ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರ್ಧಕ್ಕೆ ನಿಂತ ಸಾರಕ್ಕಿ ಕೆರೆ ಪುನರುಜ್ಜೀವನ: ಕೊರೊನಾ ಸೋಂಕಿನ ನೆಪ

ಮೂರು ತಿಂಗಳಿಂದ ಕಾಮಗಾರಿ ಸ್ಥಗಿತ
Last Updated 3 ಆಗಸ್ಟ್ 2020, 17:30 IST
ಅಕ್ಷರ ಗಾತ್ರ

ಬೆಂಗಳೂರು: ಸಾರಕ್ಕಿ ಕೆರೆಪುನರುಜ್ಜೀವನ ಯೋಜನೆಯ ಕಾಮಗಾರಿ ಮತ್ತೆ ನನೆಗುದಿಗೆ ಬಿದ್ದಿದೆ. ಕೆರೆ ಸುತ್ತಲೂ ನಡಿಗೆ ಪಥ ನಿರ್ಮಾಣ, ಜೊಂಡುತೆಗೆಯುವ ಕಾರ್ಯ ಅರ್ಧಕ್ಕೆ ನಿಂತಿದೆ. ಕೊಳಚೆ ನೀರಿನ ದುರ್ನಾತ ಹಾಗೂ ಸೊಳ್ಳೆ ಕಾಟದಿಂದ ಸುತ್ತಮುತ್ತಲ ನಿವಾಸಿಗಳು ರೋಸಿ ಹೋಗಿದ್ದಾರೆ.

ಒಂದು ಕಾಲದಲ್ಲಿ ಜರಗನಹಳ್ಳಿ, ಸಾರಕ್ಕಿ, ಪುಟ್ಟೇನಹಳ್ಳಿಗೆ ನೀರು ಉಣಿಸುತ್ತಿದ್ದ ಕೆರೆಇದಾಗಿತ್ತು. ಕುಡಿಯುವ ನೀರಿಗೂ ಇದೇ ಕೆರೆಯನ್ನು ಜನರು ಆಶ್ರಯಿಸಿದ್ದರು. ಅತ್ಯಂತ ಸಮೃದ್ಧಿಯಿಂದ ಕೂಡಿದ್ದ ಜಲಕಾಯ ನಗರ ಬೆಳೆದಂತೆ ಹಾಳಾಗತೊಡಗಿತು.ಬಲಾಢ್ಯರು ಕೆರೆಒತ್ತುವರಿ ಮಾಡಿಕೊಂಡರು. ದೊಡ್ಡದಾಗಿ ಮನೆಗಳು, ಅಪಾರ್ಟ್‌ಮೆಂಟ್‌ ಸಮುಚ್ಚಯಗಳು ತಲೆಯೆತ್ತಿದವು ಎಂದು ಊರಿನ ಹಿರಿಯರು ನೆನಪಿಸಿಕೊಳ್ಳುತ್ತಾರೆ.

ದಿನ ಕಳೆದಂತೆ ಕಲ್ಮಶಗೊಂಡು ಸಾರಕ್ಕಿ ಕೆರೆ ನಿವಾಸಿಗಳ ಪಾಲಿಗೆ ದುರ್ನಾತದ ಗುಂಡಿ ಆಯಿತು. ಜೊಂಡು ಬೆಳೆದು ಕೆರೆಯಲ್ಲಿ ನೀರಿದೆ ಎಂಬುದೇ ಗೊತ್ತಾಗದಂತೆ ಆಗಿತ್ತು. ಕಟ್ಟಡಗಳ ಅವಶೇಷ, ಮಾಂಸದ ಅಂಗಡಿಗಳ ತ್ಯಾಜ್ಯ ತುಂಬಿಕೊಂಡಿತ್ತು. ಕೆರೆ ಉಳಿಸಿ ಪುನರುಜ್ಜೀವನಗೊಳಿಸಲು ಪರಿಸರ ಹೋರಾಟಗಾರರು ನ್ಯಾಯಾಲಯದ ಮೊರೆ ಹೋದರು.

ಹೈಕೋರ್ಟ್‌ ನಿರ್ದೇಶನದ ಮೇರೆಗೆ ನಗರ ಜಿಲ್ಲಾಡಳಿತವು 2015ರ ಏಪ್ರಿಲ್‌ನಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಿತ್ತು. 178 ವಾಸದ ಮನೆಗಳು, 18 ಅಂಗಡಿಗಳು, 7 ವಸತಿ ಸಂಕೀರ್ಣಗಳನ್ನು ನೆಲಸಮ ಮಾಡಲಾಯಿತು. ಕೆರೆ ಪುನರುಜ್ಜೀವನಕ್ಕೆ 2017ರಲ್ಲಿ ಚಾಲನೆ ಸಿಕ್ಕಿತು.ಬಿಬಿಎಂಪಿ ಕೆರೆಗಳ ವಿಭಾಗದಿಂದ ಕಾಮಗಾರಿ ನಡೆಸಲಾಗುತ್ತಿದೆ.

ಜಲಮೂಲದ ಸುತ್ತಲೂ ತಂತಿ ಬೇಲಿ ಅಳವಡಿಸಿ, ವಾಯುವಿಹಾರ ಪಥ ನಿರ್ಮಾಣ ಕೆಲಸ ನಡೆದಿದೆ. ಈಕೆರೆಸುತ್ತ ಮೂರು ಮುಖ್ಯ ದ್ವಾರಗಳ ನಿರ್ಮಾಣ, ಉದ್ಯಾನ, ಎರಡು ಕಲ್ಯಾಣಿಗಳ ಕಾರ್ಯ ಇನ್ನೂ ಆಗಬೇಕಿದೆ. ಕಾಮಗಾರಿ ಸ್ಥಗಿತಗೊಂಡು 3 ತಿಂಗಳಾಗಿದ್ದು, ಅಧಿಕಾರಿಗಳಾಗಲಿ, ಗುತ್ತಿಗೆದಾರರಾಗಲಿ ಕೆರೆಯತ್ತ ಸುಳಿಯುತ್ತಿಲ್ಲ ಎಂದು ನಿವಾಸಿಗಳ ಹೇಳುತ್ತಾರೆ.

ಮೇಯರ್ ಆಗಿದ್ದ ಗಂಗಾಂಬಿಕೆ ಅವರು 2019ರ ಜುಲೈನಲ್ಲಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಅಧಿಕಾರಿಗಳಿಗೆ ಚುರುಕು ಮುಟ್ಟಿಸಿ ಕಾಮಗಾರಿ ಪೂರ್ಣಗೊಳಿಸಲು ತಿಳಿಸಿದ್ದರು. ಆದರೆ, ಅದು ಜಾರಿಗೆ ಬರಲಿಲ್ಲ. ಕೆರೆಯಲ್ಲಿ ಮತ್ತಷ್ಟು ಜೊಂಡು ಬೆಳೆದುಕೊಂಡಿದೆ. ಪುನರುಜ್ಜೀವನ ಕನಸು ಮರೀಚಿಕೆಯಾಗಿ ಉಳಿದುಕೊಂಡಿದೆ.

‘ಕೊರೊನಾ ಸೋಂಕಿನ ಭಯದಿಂದ ಕಾರ್ಮಿಕರು ಊರು ಸೇರಿಕೊಂಡಿದ್ದಾರೆ. ಹೀಗಾಗಿ ಕಾಮಗಾರಿ ಸ್ಥಗಿತಗೊಂಡಿದೆ’ ಎಂಬುದು ಪಾಲಿಕೆ ಅಧಿಕಾರಿಗಳು ನೀಡುವ ಮಾಹಿತಿ.

ಸುಂದರ ತಾಣದ ಯೋಜನೆ

ಕೆರೆಸುತ್ತಲೂ ವಾಯು ವಿಹಾರಕ್ಕಾಗಿ 3.2 ಕಿಲೋ ಮೀಟರ್ ಉದ್ದದ ಪಥ ನಿರ್ಮಾಣ,ಮಳೆ ನೀರು ಸಂಗ್ರಹ ಮಾಡಿ ಸುತ್ತಲಿನ ಪ್ರದೇಶದಲ್ಲಿ ಅಂತರ್ಜಲ ಮಟ್ಟವೂ ಹೆಚ್ಚಿಸುವುದು, ದೋಣಿ ವಿಹಾರ ವ್ಯವಸ್ಥೆ ಕಲ್ಪಿಸಿ ನಗರ ಪ್ರವಾಸಿ ತಾಣವನ್ನಾಗಿ ಮಾಡುವುದು ಅಭಿವೃದ್ಧಿ ಯೋಜನೆಯ ಮುಖ್ಯ ಉದ್ದೇಶವಾಗಿದೆ.

ಜಲಮೂಲದೊಳಗೆ ಎರಡು ಜೌಗು ಪ್ರದೇಶಗಳ ನಿರ್ಮಾಣ ಯೋಜನೆಯೂ ಒಳಗೊಂಡಿದೆ.ರಾಸಾಯನಿಕವಾಗಿ ನೈಟ್ರೇಟ್‌ ಮತ್ತು ಫಾಸ್ಪೇಟ್‌ಗಳನ್ನು ಹೀರುವ ಸಸಿಗಳನ್ನು ಜೌಗು ‍ಪ್ರದೇಶದಲ್ಲಿ ಬೆಳೆಸಲು ಯೋಜನೆ ರೂಪಿಸಲಾಗಿದೆ. ಕೆರೆಯ ಮಧ್ಯದಲ್ಲಿ ಇರುವ ನಡುಗಡ್ಡೆಯನ್ನು ಹಾಗೆಯೇ ಉಳಿಸಿಕೊಂಡು ಅದನ್ನು ಪಕ್ಷಿಗಳ ಆವಾಸ ಸ್ಥಾನವಾಗಿಸಲು ಯೋಜಿಸಲಾಗಿದೆ.

ವಿಪರೀತ ಸೊಳ್ಳೆ ಕಾಟ

ಕೆರೆಯಲ್ಲಿನ ಜೊಂಡಿನಲ್ಲಿ ಸ್ವಲ್ಪ ಭಾಗ ಮಾತ್ರ ತೆಗೆಯಲಾಗಿದ್ದು,ಬಹುತೇಕ ಹಾಗೇ ಉಳಿದಿದೆ. ಇದರಿಂದಾಗಿ ಸುತ್ತಮುತ್ತಲ ನಿವಾಸಿಗಳು ಸೊಳ್ಳೆ ಕಾಟದಿಂದ ಪರಿತಪಿಸುತ್ತಿದ್ದಾರೆ.

‘ಒಂದೆರಡು ಕಡೆ ಜೊಂಡು ತೆಗೆದು ರಾಶಿ ಹಾಕಲಾಗಿದ್ದು, ಅದು ಕೂಡ ಮತ್ತೊಂದು ರೀತಿಯ ತ್ಯಾಜ್ಯಕ್ಕೆ ಕಾರಣವಾಗಿದೆ. ಅಲ್ಲಿಂದಲೂ ಸೊಳ್ಳೆಗಳು ಉತ್ಪತ್ತಿಯಾಗಿ ನಿವಾಸಿಗಳಿಗೆ ಕಾಟ ನೀಡುತ್ತಿವೆ. ಕಳೆ ತೆಗೆದರೆ ಸೊಳ್ಳೆ ಕಾಟಕ್ಕಾದರೂ ಮುಕ್ತಿ ಸಿಗಲಿದೆ’ ಎಂದು ಸ್ಥಳೀಯ ನಿವಾಸಿ ಮಂಜುನಾಥ್ ಹೇಳಿದರು.

ಪೂರ್ಣಗೊಂಡು ಎರಡು ವರ್ಷ ಆಗಬೇಕಿತ್ತು

ಕೆರೆಯ ಮುಖ್ಯದ್ವಾರದಲ್ಲಿ ಕೆರೆ ಅಭಿವೃದ್ಧಿಗೆ ಸಂಬಂಧಿಸಿದ ಫಲಕ ಅಳವಡಿಸಲಾಗಿದೆ. ಅದರ ಪ್ರಕಾರ 2018 ಜೂನ್‌ನಲ್ಲೇ ಕೆಲಸ ಪೂರ್ಣಗೊಳ್ಳಬೇಕಿತ್ತು.

‘ಟೆಂಡರ್ ಷರತ್ತಿನ ಪ್ರಕಾರಕಾಮಗಾರಿ ನಿರ್ವಹಿಸಲು 10 ತಿಂಗಳ ಕಾಲಾವಕಾಶವನ್ನು ಪಾಲಿಕೆ ನೀಡಿತ್ತು. ಈಗಕೊರೊನಾ ಸೋಂಕಿನ ನೆಪ ಹೇಳಿಕೊಂಡು ಕಾಲ ತಳ್ಳುತ್ತಿದ್ದಾರೆ. ಸದ್ಯ ಕೆರೆಯ ಸ್ಥಿತಿ ನೋಡಿದರೆ ಸದ್ಯಕ್ಕೆ ಕಾಮಗಾರಿ ಪೂರ್ಣಗೊಳ್ಳುವ ಲಕ್ಷಣ ಕಾಣುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಸ್ಥಳೀಯರು.

ಪರಿಸರದ ದೃಷ್ಟಿಯಲ್ಲಿ ನೋಡಬೇಕು

‘ಕೆರೆ ಪುನರುಜ್ಜೀವನ ಎಂದರೆ ಹಣ ಬಿಡುಗಡೆಯಾದಂತೆ ಹಂತ–ಹಂತವಾಗಿ ಮಾಡುವ ಕೆಲಸ ಅಲ್ಲ. ಇದು ಪಾಲಿಕೆ ಅಧಿಕಾರಿಗಳಿಗೆ ಅರ್ಥವೇ ಆಗಿಲ್ಲ’ ಎಂದು ಸಾರಕ್ಕಿ ಕೆರೆ ಉಳಿಸಲು ಹೋರಾಟ ನಡೆಸಿದ ನೀರಿನ ಹಕ್ಕಿಗಾಗಿ ಜನಾಂದೋಲನ ವೇದಿಕೆಯಈಶ್ವರಪ್ಪ ಮಡಿವಾಳಿ ಬೇಸರ ವ್ಯಕ್ತಪಡಿಸಿದರು.

‘ಮೂರ್ನಾಲ್ಕು ವರ್ಷಗಳಿಂದ ಕಾಮಗಾರಿ ನಡೆಯುತ್ತಲೇ ಇದೆ. ಕೆರೆ ಅಭಿವೃದ್ಧಿಯನ್ನು ಪರಿಸರದ ದೃಷ್ಟಿಕೋನದಲ್ಲಿ ನೋಡಬೇಕೇ ಹೊರತು ಬೇರೆ ಅಭಿವೃದ್ಧಿ ಕಾಮಗಾರಿಗಳಂತೆ ನೋಡಬಾರದು’ ಎಂದು ಅವರು ಹೇಳಿದರು.

ಅಂಕಿ–ಅಂಶ

82 ಎಕರೆ;ಕೆರೆಯ ವಿಸ್ತೀರ್ಣ

₹ 6.14 ಕೋಟಿ;ಯೋಜನಾ ಮೊತ್ತ

3.2 ಕಿ.ಮೀ.; ವಾಯುವಿಹಾರ ಪಥದ ಉದ್ದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT