ಶುಕ್ರವಾರ, ಏಪ್ರಿಲ್ 3, 2020
19 °C
ವಿವಿಧ ಠಾಣೆಗಳ ರೌಡಿಶೀಟರ್‌ l 50ಕ್ಕೂ ಹೆಚ್ಚು ಅಪರಾಧಗಳಲ್ಲಿ ಆರೋಪಿ

ಉತ್ತರ ಪ್ರದೇಶದಲ್ಲಿ ಸಿಕ್ಕಿಬಿದ್ದ ‘ಸ್ಲಂ’ ಭರತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಜನ್ಮದಿನದ ಪಾರ್ಟಿ ಸಂದರ್ಭದಲ್ಲಿ ಗಲಾಟೆ ಮಾಡಿ ಪೊಲೀಸ್‌ ಇನ್‌ಸ್ಪೆಕ್ಟರ್ ಕಾರಿಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ರೌಡಿ ಭರತ ಅಲಿಯಾಸ್‌ ಸ್ಲಂ ಭರತನನ್ನು ಸಿಸಿಬಿ ಹಾಗೂ ಉತ್ತರ ವಿಭಾಗದ ಪೊಲೀಸರು ಉತ್ತರ ಪ್ರದೇಶದ ಮೊರದಾಬಾದ್‌ನಲ್ಲಿ ವಶಕ್ಕೆ ಪಡೆದಿದ್ದಾರೆ.

ತಮಿಳುನಾಡಿನವನಾದ ಸ್ಲಂ ಭರತನ ವಿರುದ್ಧ ರಾಮನಗರ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ನಗರ ಸೇರಿದಂತೆ ವಿವಿಧ ಜಿಲ್ಲೆಗಳ ಪೊಲೀಸ್ ಠಾಣೆಗಳಲ್ಲಿ 50ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ನಗರ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ತನ್ನದೇ ಆದ ಸಹಚರರ ಬಳಗ ಕಟ್ಟಿಕೊಂಡಿದ್ದ ಈತ, ಉತ್ತರಪ್ರದೇಶದಲ್ಲಿ ತಲೆಮರೆಸಿಕೊಂಡಿದ್ದ.

2006ರಲ್ಲಿ ಸೂರಿ ಜೊತೆ ಸೇರಿ ಕುಳ್ಳಸೀನನನ್ನು ಭರತ್‌ ಕೊಲೆ ಮಾಡಿದ್ದ. 2014ರಲ್ಲಿ ಬ್ಯಾಡರಹಳ್ಳಿಯಲ್ಲಿ
ಮಹೇಶ್ ಮತ್ತು ತಂಡದಿಂದ ಕೊಲೆಯಾಗಿದ್ದ ಸುರೇಶ್ ಹತ್ಯೆಗೆ ಪ್ರತೀಕಾರವಾಗಿ ಕಾಮಾಕ್ಷಿಪಾಳ್ಯ ಠಾಣಾ ವ್ಯಾಪ್ತಿಯಲ್ಲಿ ರೌಡಿ ಮಹೇಶ್‌ನನ್ನು ಕೊಲೆ ಮಾಡಿದ್ದ.

ಪೊಲೀಸರಿಗೆ ಹಣ ನೀಡುವ ವಿಡಿಯೊ ಮಾಡಿಸಿ ಬ್ಲಾಕ್ ಮೇಲ್ ಮಾಡಿದ್ದ ಎಂಬ ಆರೋಪವೂ ಈತನ ಮೇಲಿದೆ. ಪೊಲೀಸರಿಂದ ತಪ್ಪಿಸಿಕೊಳ್ಳಲು ಊರೂರು ಅಲೆಯುತ್ತಿದ್ದ ಭರತ್, ಮುಂಬೈ, ಚೆನೈ, ಉತ್ತರಪ್ರದೇಶ
ದಲ್ಲಿ ಓಡಾಡಿಕೊಂಡಿದ್ದ. ಆತನನ್ನು ಹಿಡಿಯಲು ಪೊಲೀಸರ ಮೂರು ತಂಡಗಳು ಹುಡುಕುತ್ತಿದ್ದವು. ಭರತನ ಜೊತೆ ಒಬ್ಬ ಸಹಚರನನ್ನೂ ಬಂಧಿಸಿರುವ ಮಾಹಿತಿ ಇದೆ.

ಕೊಲೆ, ಕೊಲೆಯತ್ನ, ದರೋಡೆ, ಭೂ ಅತಿಕ್ರಮಣ, ಪೊಲೀಸರ ಮೇಲೆ ಹಲ್ಲೆ ಸೇರಿದಂತೆ ಹಲವು ಪ್ರಕರಣಗಳು ಸ್ಲಂ ಭರತನ ಮೇಲೆ ದಾಖಲಾಗಿವೆ. ರಾಜಗೋಪಾಲನಗರ, ಕಾಮಾಕ್ಷಿಪಾಳ್ಯ, ಮಾದನಾಯಕನಹಳ್ಳಿ ಸೇರಿದಂತೆ ವಿವಿಧ ಠಾಣೆಗಳ ರೌಡಿಪಟ್ಟಿಯಲ್ಲಿ ಈತನ ಹೆಸರಿದೆ. 150ಕ್ಕೂ ಹೆಚ್ಚು ಸಹಚರರನ್ನು ಜೊತೆಯಲ್ಲಿ ಇಟ್ಟುಕೊಂಡು ಭೂಗತಲೋಕವನ್ನು ತನ್ನ ಹಿಡಿತದಲ್ಲಿಟ್ಟುಕೊಳ್ಳಲು ಈತ ಯತ್ನಿಸುತ್ತಿದ್ದ ಎಂದು ಪೊಲೀಸರು ತಿಳಿಸಿದರು.

‌ಸಿಸಿಬಿ ಪೊಲೀಸರ ನೆರವಿನೊಂದಿಗೆ ದೆಹಲಿಗೆ ತೆರಳಿದ ಪೊಲೀಸರು, ಸ್ಲಂ ಭರತನನ್ನು ಬಂಧಿಸಲು ಹೋದಾಗ ಅಲ್ಲಿಯೂ ಪೊಲೀಸರ ಮೇಲೆ ಹಲ್ಲೆ ನಡೆಸಿ, ಪರಾರಿಯಾಗಲು ಯತ್ನಿಸಿದ್ದಾನೆ. ಆದರೂ ಬಿಡದ ಪೊಲೀಸರು ಆತನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಶೀಘ್ರದಲ್ಲೇ ಬೆಂಗಳೂರಿಗೆ ಕರೆತರಲಿದ್ದಾರೆ ಎಂದು ಗೊತ್ತಾಗಿದೆ.

ಪ್ರಮುಖ ರೌಡಿಗಳ ಜೊತೆ ಒಳ್ಳೆಯ ಸಂಬಂಧ ಇಟ್ಟುಕೊಂಡಿದ್ದ ಈತ, ಯಾವುದಾದರೂ ಅಪರಾಧ ಕೃತ್ಯ ನಡೆಸಿದಾಗ ಸ್ಥಳೀಯ ರೌಡಿಗಳ ಜೊತೆ ಸ್ನೇಹ ಬೆಳೆಸಿ ಪ್ರಾಬಲ್ಯ ಮೆರೆಯುತ್ತಿದ್ದ. ರಾಜಕಾರಣಿಗಳು, ಭೂ ಅತಿಕ್ರಮಣಕಾರರು ಹಾಗೂ ಪೊಲೀಸ್ ಇಲಾಖೆಯ ಕೆಲವು ಸಿಬ್ಬಂದಿ ಜೊತೆಗೂ ಈತ ಸಂಪರ್ಕ ಇಟ್ಟುಕೊಂಡಿರುವ ಬಗ್ಗೆ ಶಂಕೆ ಇದೆ. ಹೆಚ್ಚಿನ ತನಿಖೆಯ ಬಳಿಕ ಮಾಹಿತಿಗಳು ಲಭ್ಯವಾಗಬಹುದು ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು