗಿ ಅನಿವಾರ್ಯವಿದ್ದರೆ ಮಾತ್ರ ಇದರ ಮೊರೆಹೋಗಬಹುದು’ ಎಂದರು.

‘ಹೊಟ್ಟೆಯ ಭಾರ ಇಳಿಸುವ ಬೇರಿಯಾಟ್ರಿಕ್‌ ಶಸ್ತ್ರಚಿಕಿತ್ಸೆ ಇತ್ತೀಚೆಗೆ ಜನಪ್ರಿಯವಾಗುತ್ತಿದೆ. ಇದರಲ್ಲಿ ಜಠರವನ್ನು ಕತ್ತರಿಸಿ ತೆಗೆಯಲಾಗುತ್ತದೆ. ಈ ಶಸ್ತ್ರಚಿಕಿತ್ಸೆಗೆ ಒಳಗಾದ ವ್ಯಕ್ತಿ ಹೆಚ್ಚು ಆಹಾರ ಸೇವಿಸಲು ಸಾಧ್ಯವಾಗುವುದಿಲ್ಲ. ಹಾಗಾಗಿ ಅಂತಹವರ ದೇಹತೂಕವೂ ಕಡಿಮೆಯಾಗುತ್ತದೆ. ಇದರಿಂದ ಪ್ರಯೋಜನಗಳಿರುವಂತೆಯೇ ಅನನುಕೂಲಗಳೂ ಇವೆ. ಅವರ ದೇಹದಲ್ಲಿ ಪೋಷಕಾಂಶಗಳ ಕೊರತೆ ಕಾಡಬಹುದು. ಅದನ್ನು ಭರಿಸುವುದಕ್ಕೆ ಪೂರಕ ಔಷಧಗಳನ್ನು ನೀಡಬೇಕಾಗುತ್ತದೆ. ಜಠರ ಕೇವಲ ಮಾಂಸದ ಚೀಲ. ಹಾಗಾಗಿ ಶಸ್ತ್ರಚಿಕಿತ್ಸೆ ಬಳಿಕವೂ ಹೊಟ್ಟೆಯ ಗಾತ್ರ ಮತ್ತೆ ಹೆಚ್ಚುವ ಸಾಧ್ಯತೆಯೂ ಇದೆ’ ಎಂದು ವಿವರಿಸಿದರು.

‘ಅರಿವಳಿಕೆಗಳು ಹಾಗೂ ಜೀವಪ್ರತಿರೋಧಕ ಔಷಧಿ ಪೆನ್ಸಿಲಿನ್‌ ಶೋಧ ಶಸ್ತ್ರಚಿಕಿತ್ಸೆಗೆ ಹೊಸ ಆಯಾಮ ನೀಡಿತು. ನೋವು ನಿವಾರಣೆಯಲ್ಲಿ ಹಾಗೂ ಸೋಂಕು ತಗಲುವುದನ್ನು ತಡೆಯುವಲ್ಲಿ ಇವುಗಳ ಪಾತ್ರ ಮಹತ್ವದ್ದು’ ಎಂದು ವಿವರಿಸಿದರು.

‘ಪ್ರತಿದಿನವೂ ಕಲಿಕೆ’

‘ಒಬ್ಬ ಯಶಸ್ವಿ ಶಸ್ತ್ರಚಕಿತ್ಸಕ ಕೌಶಲ ಸಿದ್ಧಿಸಿಕೊಳ್ಳುವುದಕ್ಕೆ ಅನೇಕ ವರ್ಷಗಳೇ ತಗಲುತ್ತವೆ. ಇದೊಂದು ತಪಸ್ಸಿನಂತೆ. ಪ್ರತಿಯೊಂದು ಶಸ್ತ್ರಚಿಕಿತ್ಸೆ ಮೂಲಕವೂ ನಾವು ಹೊಸತನ್ನು ಕಲಿಯುತ್ತೇವೆ. ನಾನು ಈಗಲೂ ಮಹತ್ವದ ಶಸ್ತ್ರಚಿಕಿತ್ಸೆಗಳನ್ನು ಮಾಡುವುದಕ್ಕೆ ಮುನ್ನ ಸಾಕಷ್ಟು ಅಭ್ಯಾಸ ಮಾಡಿಕೊಂಡೇ ಹೋಗುತ್ತೇನೆ’ ಎಂದು ಆನಂದ್‌ ಕುಮಾರ್ ತಿಳಿಸಿದರು.

‘ಗೂಗಲ್‌ನಲ್ಲಿ ಮಾಹಿತಿ ಹುಡುಕಾಟ ಒಳ್ಳೆಯದು’

‘ಶಸ್ತ್ರಚಿಕಿತ್ಸೆಗಳ ಬಗ್ಗೆ ರೋಗಿಗಳಿಗೆ ಅವರ ಕುಟುಂಬದವರಿಗೆ ಸಾಕಷ್ಟು ಭಯ ಇರುತ್ತದೆ. ಯಾವುದೇ ಶಸ್ತ್ರಚಿಕಿತ್ಸೆಗೆ ಒಳಗಾಗುವ ಮುನ್ನ ರೋಗಿಗಳು ಆ ಕುರಿತು ಗೂಗಲ್‌ನಲ್ಲಿ ಮಾಹಿತಿಗಾಗಿ ಹುಡುಕುವ ಪ್ರವೃತ್ತಿ ಹೆಚ್ಚುತ್ತಿದೆ. ಇದು ಒಳ್ಳೆಯ ಬೆಳವಣಿಗೆ’ ಎಂದು ಡಾ.ಆನಂದ ಕುಮಾರ್‌ ತಿಳಿಸಿದರು.

ಆದರೆ, ಗೂಗಲ್‌ನಲ್ಲಿರುವ ಮಾಹಿತಿಯಗಳಲ್ಲಿ ಯಾವುದನ್ನು ನಂಬಬೇಕು, ಯಾವುದನ್ನು ನಂಬಬಾರದು ಎಂಬ ವಿವೇಚನೆ ಇರಬೇಕು. ಈ ಬಗ್ಗೆ ಎಚ್ಚರವಹಿಸುವುದು ಉತ್ತಮ. ನಿರ್ದಿಷ್ಟ ಶಸ್ತ್ರಚಿಕಿತ್ಸೆ ಬಗ್ಗೆ ಗೂಗಲ್‌ಗಿಂತ ತಜ್ಞವೈದ್ಯರಿಗೆ ಜಾಸ್ತಿ ತಿಳಿದಿರುತ್ತದೆ ಎಂಬ ಪರಿಜ್ಞಾನ ಇರಬೇಕು’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT