ಮಂಗಳವಾರ, ಅಕ್ಟೋಬರ್ 27, 2020
25 °C
ಆರ್.ಟಿ.ನಗರ ಪೊಲೀಸರ ಕಾರ್ಯಾಚರಣೆ

ವಾಹನ ಕದ್ದು ಆಂಧ್ರಪ್ರದೇಶದಲ್ಲಿ ಮಾರಾಟ: ನಾಲ್ವರು ಆರೋಪಿಗಳ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ನಗರದಲ್ಲಿ ದ್ವಿಚಕ್ರ ವಾಹನಗಳನ್ನು ಕದ್ದು ಅದರ ನೋಂದಣಿ ಫಲಕವನ್ನು ಬದಲಾಯಿಸಿ ಆಂಧ್ರಪ್ರದೇಶದಲ್ಲಿ ಮಾರಾಟ ಮಾಡುತ್ತಿದ್ದ ಆರೋಪದಡಿ ನಾಲ್ವರನ್ನು ಆರ್‌.ಟಿ.ನಗರ ಪೊಲೀಸರು ಬಂಧಿಸಿದ್ದಾರೆ.

‘ಆಂಧ್ರಪ್ರದೇಶ ಚಿತ್ತೂರ್ ಜಿಲ್ಲೆಯ ಶೇಕ್ ಅಬ್ರಾರ್ (23), ಸೈಫುಲ್ಲಾ ಬಾಷಾ (26), ಬೆಂಗಳೂರು ಎಚ್‌ಬಿಆರ್ ಲೇಔಟ್‌ನ ಮುಫೀದ್‌ವುಲ್ಲಾಖಾನ್ (29) ಹಾಗೂ ಆರ್‌.ಟಿ.ನಗರದ ಅತೀಕ್ ಹುಸೇನ್ (29) ಬಂಧಿತರು. ಆರೋಪಿಗಳಿಂದ ರಾಯಲ್‌ ಎನ್‌ಫೀಲ್ಡ್ ಸೇರಿದಂತೆ ವಿವಿಧ ಕಂಪನಿಯ 20 ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಲಾಗಿದ್ದು, ಅವುಗಳ ಮೌಲ್ಯ ₹ 28.30 ಲಕ್ಷ’ ಎಂದು ಪೊಲೀಸರು ಹೇಳಿದರು.

‘ದರೋಡೆ ಸಂಚು ರೂಪಿಸಿದ್ದ 6 ಆರೋಪಿಗಳು, ಗಂಗಾನಗರದ ಎಚ್‌ಜಿಎಚ್ ಲೇಔಟ್‌ನ ಕೇಕ್‌ ಪ್ಯಾಲೇಸ್ ಬಳಿ ಸೆ. 29ರಂದು ಬೆಳಿಗ್ಗೆ ನಿಂತುಕೊಂಡಿದ್ದರು. ಗಸ್ತಿನಲ್ಲಿದ್ದ ಸಿಬ್ಬಂದಿ ಅನುಮಾನಗೊಂಡು ವಿಚಾರಿಸಲು ಹೋಗಿದ್ದರು. ಸಿಬ್ಬಂದಿ ನೋಡುತ್ತಿದ್ದಂತೆ ಆರೋಪಿಗಳು ಓಡಲಾರಂಭಿಸಿದ್ದರು. ಆ ಪೈಕಿ ನಾಲ್ವರನ್ನು ಬೆನ್ನಟ್ಟಿ ಹಿಡಿಯಲಾಗಿದ್ದು, ಇನ್ನಿಬ್ಬರು ಪರಾರಿಯಾಗಿದ್ದಾರೆ’ ಎಂದೂ ತಿಳಿಸಿದರು.

ಜೈಲಿಗೆ ಹೋಗಿ ಬಂದ ಮೇಲೂ ಕೃತ್ಯ; ‘ನಗರದ ಔಷಧಿ ಮಳಿಗೆಯೊಂದರಲ್ಲಿ ಶೇಕ್ ಅಬ್ರಾರ್ ಕೆಲಸ ಮಾಡುತ್ತಿದ್ದ. 2018ರಲ್ಲಿ ಯಶವಂತಪುರ ಠಾಣೆ ವ್ಯಾಪ್ತಿಯಲ್ಲಿ ನಡೆದ ದರೋಡೆ ಪ್ರಕರಣದಲ್ಲಿ ಭಾಗಿಯಾಗಿ ಜೈಲಿಗೆ ಹೋಗಿದ್ದ. ಜಾಮೀನು ಮೇಲೆ ಹೊರಬಂದು ಪುನಃ ದರೋಡೆ ಹಾಗೂ ಕಳ್ಳತನ ಮುಂದುವರಿಸಿದ್ದ’ ಎಂದೂ ಪೊಲೀಸರು ಹೇಳಿದರು.

‘ಹಗಲಿನಲ್ಲಿ ಸುತ್ತಾಡುತ್ತಿದ್ದ ಆರೋಪಿಗಳು, ಕಳ್ಳತನ ಮಾಡಬೇಕಾದ ದ್ವಿಚಕ್ರ ವಾಹನಗಳನ್ನು ಗುರುತಿಸುತ್ತಿದ್ದರು. ರಾತ್ರಿ ವೇಳೆ ಓಲಾ ಹಾಗೂ ಉಬರ್ ಕ್ಯಾಬ್‌ಗಳಲ್ಲಿ ಸ್ಥಳಕ್ಕೆ ಹೋಗಿ ಇಳಿಯುತ್ತಿದ್ದರು. ನಂತರ, ವಾಹನಗಳನ್ನು ಕದ್ದುಕೊಂಡು ಪರಾರಿಯಾಗುತ್ತಿದ್ದರು.’

‘ಕೋಳಿ ಮಾಂಸ ಮಾರಾಟ ಅಂಗಡಿ ಇಟ್ಟುಕೊಂಡಿದ್ದ ಸೈಫುಲ್ಲಾ, ಕದ್ದ ವಾಹನಗಳ ನೋಂದಣಿ ಫಲಕಗಳನ್ನು ಬದಲಾಯಿಸಿ ಮಾರಾಟ ಮಾಡುತ್ತಿದ್ದ. ಬಂದ ಹಣವನ್ನು ಆರೋಪಿಗಳು ಹಂಚಿಕೊಳ್ಳುತ್ತಿದ್ದರು’ ಎಂದೂ ಪೊಲೀಸರು ತಿಳಿಸಿದರು.

‘ಜಪ್ತಿ ಮಾಡಲಾದ 20 ದ್ವಿಚಕ್ರ ವಾಹನಗಳ ಪೈಕಿ 13 ವಾಹನಗಳ ಮಾಲೀಕರು ಪತ್ತೆಯಾಗಿದ್ದಾರೆ. ಉಳಿದ 7 ವಾಹನಗಳ ವಾರಸುದಾರರನ್ನು ಪತ್ತೆ ಮಾಡುತ್ತಿದ್ದೇವೆ’ ಎಂದೂ ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು