ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯಾಯಾಲಯದ ಆದೇಶ ಜಾರಿಗೆ ₹1.5 ಲಕ್ಷ ಲಂಚ: ಪೀಣ್ಯ ಠಾಣೆ ಕಾನ್‌ಸ್ಟೆಬಲ್‌ ಬಂಧನ

Published 30 ಜೂನ್ 2023, 12:57 IST
Last Updated 30 ಜೂನ್ 2023, 12:57 IST
ಅಕ್ಷರ ಗಾತ್ರ

ಬೆಂಗಳೂರು: ಕಟ್ಟಡ ನಿರ್ಮಾಣ ಕಾಮಗಾರಿಗೆ ಪ್ರತಿವಾದಿಗಳು ಅಡ್ಡಿಪಡಿಸದಂತೆ ನ್ಯಾಯಾಲಯ ನೀಡಿದ್ದ ಪ್ರತಿಬಂಧಕಾಜ್ಞೆಯನ್ನು ಅನುಷ್ಠಾನಕ್ಕೆ ತರಲು ₹1.5 ಲಕ್ಷ ಲಂಚ ಪಡೆಯುತ್ತಿದ್ದ ಪೀಣ್ಯ ಪೊಲೀಸ್‌ ಠಾಣೆಯ ವಿಶೇಷ ಘಟಕದ ಕಾನ್‌ಸ್ಟೆಬಲ್‌ ಮಾರೇಗೌಡ ಎನ್‌. ಅವರನ್ನು ಲೋಕಾಯುಕ್ತ ಪೊಲೀಸರು ಶುಕ್ರವಾರ ಸಂಜೆ ಬಂಧಿಸಿದ್ದಾರೆ.

ನಾಗಸಂದ್ರ ಬಳಿಯ ನೆಲಗೆದರನಹಳ್ಳಿ ನಿವಾಸಿ ಗವಿರಾಜ್‌ ಗೌಡ ಎಂಬುವವರು ಬಿಬಿಎಂಪಿ ವಾರ್ಡ್‌ ಸಂಖ್ಯೆ 40ರ ವ್ಯಾಪ್ತಿಯ ಕರಿವೋಬನಹಳ್ಳಿಯಲ್ಲಿದ್ದ ತಮ್ಮ ನಿವೇಶನವೊಂದರ 20X40 ಚದರಡಿಯ ಭಾಗವನ್ನು ಟಿ.ದಾಸರಹಳ್ಳಿಯ ವಿದ್ಯಾನಗರ ನಿವಾಸಿ ದಿನೇಶ್‌ ಕೆ.ಎಲ್‌. ಅಲಿಯಾಸ್‌ ಅಭಿನವ್‌ ಎಂಬುವವರಿಗೆ ಮಾರಾಟ ಮಾಡಿದ್ದರು. ಅದರಲ್ಲಿ ದಿನೇಶ್‌ ಕಟ್ಟಡ ನಿರ್ಮಾಣ ಕಾಮಗಾರಿ ಆರಂಭಿಸಿದ್ದರು.

ಕೋಕಿಲಾ ಮತ್ತು ಲಕ್ಷ್ಮಣ್‌ ರೆಡ್ಡಿ ಎಂಬುವವರು ಸದರಿ ನಿವೇಶನ ತಮ್ಮದೆಂದು ತಗಾದೆ ತೆಗೆದಿದ್ದರು. ಕಟ್ಟಡ ನಿರ್ಮಾಣವನ್ನು ಸ್ಥಗಿತಗೊಳಿಸುವಂತೆ ಒ್ತತಡ ಹೇರುತ್ತಿದ್ದರು. ದಿನೇಶ್‌ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ಪ್ರತಿವಾದಿಗಳಾದ ಕೋಕಿಲಾ ಮತ್ತು ಲಕ್ಷ್ಮಣ್‌ ರೆಡ್ಡಿ ನಿವೇಶನದ ಒಳಕ್ಕೆ ಪ್ರವೇಶಿಸದಂತೆ ನ್ಯಾಯಾಲಯ ತಾತ್ಕಾಲಿಕ ಪ್ರತಿಬಂಧಕಾಜ್ಞೆ ನೀಡಿತ್ತು.

‘ನ್ಯಾಯಾಲಯದ ಆದೇಶದೊಂದಿಗೆ ಪೀಣ್ಯ ಪೊಲೀಸ್‌ ಠಾಣೆಗೆ ದೂರು ನೀಡಿದ್ದ ಗವಿರಾಜ್‌, ಕಟ್ಟಡ ನಿರ್ಮಾಣ ಮುಂದುವರಿಸಲು ದಿನೇಶ್‌ ಅವರಿಗೆ ರಕ್ಷಣೆ ಒದಗಿಸುವಂತೆ ಮನವಿ ಮಾಡಿದ್ದರು. ರಕ್ಷಣೆ ಒದಗಿಸಲು ₹ 3 ಲಕ್ಷ ಲಂಚ ನೀಡುವಂತೆ ಮಾರೇಗೌಡ ಬೇಡಿಕೆ ಇಟ್ಟಿದ್ದರು. ಆ ಬಳಿಕ ಚೌಕಾಸಿ ನಡೆಸಿದ್ದು, ₹ 1.5 ಲಕ್ಷ ನೀಡಿದರೆ ರಕ್ಷಣೆ ಒದಗಿಸುವ ಭರವಸೆ ನೀಡಿದ್ದರು. ಈ ಕುರಿತು ಗವಿರಾಜ್‌ ಲೋಕಾಯುಕ್ತದ ಬೆಂಗಳೂರು ನಗರ ಪೊಲೀಸ್‌ ಠಾಣೆಗೆ ದೂರು ಸಲ್ಲಿಸಿದ್ದರು’ ಎಂದು ಲೋಕಾಯುಕ್ತದ ಅಧಿಕಾರಿಗಳು ತಿಳಿಸಿದ್ದಾರೆ.

ಆರೋಪಿಯ ಸೂಚನೆಯಂತೆ ಗವಿರಾಜ್‌ ಲಂಚದ ಹಣದೊಂದಿಗೆ ಹೋಗಿದ್ದರು. ಶುಕ್ರವಾರ ಸಂಜೆ ಪೀಣ್ಯ ಠಾಣೆ ಬಳಿಯ ಕೆಫೆ ಒಂದರಲ್ಲಿ ಭೇಟಿಯಾದ ಮಾರೇಗೌಡ ₹ 1.5 ಲಕ್ಷ ಪಡೆದುಕೊಂಡರು. ತಕ್ಷಣ ದಾಳಿ ಮಾಡಿದ ಲೋಕಾಯುಕ್ತದ ಪೊಲೀಸ್‌ ಇನ್‌ಸ್ಪೆಕ್ಟರ್‌ ಬಾಲಾಜಿ ಬಾಬು ಮತ್ತು ತಂಡ, ಮಾರೇಗೌಡ ಅವರನ್ನು ಬಂಧಿಸಿದರು ಎಂದು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT