ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಮೆಲರಂ–ಹೀಲಳಿಗೆ ಜೋಡಿ ಮಾರ್ಗ: ಸುರಕ್ಷತೆ ಸಮೀಕ್ಷೆ

Last Updated 21 ಫೆಬ್ರುವರಿ 2023, 6:25 IST
ಅಕ್ಷರ ಗಾತ್ರ

ಬೆಂಗಳೂರು: ಕಾರ್ಮೆಲರಂ–ಹೀಲಳಿಗೆ ನಡುವೆ ಜೋಡಿ ರೈಲು ಮಾರ್ಗದ ಕಾಮಗಾರಿ ಪೂರ್ಣಗೊಂಡಿದ್ದು, ರೈಲ್ವೆ ಸುರಕ್ಷತಾ ಆಯುಕ್ತರ(ಸಿಆರ್‌ಎಸ್‌) ತಂಡ ಸೋಮವಾರ ಸಮೀಕ್ಷೆ ನಡೆಸಿತು. ಉದ್ದೇಶಿತ ಮಾರ್ಗದಲ್ಲಿ ರೈಲುಗಳ ಸಂಚಾರಕ್ಕೆ ಸಿಆರ್‌ಎಸ್‌ ಅನುಮೋದನೆ ನೀಡಿದೆ.

ಬೈಯಪ್ಪನಹಳ್ಳಿ–ಹೊಸೂರು ನಡುವಿನ 48 ಕಿಲೋ ಮೀಟರ್‌ ಮಾರ್ಗದಲ್ಲಿ ಜೋಡಿ ಹಳಿ ನಿರ್ಮಾಣ ಕಾಮಗಾರಿಯನ್ನು ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ ನಿಗಮ(ಕೆ–ರೈಡ್‌) ಕೈಗೆತ್ತಿಕೊಂಡಿದೆ. ಈ ಪೈಕಿ ಕಾರ್ಮೆಲರಂ–ಹೀಲಳಿಗೆ ನಡುವಿನ 10.27 ಕಿಲೋ ಮೀಟರ್‌ ಮಾರ್ಗ ಪೂರ್ಣಗೊಂಡಿದೆ.

ಗಂಟೆಗೆ ಅಂದಾಜು 122 ಕಿ.ಮೀ ವೇಗದಲ್ಲಿ ರೈಲು ಓಡಿಸಲಾಯಿತು. ಬಳಿಕ ಪ್ರಯಾಣಿಕರ ರೈಲು ಸಂಚಾರಕ್ಕೆ ಸಿಆರ್‌ಎಸ್ ತಂಡ ಅನುಮೋದನೆ ನೀಡಿತು.

ಬೈಯಪ್ಪನಹಳ್ಳಿ- ಹೊಸೂರು ಜೋಡಿ ಮಾರ್ಗಕ್ಕೆ 2018-19ರಲ್ಲಿ ಮಂಜೂರಾತಿ ದೊರೆತಿದ್ದು, ₹498 ಕೋಟಿ ವೆಚ್ಚದಲ್ಲಿ ಕಾಮಗಾರಿ ನಿರ್ವಹಿಸಲಾಗುತ್ತಿದೆ. ರೈಲ್ವೆ ಮಂಡಳಿ ಮತ್ತು ರಾಜ್ಯ ಸರ್ಕಾರ ತಲಾ ಶೇ 50ರಷ್ಟು ವೆಚ್ಚ ಭರಿಸಿಕೊಂಡಿದ್ದು, ಈ ಮಾರ್ಗ ಆರಂಭವಾದರೆ ಬೆಂಗಳೂರು ಪ್ರಯಾಣಿಕರಿಗೆ ಹಲವು ರೀತಿಯ ಅನುಕೂಲ ಆಗಲಿವೆ.

ಈ ಮಾರ್ಗದಲ್ಲಿ ತಮಿಳುನಾಡು ಮತ್ತು ಕೇರಳಕ್ಕೆೆ ನಿತ್ಯ 15 ರೈಲುಗಳು ಕಾರ್ಯಾಚರಣೆ ಮಾಡುತ್ತಿವೆ. ಈ ಯೋಜನೆಯಿಂದ ಅವುಗಳ ಕಾರ್ಯಕ್ಷಮತೆ ಹೆಚ್ಚುವುದರ ಜತೆಗೆ ಮುಂದಿನ ದಿನಗಳಲ್ಲಿ ಇನ್ನಷ್ಟು ರೈಲುಗಳ ಕಾರ್ಯಾಚರಣೆಗೂ ಅನುಕೂಲ ಆಗಲಿದೆ ಎಂದು ರೈಲ್ವೆ ತಜ್ಞರು ಹೇಳುತ್ತಾರೆ.

‘ಈ ಮಾರ್ಗದ ಎಲ್ಲಾ ಕಾಮಗಾರಿ ಪೂರ್ಣಗೊಂಡರೆ ಹೊಸೂರಿಗೆ ಮೆಟ್ರೊ ರೈಲು ಸಂಪರ್ಕ ಕಲ್ಪಿಸುವ ಅಗತ್ಯ ಬೀಳುವುದಿಲ್ಲ. ಜೋಡಿ ಮಾರ್ಗ ಇದ್ದರೆ ನಿಗದಿತ ಸಮಯದಲ್ಲಿ ರೈಲುಗಳು ಕಾರ್ಯಾಚರಣೆ ಮಾಡಬಹುದು ಮತ್ತು ಉಪನಗರ ರೈಲು ಯೋಜನೆಗೂ ಅನುಕೂಲ ಆಗಲಿದೆ. ಹಾಗಾಗಿ ಆದಷ್ಟು ಬೇಗ ಬಾಕಿ ಕಾಮಗಾರಿ ಪೂರ್ಣಗೊಳಿಸಬೇಕು’ ಎಂದು ಸಿಟಿಜನ್ ಫಾರ್ ಸಿಟಿಜನ್ ಸಂಘಟನೆ ಸಂಸ್ಥಾಪಕ ರಾಜ್‌ಕುಮಾರ್ ದುಗರ್ ಒತ್ತಾಯಿಸಿದ್ದಾರೆ.

ಜೋಡಿ ಮಾರ್ಗದ ಜತೆಗೆ ಹೀಲಳಿಗೆ ರೈಲು ನಿಲ್ದಾಣವನ್ನೂ ನವೀಕರಿಸಲಾಗಿದೆ ಎಂದು ಕೆ–ರೈಡ್ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT