ಬುಧವಾರ, 6 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ ನೀರು ಸಂಗ್ರಹ: ಬೇಕಿದೆ ದುರಸ್ತಿ

ಮೆಟ್ರೊ ಮಾರ್ಗದಲ್ಲಿ ಒಡೆದ ಪೈಪ್‌, ಮುಚ್ಚಿಹೋದ ತೊಟ್ಟಿಗಳು: ಆ್ಯಕ್ಷನ್ ಏಡ್‌ ಸಂಸ್ಥೆಯಿಂದ ಸಮೀಕ್ಷೆ
Last Updated 8 ಜೂನ್ 2022, 2:38 IST
ಅಕ್ಷರ ಗಾತ್ರ

ಬೆಂಗಳೂರು: ಮಳೆ ನೀರು ಸಂಗ್ರಹ ಕಾರ್ಯ ಬೆಂಗಳೂರಿನಲ್ಲಿ ಸಮರ್ಪಕವಾಗಿ ನಡೆಯುತ್ತಿಲ್ಲ ಎಂಬುದನ್ನು ಪ್ರತಿ ಮಳೆಗಾಲವೂ ನೆನಪು ಮಾಡುತ್ತದೆ. ಮೆಟ್ರೊ ರೈಲು ಮಾರ್ಗದಲ್ಲೂ ಅಲ್ಲಲ್ಲಿ ಮಳೆ ನೀರು ಸಂಗ್ರಹ ವ್ಯವಸ್ಥೆ ಹಾಳಾಗಿರುವುದು ಆ್ಯಕ್ಷನ್ ಏಡ್‌ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ಗೊತ್ತಾಗಿದೆ. ಸಂಸ್ಥೆಯು ಈ ಕುರಿತ ವರದಿ ಬಿಡುಗಡೆ ಮಾಡಿದೆ.

ಮೆಟ್ರೊ ರೈಲು ಎತ್ತರಿಸಿದ ಮಾರ್ಗಗಳಲ್ಲಿ ಸಂಗ್ರಹವಾಗುವ ಮಳೆ ನೀರನ್ನು ಕಂಬಗಳಿಗೆ ಅಳವಡಿಸಿರುವ ಪೈಪ್‌ಗಳ ಮೂಲಕ ತೊಟ್ಟಿಗಳಲ್ಲಿ ಸಂಗ್ರಹಿಸುವ ವ್ಯವಸ್ಥೆ ಇದೆ. ಎಂ.ಜಿ.ರಸ್ತೆ ಮೆಟ್ರೊ ರೈಲು ನಿಲ್ದಾಣ ಮತ್ತು ಸ್ವಾಮಿ ವಿವೇಕಾನಂದ ರಸ್ತೆ ಮೆಟ್ರೊ ನಿಲ್ದಾಣದ ತನಕ ಆಕ್ಷನ್ ಏಡ್‌ ಸಂಸ್ಥೆ ಸಮೀಕ್ಷೆ ನಡೆಸಿದೆ. ಒಡೆದ ಪೈಪ್‌ಗಳಲ್ಲಿ ಸೋರಿ ಹೋಗುವ ನೀರು, ಮುಚ್ಚಿಹೋಗಿರುವ ತೊಟ್ಟಿಗಳನ್ನು ಗುರುತಿಸಿದೆ.

ಈ ನಿಲ್ದಾಣಗಳ ನಡುವೆ 156 ಕಂಬಗಳಿದ್ದು, 8 ಕಂಬಗಳಲ್ಲಿ ಪೈಪ್‌ಗಳು ಒಡೆದಿರುವುದನ್ನು ಸಮೀಕ್ಷೆ ನಡೆಸಿದ ತಂಡ ಗುರುತಿಸಿದೆ. 300 ಲೀಟರ್ ಸಾಮರ್ಥ್ಯದ ನೀರಿನ ತೊಟ್ಟಿಗಳು ನಾಲ್ಕು ಕಡೆ ಮುಚ್ಚಿ ಹೋಗಿವೆ, 7 ಕಡೆ ಕಸ ಸಂಗ್ರಹವಾಗಿದೆ. 14 ನೀರಿನ ಟ್ಯಾಂಕ್‌ಗಳಲ್ಲಿ 5 ಕಡೆ ಮುಚ್ಚಳಗಳು ಒಡೆದು ಹೋಗಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಮಳೆ ನೀರು ಸಂಗ್ರಹಕ್ಕೆ ಮೂಲಸೌಕರ್ಯ ಕಲ್ಪಿಸಿರುವ ಪ್ರಯತ್ನವನ್ನು ಈ ಸಂಸ್ಥೆ ಸ್ವಾಗತಿಸಿದೆ. ಜೊತೆಗೆ ನಿರ್ವಹಣೆ ಕೊರತೆಯನ್ನು ಎತ್ತಿ ಹಿಡಿದಿದೆ. ಮೂಲ ಸೌಕರ್ಯಗಳ ಸಂಪೂರ್ಣ ಪ್ರಯೋಜನ ಪಡೆಯಲು ಕೆಲವು ಸಲಹೆಗಳನ್ನು ಶಿಫಾರಸು ಮಾಡಿದೆ. ಮುಚ್ಚಿ ಹೋಗಿರುವ ತೊಟ್ಟಿಗಳನ್ನು ಸ್ವಚ್ಛಗೊಳಿಸಬೇಕು. ತೊಟ್ಟಿಗಳಿಗೆ ಕಸ ಸೇರುವುದನ್ನು ತಪ್ಪಿಸಲು ಮೆಷ್‌ಗಳನ್ನು ಅಳವಡಿಸಬೇಕು. ಒಡೆದಿರುವ ಪೈಪ್‌ಗಳನ್ನು ಸರಿಪಡಿಸಬೇಕು ಎಂದು ತಿಳಿಸಿದೆ.

‘ಮಳೆ ನೀರು ಸಂಗ್ರಹ ವ್ಯವಸ್ಥೆಯನ್ನು ನಿಯಮಿತವಾಗಿ ನಿರ್ವಹಣೆ ಮಾಡಬೇಕು. ಮಳೆಗಾಲಕ್ಕೆ ಕನಿಷ್ಠ ಒಂದು ತಿಂಗಳ ಮೊದಲು ಪೈಪ್‌ಗಳು, ತೊಟ್ಟಿಗಳನ್ನು ಪರಿಶೀಲಿಸಿ ಸರಿಪಡಿಸಬೇಕು’ ಎಂದು ಸಲಹೆ ನೀಡಿದೆ.

‘ಬೆಂಗಳೂರಿನಲ್ಲಿ ಒಂದೆಡೆ ಮಳೆ ನೀರು ಪೋಲು ಮಾಡಿ, ಮತ್ತೊಂದೆಡೆ ಅಂತರ್ಜಲಕ್ಕಾಗಿ ಹುಡುಕಾಡುತ್ತಿದ್ದೇವೆ. ಇನ್ನೊಂದೆಡೆ ಕಾಂಕ್ರೀಟ್‌ ರಸ್ತೆ ನಿರ್ಮಿಸುವ ಮೂಲಕ ಮಳೆ ನೀರು ಇಂಗಲು ಜಾಗವೇ ಇಲ್ಲದಂತೆ ಮಾಡುತ್ತಿದ್ದೇವೆ. ಶೀಘ್ರದಲ್ಲೇ 100 ಕಿಲೋ ಮೀಟರ್‌ಗೂ ಹೆಚ್ಚಿನ ಮೇಲ್ಸೇತುವೆ ಮೆಟ್ರೊ ರೈಲು ಮಾರ್ಗವನ್ನು ನಗರ ಹೊಂದಲಿದೆ. ಮಳೆ ನೀರನ್ನು ಸಮರ್ಪಕವಾಗಿ ಸಂಗ್ರಹ ಮಾಡಿದರೆ ನೀರಿನ ಸಂರಕ್ಷಣೆಗೆ ಇದು ಸಹಾಯವಾಗುತ್ತದೆ’ ಎಂಬುದು ಆ್ಯಕ್ಷನ್ ಏಡ್ ಸಂಸ್ಥೆಯ ರಾಘವೇಂದ್ರ ಬಿ. ಪಚ್ಚಾಪುರ್ ಅಭಿಪ್ರಾಯ.

ಈ ಸಂಬಂಧ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಮತ್ತು ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೂ ಅವರು ಪತ್ರ ಬರೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT