ಶುಕ್ರವಾರ, ಅಕ್ಟೋಬರ್ 23, 2020
27 °C

ಆರ್.ಆರ್‌ ನಗರ ಉಪ ಚುನಾವಣೆ: ಸಹಾಯಕ ಪ್ರಾಧ್ಯಾಪಕಿ ‘ಕೈ’ ಅಭ್ಯರ್ಥಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಕೈ’ ಕೊಟ್ಟು ಬಿಜೆಪಿ ಸೇರಿರುವ ಮುನಿರತ್ನ ಅವರನ್ನು ಸೋಲಿಸಲು ಮಹಿಳಾ ಅಭ್ಯರ್ಥಿಯೇ ಸೂಕ್ತವೆಂದು ನಿರ್ಧರಿಸಿರುವ ಕಾಂಗ್ರೆಸ್, ಆರ್.ಆರ್‌ ನಗರದಲ್ಲಿ ಅಖಾಡಕ್ಕೆ ಇಳಿಸಿರುವ ಕುಸುಮಾ, ತಮ್ಮ ತಂದೆ ಹನುಮಂತರಾಯಪ್ಪ ಅವರ ರಾಜಕೀಯ ಗರಡಿಯಲ್ಲಿ ಬೆಳೆದವರು.

ಮಾಹಿತಿ ತಂತ್ರಜ್ಞಾನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿರುವ ಅವರು, ಸದ್ಯ ಸಹಾಯಕ ಪ್ರಾಧ್ಯಾಪಕರು.

ಕೆಪಿಸಿಸಿ ಶಿಫಾರಸು ಮಾಡಿದ್ದ ಹೆಸರನ್ನು ಕಾಂಗ್ರೆಸ್ ಹೈಕಮಾಂಡ್‌ ಘೋಷಿಸುತ್ತಿದ್ದಂತೆ ಕುಸುಮಾ ಸಂತಸ ವ್ಯಕ್ತಪಡಿಸಿದರೆ, ಮತ್ತೊಂದೆಡೆ ಕಾನ್ಸರ್‌ನಿಂದ ಬಳಲುತ್ತಿದ್ದ ಅವರ ದೊಡ್ಡಪ್ಪ (ತಂದೆಯ ಅಣ್ಣ) ಲಕ್ಷ್ಮೀನರಸಿಂಹಯ್ಯ ಅವರು ಮಂಗಳವಾರ ರಾತ್ರಿ ಕೋವಿಡ್‌ನಿಂದ ನಿಧನರಾದ ನೋವಿನಲ್ಲಿದ್ದರು.

ಗುತ್ತಿಗೆದಾರರಾಗಿರುವ ಹನುಮಂತರಾಯಪ್ಪ ಬಹಳ ವರ್ಷ ಕಾಂಗ್ರೆಸ್‍ನಲ್ಲಿದ್ದವರು. ಡಿ.ಕೆ. ಶಿವಕುಮಾರ್‌ ಕುಟುಂಬಕ್ಕೆ ಆಪ್ತರು. ರಾಜರಾಜೇಶ್ವರಿ ನಗರಸಭೆಯ ಅಧ್ಯಕ್ಷರಾಗಿ (2002–05), ಬೆಂಗಳೂರು –ಮೈಸೂರು ಇನ್‌ಫ್ರಾಸ್ಟ್ರಕ್ಚರ್‌ ಕಾರಿಡಾರ್‌ ಏರಿಯಾ ಪ್ಲಾನಿಂಗ್ ಅಥಾರಿಟಿ (ಬಿಎಂಐಸಿಎಪಿಎ) ಅಧ್ಯಕ್ಷರಾಗಿ (2016–2018) ಕೆಲಸ ಮಾಡಿದ್ದರು. ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಸಿಗದ ಕಾರಣ ಕಾಂಗ್ರೆಸ್‌ ತೊರೆದಿದ್ದ ಅವರು 2008ರಲ್ಲಿ ಆರ್‌.ಆರ್‌. ನಗರ ಕ್ಷೇತ್ರದಿಂದ ಜೆಡಿಎಸ್‌ನಿಂದ ಕಣಕ್ಕಿಳಿದಿದ್ದರು. ಇತ್ತೀಚೆಗೆ ಮತ್ತೆ ಕಾಂಗ್ರೆಸ್‌ ತೆಕ್ಕೆಗೆ ಬಂದಿದ್ದಾರೆ.

1989 ಜೂನ್‌ 6ರಂದು ಹುಟ್ಟಿರುವ ಕುಸುಮಾ, ಪೋಷಕರ ಜತೆ ಸದ್ಯ ಬೆಂಗಳೂರಿನ ಮಲ್ಲತ್ತಹಳ್ಳಿ ಬಡಾವಣೆಯಲ್ಲಿ ನೆಲೆಸಿದ್ದಾರೆ. ಬೆಂಗಳೂರಿನ ವಿದ್ಯಾನಿಕೇತನ್‌ ಪಬ್ಲಿಕ್‌ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ, ರಾಜಾಜಿನಗರದ ಕೆಎಲ್‌ಇ ಕಾಲೇಜಿನಲ್ಲಿ ಪಿಯುಸಿ, 2010ರಲ್ಲಿ ಅಂಬೇಡ್ಕರ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ ಸಂಸ್ಥೆಯಿಂದ ಬಿಇ (ಕಂಪ್ಯೂಟರ್‌ ಸೈನ್ಸ್) ಮುಗಿಸಿದ್ದಾರೆ.

ಐಎಎಸ್‌ ಅಧಿಕಾರಿ ಡಿ.ಕೆ. ರವಿ ಅವರನ್ನು ಮದುವೆಯಾಗಿದ್ದರು. ರವಿ ನಿಧನರಾದ ಬಳಿಕ, 2018ರಲ್ಲಿ ಬಾಸ್ಟನ್‌ ವಿಶ್ವವಿದ್ಯಾಲಯದಿಂದ ಮಾಹಿತಿ ತಂತ್ರಜ್ಞಾನ ವಿಷಯದಲ್ಲಿ ಎಂ.ಎಸ್‌ ಮುಗಿಸಿದ್ದಾರೆ. 2019ರಿಂದ ಅವರು ದಯಾನಂದ ಸಾಗರ್‌ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.