ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೋಷನ್‌ ಬೇಗ್‌ ಭೂ ಕಬಳಿಕೆ ಪ್ರಕರಣ: ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಹಿಂದೇಟು

ಬೇಗ್‌ ಭೂ ಅಕ್ರಮ: ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಮಾಹಿತಿ ನೀಡದ ಬಿಬಿಎಂಪಿ ಆಯುಕ್ತರು
Last Updated 25 ಆಗಸ್ಟ್ 2022, 21:25 IST
ಅಕ್ಷರ ಗಾತ್ರ

ನವದೆಹಲಿ: ಕರ್ನಾಟಕದ ಮಾಜಿ ಸಚಿವ ಆರ್.ರೋಷನ್‌ ಬೇಗ್‌ ಭೂ ಕಬಳಿಕೆ ಪ್ರಕರಣದಲ್ಲಿ ಕೈಜೋಡಿಸಿದ ಅಧಿಕಾರಿಗಳ ವಿರುದ್ಧ ತನಿಖೆಗೆ ಪೂರ್ವಾನುಮತಿ ನೀಡಲುಕರ್ನಾಟಕ ಸರ್ಕಾರ ಹಿಂದೇಟು ಹಾಕುತ್ತಿದೆ.

ಐಎಂಎ ಪ್ರಕರಣದಲ್ಲಿ ರೋಷನ್‌ ಬೇಗ್‌ ಅವರನ್ನು ಬಂಧಿಸಲಾಗಿತ್ತು. ಆ ಬಳಿಕ ಬೇಗ್‌ ಮನೆ ಮೇಲೆ ಜಾರಿ ನಿರ್ದೇಶನಾಲಯದ (ಇ.ಡಿ.) ಅಧಿಕಾರಿಗಳು ಕಳೆದ ವರ್ಷ ದಾಳಿ ನಡೆಸಿದ್ದರು.ಹಣ ಅಕ್ರಮ ವರ್ಗಾವಣೆ ತಡೆ (ಪಿಎಂಎಲ್‌) ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದ ಇ.ಡಿ. ಅಧಿಕಾರಿಗಳು, ಭೂ ಅಕ್ರಮದ ಮಾಹಿತಿಯನ್ನು ಕರ್ನಾಟಕ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಜೊತೆ ಹಂಚಿಕೊಂಡಿದ್ದರು.

‘ಕೋನಪ್ಪನ ಅಗ್ರಹಾರ ಗ್ರಾಮದಲ್ಲಿ ನಿಯಮಬಾಹಿರವಾಗಿ ಸುಬಿ
ಎಲೆಕ್ಟ್ರಾನಿಕ್ಸ್‌ಗೆ, ಬೆಂಗಳೂರಿನ ತಿಮ್ಮಯ್ಯ ರಸ್ತೆಯಲ್ಲಿ ಡ್ಯಾನಿಷ್‌ ಪಬ್ಲಿಕೇಷನ್‌ಗೆ ಜಾಗ ಮಂಜೂರು ಮಾಡಲಾಗಿತ್ತು. ಅರೆ ಬಿನ್ನಮಂಗಳ ಗ್ರಾಮ ಹಾಗೂ ದಾಬಸ್‌‍ಪೇಟೆ ಕೈಗಾರಿಕಾ ಪ್ರದೇಶದಲ್ಲಿ ಜಾಗ ಮಂಜೂರಾತಿ ವೇಳೆ ಕೆಐಎಡಿಬಿಯಿಂದ ಲೋಪ ಆಗಿದೆ. ಸಚಿವ ಹಾಗೂ ಶಾಸಕರಾಗಿದ್ದ ವೇಳೆ ರಾಜಕೀಯ ಪ್ರಭಾವ ಬಳಸಿ ಬೇಗ್‌ ಭೂಕಬಳಿಕೆ ಮಾಡಿದ್ದಾರೆ’ ಎಂದು ಇ.ಡಿ. ಹೆಚ್ಚುವರಿ ನಿರ್ದೇಶಕರು ವರದಿಯಲ್ಲಿ ಉಲ್ಲೇಖಿಸಿದ್ದರು.

ಈ ಬಗ್ಗೆ ಸಮಗ್ರ ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ಎಸಿಬಿಯ ಪೊಲೀಸ್‌ ವರಿಷ್ಠಾಧಿಕಾರಿಗೆ (ಎಸ್ಪಿ) ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕರು (ಎಡಿಜಿಪಿ) ಸೂಚಿಸಿದ್ದರು.

‘2006ರಿಂದ 2010ರ ಅವಧಿಯಲ್ಲಿ ಕಾರ್ಯನಿರ್ವಹಿಸಿದ ಕಿಯೋನಿಕ್ಸ್‌ ಅಧಿಕಾರಿಗಳು, 2021ರ ಮಾರ್ಚ್‌ 6ರಿಂದ 28ರ ಅವಧಿಯಲ್ಲಿ ಕಾರ್ಯನಿರ್ವಹಿಸಿದ ಕೆಐಎಡಿಬಿ ಅಧಿಕಾರಿಗಳು, 2007ರ ಫೆಬ್ರುವರಿ 22ರಂದು ಕ್ರಯಪತ್ರ ಮಾಡಿಕೊಟ್ಟ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಹಾಗೂ ರಾಜಕೀಯ ಪ್ರಭಾವ ಬಳಸಿ ನಿಯಮ ಉಲ್ಲಂಘಿಸಿ ಭೂಕಬಳಿಕೆ ಮಾಡಿರುವ ಬೇಗ್‌ ವಿರುದ್ಧ ಹೆಚ್ಚಿನ ವಿಚಾರಣೆ ಅಥವಾ ತನಿಖೆ ನಡೆಸಬೇಕಿದೆ. ಅದಕ್ಕಾಗಿ ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆಯಂತೆ ಪೂರ್ವಾನುಮತಿ ದೊರಕಿಸಿ ಕೊಡಬೇಕು’ ಎಂದು
ಎಸ್ಪಿ ಅವರು 2021ರ ಡಿಸೆಂಬರ್‌ 13ರಂದು ಎಡಿಜಿಪಿ ಅವರಿಗೆ ಪತ್ರ ಬರೆದಿದ್ದರು.

ಬಿಬಿಎಂಪಿ ಅಧಿಕಾರಿಗಳ ವಿರುದ್ಧ ವಿಚಾರಣೆ ನಡೆಸಲು ಪೂರ್ವಾನುಮತಿ ನೀಡುವಂತೆ ಎಡಿಜಿಪಿ ಅವರು ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಎಸಿಎಸ್‌) ರಾಕೇಶ್ ಸಿಂಗ್ ಅವರಿಗೆ 2022ರ ಜನವರಿ 12ರಂದು ಪ್ರಸ್ತಾವನೆ ಸಲ್ಲಿಸಿದ್ದರು.

ಡ್ಯಾನಿಷ್‌ ಪಬ್ಲಿಕೇಷನ್‌ಗೆ ಕ್ರಯಪತ್ರ ಮಾಡಿಕೊಟ್ಟ ಬಿಬಿಎಂಪಿ ಅಧಿಕಾರಿಗಳ ಆಗಿನಕಚೇರಿ ವಿಳಾಸ, ಈಗ ಕಾರ್ಯನಿರ್ವಹಿಸುತ್ತಿದ್ದ ಹುದ್ದೆ ಹಾಗೂ ವಿಳಾಸ, ನಿವೃತ್ತರಾಗಿದ್ದರೆ ಅವರ ಮನೆಯ ವಿಳಾಸವನ್ನು ಕೂಡಲೇ ಕಳುಹಿಸಿಕೊಡುವಂತೆ ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವರು ಫೆಬ್ರುವರಿ 21ರಂದು ಸೂಚಿಸಿದ್ದರು. ಆದರೆ, ಮುಖ್ಯ ಆಯುಕ್ತರು ಯಾವುದೇ ಮಾಹಿತಿ ನೀಡಿಲ್ಲ.

ನಗರಾಭಿವೃದ್ಧಿಯಿಂದ ಮತ್ತೆ ಪತ್ರ

ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರಿಗೆ ಆಗಸ್ಟ್‌ 18ರಂದು ಪತ್ರ ಬರೆದಿರುವ ನಗರಾಭಿವೃದ್ಧಿ ಇಲಾಖೆಯ ಅಧಿಕಾರಿಗಳು, ‘ಆರು ತಿಂಗಳ ಬಳಿಕವೂ ಯಾವುದೇ ಮಾಹಿತಿ ನೀಡಿಲ್ಲ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಕೂಡಲೇ ಮಾಹಿತಿ ನೀಡಬೇಕು’ ಎಂದು ಸೂಚಿಸಿದ್ದಾರೆ.

‘ಬಿಬಿಎಂಪಿ, ಕಿಯೋನಿಕ್ಸ್‌ ಹಾಗೂ ಕೆಐಎಡಿಬಿ ಅಧಿಕಾರಿಗಳ ವಿರುದ್ಧ ತನಿಖೆಗೆ ಪೂರ್ವಾನುಮತಿ ನೀಡಲು ಸರ್ಕಾರ ಮೀನಮೇಷ ಎಣಿಸುತ್ತಿದೆ. ಇದಕ್ಕೆ ರಾಜಕೀಯ ಒತ್ತಡವೇ ಕಾರಣ’ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT