ಸೋಮವಾರ, 24 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ವೈದ್ಯರ ಗ್ರಾಮೀಣ ಸೇವೆ ಕಡ್ಡಾಯ: ಹೈಕೋರ್ಟ್‌

Published 28 ಮೇ 2024, 17:39 IST
Last Updated 28 ಮೇ 2024, 17:39 IST
ಅಕ್ಷರ ಗಾತ್ರ

ಬೆಂಗಳೂರು: ‘ಸರ್ಕಾರಿ ಕೋಟಾದಡಿ ಸರ್ಕಾರಿ ಕಾಲೇಜು ಅಥವಾ ಖಾಸಗಿ ಕಾಲೇಜುಗಳಲ್ಲಿ ಪ್ರವೇಶ ಪಡೆದ (2022ರ ಜುಲೈ 22ಕ್ಕೆ ಅನುಗುಣವಾಗಿ) ಎಂಬಿಬಿಎಸ್‌ ವಿದ್ಯಾರ್ಥಿಗಳು ಕಡ್ಡಾಯ ಗ್ರಾಮೀಣ ಸೇವೆ ಅಥವಾ ಬಾಂಡ್‌ಗಳ ಅನುಷ್ಠಾನದ ಕಠಿಣ ಷರತ್ತಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ’ ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಈ ಸಂಬಂಧ ಬೆಂಗಳೂರಿನ ಡಾ.ಶರಣ್ಯಾ ಮೋಹನ್‌ ಸೇರಿದಂತೆ ರಾಜಸ್ಥಾನ, ಹರಿಯಾಣ, ಕೇರಳ, ಗುಜರಾತ್‌, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ ಮತ್ತು ಚೆನ್ನೈನ ವಿವಿಧ ಭಾಗಗಳ ಒಟ್ಟು 447 ವೈದ್ಯರು ಸಲ್ಲಿಸಿದ್ದ ಪ್ರತ್ಯೇಕ ರಿಟ್‌ ಅರ್ಜಿಗಳನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಲೇವಾರಿ ಮಾಡಿದೆ.

‘ಗ್ರಾಮೀಣ ಸೇವೆಯ ಆದೇಶದ ಹಿಂದಿನ ಉದ್ದೇಶವು ಗ್ರಾಮೀಣ, ಬುಡಕಟ್ಟು ಅಥವಾ ಕಷ್ಟಕರ ಪ್ರದೇಶಗಳಲ್ಲಿ ವಾಸ ಮಾಡುವ ನಾಗರಿಕರಿಗೆ ಉತ್ತಮ ಆರೋಗ್ಯ ಸೇವೆಯನ್ನು ಒದಗಿಸುವುದೇ ಆಗಿದೆ. ಇಂತಹ ಪ್ರದೇಶಗಳನ್ನು ಮೇಲ್ನೋಟಕ್ಕೆ ಗಮನಿಸಿದಾಗ ಅವರೆಲ್ಲಾ ಅಗತ್ಯ ಬಿದ್ದಾಗ ತಕ್ಷಣವೇ ವೈದ್ಯರನ್ನು ತಲುಪಲು ಸರಳ ಮಾರ್ಗಗಳಿಲ್ಲ. ಹೀಗಾಗಿ, ವಿದ್ಯಾರ್ಥಿಗಳು ಸರ್ಕಾರದ ಸದಾಶಯದ ಭಾಗವಾಗಬೇಕು’ ಎಂದು ನ್ಯಾಯಪೀಠ ಹೇಳಿದೆ. 

‘ವೈದ್ಯರಿಂದ ಗ್ರಾಮೀಣ ಸೇವೆಯನ್ನು ಪ್ರೋತ್ಸಾಹಿಸಲು ವಿಶ್ವ ಆರೋಗ್ಯ ಸಂಸ್ಥೆಯು ಹಲವು ಶಿಫಾರಸುಗಳನ್ನು ಮಾಡಿದೆ. ಕಡ್ಡಾಯ ಗ್ರಾಮೀಣ ಸೇವೆಯು ಜಗತ್ತಿನ ಯಾವುದೇ ಭಾಗದಲ್ಲಿನ ವೈದ್ಯಕೀಯ ವೃತ್ತಿಗೆ ಹೊರತಾಗಿಲ್ಲ’ ಎಂಬ ಅಭಿಪ್ರಾಯ ವ್ಯಕ್ತಪಡಿಸಿರುವ ನ್ಯಾಯಪೀಠ ‘ಕರ್ನಾಟಕ ಶಿಕ್ಷಣ ಸಂಸ್ಥೆಗಳ (ಕ್ಯಾಪಿಟೇಶನ್ ಶುಲ್ಕ ನಿಷೇಧ) ಕಾಯ್ದೆ–1984ರ ಕಲಂ 14ರ ಅಡಿಯಲ್ಲಿ ನಿಯಮಗಳನ್ನು ರೂಪಿಸಲು ರಾಜ್ಯ ಸರ್ಕಾರ ಸ್ವತಂತ್ರವಾಗಿದೆ’ ಎಂದು ಹೇಳಿದೆ.

ಕಡ್ಡಾಯ ಗ್ರಾಮೀಣ ಸೇವೆ ಸಲ್ಲಿಸುವ ನಿಟ್ಟಿನಲ್ಲಿ ಅರ್ಜಿದಾರರಿಗೆ ಸಂಬಂಧಿಸಿದಂತೆ; ವೈದ್ಯಕೀಯ ನಿರ್ದೇಶನಾಲಯ 2021ರ ಜೂನ್‌ 17ರಂದು ಹೊರಡಿಸಿದ್ದ ತಿದ್ದೋಲೆಯನ್ನು (ಕೊರಿಜೆಂಡಮ್‌) ನ್ಯಾಯ‍ಪೀಠ ಅಸಿಂಧುಗೊಳಿಸಿದೆ. ಇದರಿಂದಾಗಿ 2019-2020ರ ಸಾಲಿನಲ್ಲಿ ಎಂಬಿಬಿಎಸ್ ಪೂರ್ಣಗೊಳಿಸಿದ್ದ 447 ಅರ್ಜಿದಾರ ವೈದ್ಯ ವಿದ್ಯಾರ್ಥಿಗಳಿಗೆ ಭಾಗಶಃ ಪರಿಹಾರ ದೊರೆತಂತಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT