ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಂಸ್ಕೃತಿಯ ಸೂಕ್ಷ್ಮತೆ ಬರಹಗಾರರಿಗೆ ಅಗತ್ಯ’: ಕಂಬಾರ

ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಚಂದ್ರಶೇಖರ ಕಂಬಾರ ಕಿವಿಮಾತು *2020ನೇ ಸಾಲಿನ ‘ಯುವ ಪುರಸ್ಕಾರ‘ ಪ್ರದಾನ
Last Updated 17 ಅಕ್ಟೋಬರ್ 2021, 16:36 IST
ಅಕ್ಷರ ಗಾತ್ರ

ಬೆಂಗಳೂರು: ‘ದೇಶದಲ್ಲಿನ ವಿವಿಧ ಸ್ಥಳ ಮತ್ತು ಸಂಸ್ಕೃತಿಯ ಸೂಕ್ಷ್ಮತೆಯನ್ನು ಅರಿತು, ಯುವ ಬರಹಗಾರರು ಸಾಹಿತ್ಯ ಸೃಷ್ಟಿಸಬೇಕು’ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಚಂದ್ರಶೇಖರ ಕಂಬಾರ ಕಿವಿಮಾತು ಹೇಳಿದರು. ‌

ಅಕಾಡೆಮಿಯು ನಗರದಲ್ಲಿ ಭಾನುವಾರ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ 2020ನೇ ಸಾಲಿನ ‘ಯುವ ಪುರಸ್ಕಾರ’ವನ್ನು ಕನ್ನಡ ಸೇರಿದಂತೆ ವಿವಿಧ ಭಾಷೆಯಲ್ಲಿ ಆಯ್ಕೆಯಾದ ಬರಹಗಾರರಿಗೆ ಪ್ರದಾನ ಮಾಡಿದರು.

‘ಸಂಸ್ಕೃತಿಯು ಬರವಣಿಗೆಗೆ ಸ್ಫೂರ್ತಿದಾಯಕ ತಳಹದಿಯಾಗಿರುತ್ತದೆ. ದೇಶದ ಇತಿಹಾಸ ಹಾಗೂ ಸಂಸ್ಕೃತಿ ಯುವ ಬರಹಗಾರರಲ್ಲಿ ಹೊಸ ಅಲೆ ಮತ್ತು ಆಲೋಚನೆಗಳನ್ನು ಹುಟ್ಟುಹಾಕುತ್ತದೆ. ಆವಿಷ್ಕಾರಕ್ಕೂ ಕಾರಣವಾಗಲಿದೆ. ಹಾಗಾಗಿ, ಬರಹಗಾರರು ತಾವು ಇರುವ ಸ್ಥಳವನ್ನು ತುಂಬಾ ಸೂಕ್ಷ್ಮವಾಗಿ ಗಮನಿಸುವ ಜೊತೆಗೆ ಅಲ್ಲಿನ ಸಂಸ್ಕೃತಿಯ ವೈಶಿಷ್ಟ್ಯತೆಯನ್ನು ವಿವರಿಸುವ ಕೆಲಸ ಮಾಡಬೇಕು. ಪಾಶ್ಚಿಮಾತ್ಯ ಸಾಹಿತ್ಯ ಕೃತಿಗಳಲ್ಲಿ ಇದನ್ನು ಕಾಣಬಹುದಾಗಿದೆ’ ಎಂದರು.

‘ಸಾಹಿತ್ಯ ಅಕಾಡೆಮಿಯು ಯುವ ಬರಹಗಾರರಿಗೆ ವೇದಿಕೆಯಾಗಿದ್ದು, ಈ ಪ್ರಶಸ್ತಿಯು ಮತ್ತಷ್ಟು ಉತ್ತೇಜನ ನೀಡಲಿದೆ. ತಮ್ಮ ಬರಹಗಳಲ್ಲಿ ಇನ್ನಷ್ಟು ಶ್ರೇಷ್ಠತೆ ಕಾಯ್ದುಕೊಳ್ಳಲು ಕೂಡ ಇದು ಸಹಕಾರಿ’ ಎಂದು ಹೇಳಿದರು.

24 ಬರಹಗಾರರಿಗೆ ಪುರಸ್ಕಾರ: ದ್ವಿಜೇನ್ ಕುಮಾರ್ ದಾಸ್ (ಅಸ್ಸಾಮಿ), ಸಾಯಂ ಬಂದೋಪಾಧ್ಯಾಯ (ಬಂಗಾಳಿ), ನ್ಯೂಟನ್ ಕೆ. ಬಸುಮತರಿ (ಬೋಡೊ), ಗಂಗಾ ಶರ್ಮಾ (ಡೋಗ್ರಿ), ಯಾಶಿಕಾ ದತ್ (ಇಂಗ್ಲಿಷ್), ಅಭಿಮನ್ಯು ಆಚಾರ್ಯ(ಗುಜರಾತಿ), ಅಂಕಿತ್ ನರ್ವಾಲ್ (ಹಿಂದಿ), ಸ್ವಾಮಿ ಪೊನ್ನಾಚಿ (ಕನ್ನಡ), ಮಸ್ರೂರ್ ಮುಜಾಫರ್ (ಕಾಶ್ಮೀರಿ), ಸಂಪದ ಕುಂಕೋಳಿಕರ್ (ಕೊಂಕಣಿ), ಸೋನು ಕುಮಾರ್ ಝಾ (ಮೈಥಿಲಿ), ಅಬಿನ್ ಜೋಸೆಫ್ (ಮಲೆಯಾಳಂ), ರಾಮೇಶ್ವರ್ ಷರೊಂಗ್ ಬಾಂ (ಮಣಿಪುರಿ) ಅವರಿಗೆ ‘ಯುವ ಪುರಸ್ಕಾರ’ ಪ್ರದಾನ ಮಾಡಲಾಯಿತು.

ಪ್ರಜಕ್ತ್ ದೇಶಮುಖ್ (ಮರಾಠಿ), ಅಂಜನ್ ಬಸ್ಕೋಟ (ನೇಪಾಳಿ), ಚಂದ್ರಶೇಖರ ಹೋಟ (ಒಡಿಯಾ), ದೀಪಕ್ ಕುಮಾರ್ ಧಾಲೇವಾನ್ (ಪಂಜಾಬಿ), ಮಹೇಂದ್ರಸಿಂಗ್ ಸಿಸೋಡಿಯ (ರಾಜಸ್ಥಾನಿ), ರಿಷಿರಾಜ್ ಪಾಠಕ್ (ಸಂಸ್ಕೃತ), ಅಂಜಲಿ ಕಿಸ್ಕು (ಸಂತಾಲಿ), ಕೋಮಲ್ ಜಗದೀಶ್ ದಯಲಾನಿ (ಸಿಂಧಿ), ಶಕ್ತಿ (ತಮಿಳು), ಮಾನಸ ಎಂಡ್ಲೂರಿ (ತೆಲುಗು) ಹಾಗೂ ಸಯ್ಯದ್ ಮೊಹ್ಮದ್ ಸಕೀಬ್ ಫರೀದಿ (ಉರ್ದು) ಅವರು ‘ಯುವ ಪುರಸ್ಕಾರ’ಕ್ಕೆ ಭಾಜನರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT