ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಹನ ನಿಲುಗಡೆ ತಾಣವಾದ ಆಟದ ಮೈದಾನ

Last Updated 11 ಮಾರ್ಚ್ 2021, 22:10 IST
ಅಕ್ಷರ ಗಾತ್ರ

ರಾಜರಾಜೇಶ್ವರಿನಗರ: ಕೆಂಗುಂಟೆಯಲ್ಲಿನ ಬಿಬಿಎಂಪಿ ಆಟದ ಮೈದಾನ ಈಗ ವಾಹನ ನಿಲುಗಡೆಯ ತಾಣವಾಗಿ ಮಾರ್ಪಟ್ಟಿದೆ.

ಅಂಬೇಡ್ಕರ್ ತಾಂತ್ರಿಕ ಕಾಲೇಜು ಎದುರಿನ ಬಿಬಿಎಂಪಿ ಆಟದ ಮೈದಾನ ಅವ್ಯವಸ್ಥೆಯಿಂದ ಕೂಡಿದೆ. ಕೆಂಗುಂಟೆ ಸುತ್ತಮುತ್ತ ಆಟದ ಮೈದಾನ ಇಲ್ಲ ಎಂಬ ಕಾರಣಕ್ಕೆ ಬಿಬಿಎಂಪಿ ಈ ಮೈದಾನ ನಿರ್ಮಿಸಿತ್ತು. ಸುರಕ್ಷತೆಯ ದೃಷ್ಟಿಯಿಂದ ತಂತಿ ಬೇಲಿಯನ್ನೂ ಹಾಕಲಾಗಿತ್ತು.

ಮೈದಾದನಲ್ಲಿ ಭಾರಿ ವಾಹನಗಳನ್ನು ನಿಲ್ಲಿಸಿ ಮಕ್ಕಳ ಆಟದ ಜಾಗವನ್ನೇ ಈಗ ಆಕ್ರಮಿಸಿಕೊಳ್ಳಲಾಗಿದೆ. ಇನ್ನೊಂದೆಡೆ ಅಕ್ಕ–ಪಕ್ಕದ ನಿವಾಸಿಗಳು ಅಳಿದುಳಿದ ವಸ್ತುಗಳು, ತಾಜ್ಯಗಳನ್ನು ಶಾಲೆ ಆವರಣದಲ್ಲಿ ಸುರಿಯಲಾಗಿದ್ದು, ಕಸದ ತೊಟ್ಟಿಯನ್ನಾಗಿ ಮಾಡಲಾಗಿದೆ. ಗಾಜಿನ ಚೂರುಗಳು, ಕಬ್ಬಿಣದ ಚೂರುಗಳು ಬಿಸಾಡಿರುವ ಕಾರಣ ಈ ಜಾಗದಲ್ಲಿ ಆಡವಾಡಲು ಮಕ್ಕಳು ಭಯಪಡುತ್ತಿದ್ದಾರೆ.

ಇರುವ ಜಾಗದಲ್ಲಿ ಆಟವಾಡಲು ಹೋದರೆ ವಾಹನ ಮಾಲೀಕರು ದಬಾಯಿಸುವ ಭಯದಿಂದ ಮಕ್ಕಳು, ಈ ಮೈದಾನದಲ್ಲಿ ಆಟವಾಡುವುದನ್ನೇ ಬಿಟ್ಟಿದ್ದಾರೆ. ಜತೆಗೆ ದನಕರುಗಳು, ಬೀದಿ ನಾಯಿಗಳ ಹಾವಳಿಗೂ ಹೆದರಿ ಮಕ್ಕಳು ಮೈದಾನಕ್ಕೆ ಇಳಿಯುತ್ತಿಲ್ಲ.

ಕ್ರೀಡಾಂಗಣದ ಕಾಂಪೌಂಡ್‌ಗೆ ಹೊಂದಿಕೊಂಡಂತೆಯೇ ಪ್ರಾಥಮಿಕ ಆರೋಗ್ಯ ಕೇಂದ್ರ, ಲಕ್ಷ್ಮೀವೆಂಕಟೇಶ್ವರ ದೇವಸ್ಥಾನ, ಆಂಜನೇಯಸ್ವಾಮಿ ದೇವಸ್ಥಾನಗಳೂ ಇವೆ. ಅಲ್ಲಿಗೆ ಹೋಗುವ ಭಕ್ತರು, ಈ ಮೈದಾನದ ಮೂಲಕವೇ ಹೋಗುತ್ತಿದ್ದರು. ಈಗ ಈ ದಾರಿಯಲ್ಲಿ ಹೋಗುವುದನ್ನೇ ಸಾರ್ವಜನಿಕರೂ ಬಿಟ್ಟಿದ್ದಾರೆ.

ಮೈದಾನಕ್ಕೆ ಹಾಕಿದ್ದ ಗೇಟ್‌ ಮತ್ತು ತಂತಿಬೇಲಿಯನ್ನೂ ಕಿತ್ತೆಸೆದು ವಾಹನ ನಿಲುಗಡೆಗೆ ಈ ಜಾಗ ಬಳಸಿಕೊಳ್ಳಲಾಗುತ್ತಿದೆ. ಮೈದಾನದ ಕಟ್ಟೆಗಳ ಮೇಲೆ ಕುಳಿತುಕೊಳ್ಳುವ ಪುಂಡರ ಗುಂಪು, ಮದ್ಯಪಾನ, ಮಾದಕ ವಸ್ತುಗಳ ಸೇವನೆಗೂ ಈ ಜಾಗ ಬಳಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಮಕ್ಕಳು, ಮಹಿಳೆಯರು ಆಟದ ಮೈದಾನಕ್ಕೆ ಬರಲು ಹೆದರುತ್ತಾರೆ ಎಂದು ಸಾರ್ವಜನಿಕರು ದೂರಿದ್ದಾರೆ.

ಸಂಚಾರಿ ಇಂದಿರಾ ಕ್ಯಾಂಟೀನ್‌ ವಾಹನಗಳನ್ನೂ ಈ ಜಾಗದಲ್ಲಿ ನಿಲ್ಲಿಸಲಾಗುತ್ತಿದೆ. ಮದ್ಯ ವ್ಯಸನಿಗಳ ತಾಣವಾಗಿರುವ ಕಾರಣ ಈ ವಾಹನದಲ್ಲಿ ಆಹಾರ ಪಡೆದುಕೊಳ್ಳುವುದಕ್ಕೆ ಬರಲು ಜನ ಭಯಪಡುತ್ತಿದ್ದಾರೆ.

ಇದನ್ನು ಪ್ರಶ್ನಿಸುವ ಅಂಗನವಾಡಿ ಕಾರ್ಯಕರ್ತೆಯರಿಗೆ ಕಿಡಿಗೇಡಿಗಳು ಧಮಕಿ ಹಾಕುತ್ತಾರೆ. ಮೈದಾನ ಇಷ್ಟೆಲ್ಲಾ ಹಾಳಾಗಿದ್ದರೂ ಸರಿಪಡಿಸಲು ಬಿಬಿಎಂಪಿ ಕೂಡ ಮುಂದಾಗುತ್ತಿಲ್ಲ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT