ಭಾನುವಾರ, ಆಗಸ್ಟ್ 18, 2019
26 °C
ರುದ್ರೇಶ್‌ ಹತ್ಯೆ ಪ್ರಕರಣ l ಆರೋಪಿ ಅಸೀಂ ಶರೀಫ್‌ ಜಾಮೀನು ಅರ್ಜಿ ತಿರಸ್ಕೃತ

‘ಸಂಚು ಮನಸ್ಸಲ್ಲಿ ಬಚ್ಚಿಟ್ಟುಕೊಂಡಿರುತ್ತೆ’

Published:
Updated:
Prajavani

ಬೆಂಗಳೂರು: ‘ಸಂಚು ಎಂಬುದು ಸಂಚುಕೋರರ ಮನಸ್ಸಿನಲ್ಲಿ ಬಚ್ಚಿಟ್ಟುಕೊಂಡಿರುತ್ತದೆ. ಇದಕ್ಕೆ ನೇರ ಸಾಕ್ಷ್ಯಗಳಿರುವುದಿಲ್ಲ ಮತ್ತು ವಿಚಾರಣೆಯಲ್ಲಿ ಇದನ್ನು ಸಾಕ್ಷೀಕರಿಸಲು ಅಥವಾ ಸಾಬೀತು ಮಾಡಲೂ ಆಗುವುದಿಲ್ಲ...’

ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್‌) ಕಾರ್ಯಕರ್ತ ರುದ್ರೇಶ್ ಕೊಲೆ ಪ್ರಕರಣದ ಐದನೇ ಆರೋಪಿ ಅಸೀಂ ಶರೀಫ್‌ ಜಾಮೀನು ಅರ್ಜಿ ತಿರಸ್ಕರಿಸಿರುವ ಹೈಕೋರ್ಟ್‌ ತನ್ನ ತೀರ್ಪಿನಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

‘ಅಸೀಂ ಶರೀಫ್‌ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾದ ಬೆಂಗಳೂರು ನಗರ ಜಿಲ್ಲಾ ಘಟಕದ ಅಧ್ಯಕ್ಷ. ಈತ ಹತ್ಯೆ ನಡೆಯುವ ಮೊದಲು ಪ್ರಕರಣದ ಉಳಿದ ನಾಲ್ವರು ಆರೋಪಿಗಳೊಂದಿಗೆ ಫೋನ್‌ ಸಂಭಾಷಣೆ ನಡೆಸಿದ್ದಾರೆ. ಹತ್ಯೆಯ ಸಂಚಿನಲ್ಲಿ ಭಾಗಿಯಾಗಿರುವುದಕ್ಕೆ ಇದು ಮೇಲ್ನೋಟಕ್ಕೆ ಸಾಕಷ್ಟು ಪುಷ್ಟಿ ನೀಡುತ್ತದೆ. ಹಾಗಾಗಿ ಪ್ರಕರಣದ ಗಂಭೀರತೆಯನ್ನು ಗಮನಿಸಿದರೆ ಆರೋಪಿಗೆ ಜಾಮೀನು ನೀಡಲು ಆಗದು’ ಎಂದು ನ್ಯಾಯಪೀಠ ವಿವರಿಸಿದೆ.

ಅಸೀಂ ಶರೀಫ್‌ ಅವರನ್ನು 2016ರ ಅಕ್ಟೋಬರ್‌ 27ರಂದು ಬಂಧಿಸಲಾಗಿದ್ದು ಅಂದಿನಿಂದಲೂ ನ್ಯಾಯಾಂಗ ಬಂಧನದಲ್ಲಿದ್ದಾರೆ. ಇವರ ವಿರುದ್ಧ ಭಾರತೀಯ ದಂಡ ಸಂಹಿತೆ–1860, ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯ್ದೆ–1967 ಹಾಗೂ ಶಸ್ತ್ರಾಸ್ತ್ರ ಕಾಯ್ದೆ–1959ರ ವಿವಿಧ ಕಲಂಗಳ ಅಡಿಯಲ್ಲಿ ದೋಷಾರೋಪ ಹೊರಿಸಲಾಗಿದೆ.

ಪ್ರಕರಣದಲ್ಲಿ 117 ಸಾಕ್ಷಿಗಳು ಮತ್ತು 90 ಮಹತ್ವದ ದಾಖಲೆಗಳನ್ನು ಕಲೆ ಹಾಕಲಾಗಿದ್ದು, ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಇವುಗಳನ್ನು ವಿಚಾರಣೆ ನಡೆಸುತ್ತಿರುವ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿದೆ.

ಜಾಮೀನು ಅರ್ಜಿಯನ್ನು ವಿಶೇಷ ನ್ಯಾಯಾಲಯ 2018ರ ಡಿಸೆಂಬರ್ 3ರಂದು ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ಅಸೀಂ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಈ ಮೇಲ್ಮನವಿಯನ್ನು ನ್ಯಾಯಮೂರ್ತಿ ರವಿ ಮಳಿಮಠ ಹಾಗೂ ನ್ಯಾಯಮೂರ್ತಿ ಎಚ್‌.ಪಿ.ಸಂದೇಶ್‌ ಅವರಿದ್ದ ವಿಭಾಗೀಯ ವಿಭಾಗೀಯ ನ್ಯಾಯಪೀಠ ತಿರಸ್ಕರಿಸಿದೆ.

ಶಿವಾಜಿ ನಗರದಲ್ಲಿರುವ ಕಾಮರಾಜ ರಸ್ತೆಯಲ್ಲಿನ ಶ್ರೀನಿವಾಸ ಮೆಡಿಕಲ್‌ ಸ್ಟೋರ್ ಎದುರು ತನ್ನ ಸ್ನೇಹಿತರ ಜತೆ ಗಣವೇಷಧಾರಿಯಾಗಿ ನಿಂತಿದ್ದ ರುದ್ರೇಶ್‌ ಅವರನ್ನು ಬೈಕ್‌ನಲ್ಲಿ ಬಂದ ಇಬ್ಬರು ಆಸಾಮಿಗಳು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದರು. ಈ ಘಟನೆ 2016ರ ಅಕ್ಟೋಬರ್ 16ರಂದು ಬೆಳಿಗ್ಗೆ 9 ಗಂಟೆ ಸುಮಾರಿಗೆ ನಡೆದಿತ್ತು. ಅಂದು ಆ ಪ್ರದೇಶದಲ್ಲಿ ಆರ್‌ಎಸ್‌ಎಸ್‌ ಪಥಸಂಚಲನ ಇತ್ತು.

Post Comments (+)