ಬುಧವಾರ, ಜನವರಿ 22, 2020
21 °C
ಕೆಲಹೊತ್ತು ಉದ್ವಿಗ್ನ ವಾತಾವರಣ ಸೃಷ್ಟಿ

ಶಾಲಾ ಬಸ್‌ಗೆ ಸಿಕ್ಕಿ ಬಾಲಕ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಶಾಲಾ ಬಸ್‌ ಇಳಿದು ಹೋಗುತ್ತಿದ್ದ ಐದು ವರ್ಷದ ಬಾಲಕ ಅದೇ ಬಸ್‌ ಹರಿದು ಸ್ಥಳದಲ್ಲೇ ಮೃತಪಟ್ಟ ದುರ್ಘಟನೆ ಸೋಮವಾರ ಮಧ್ಯಾಹ್ನ ಹುಸ್ಕೂರ್‌ ಗೇಟ್‌ನಲ್ಲಿ ನಡೆದಿದೆ. ಇದರಿಂದಾಗಿ ಶಾಲೆ ಮುಂದೆ ಕೆಲಹೊತ್ತು ಉದ್ವಿಗ್ನ ವಾತಾವರಣ ಸೃಷ್ಟಿಯಾಗಿತ್ತು.

ನತದೃಷ್ಟ ಬಾಲಕನನ್ನು ಯುಕೆಜಿ ವಿದ್ಯಾರ್ಥಿ ದೀಕ್ಷಿತ್‌ (5) ಎಂದು ಗುರುತಿಸಲಾಗಿದೆ. ಈತ ರಾಯಚೂರು ಜಿಲ್ಲೆ ಲಿಂಗಸುಗೂರಿನ ಯಮನೂರಪ್ಪ ಹಾಗೂ ಸುನೀತಾ ದಂಪತಿ ಪುತ್ರ. 

 ಮಧ್ಯಾಹ್ನ 12.30ರ ಸುಮಾರಿಗೆ ಶಾಲೆ ಮುಗಿಸಿಕೊಂಡು ಬಂದ ಮಗು ತನ್ನ ಮನೆ ಬಳಿ ಇಳಿದು ಬಸ್‌ ಮುಂಭಾಗದಲ್ಲಿ ಹೋಗುತ್ತಿದ್ದಾಗ ಈ ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

ಬಾಲಕನ ಜತೆ ಮತ್ತಿಬ್ಬರು ವಿದ್ಯಾರ್ಥಿಗಳು ಬಸ್‌ನಿಂದ ಇಳಿದರಾದರೂ, ಹಿಂಭಾಗದಿಂದ ಹಾದು ಹೋದರು. ಬಾಲಕನ ತಾಯಿ ಬರುವವರೆಗೂ ಕಾಯದೆ ಚಾಲಕ ಆತುರದಲ್ಲಿ ಮಗುವನ್ನು ಇಳಿಸಿ, ಬಸ್‌ ಚಲಾಯಿಸಿದ್ದರಿಂದ ಅಪಘಾತ ಸಂಭವಿಸಿದೆ. 

ಚಾಲಕ ಚನ್ನಪ್ಪನ ನಿರ್ಲಕ್ಷ್ಯದಿಂದ ಈ ದುರ್ಘಟನೆ ಸಂಭವಿಸಿದೆ ಎಂದು ಆರೋಪಿಸಿದ ಪೋಷಕರು ಹಾಗೂ ಸ್ಥಳೀಯರು ಶಾಲೆ ಮುಂದೆ ಧರಣಿ ನಡೆಸಿದರು. ಮಕ್ಕಳನ್ನು ಜೋಪಾನವಾಗಿ ಇಳಿಸಲು ಮತ್ತೊಬ್ಬ ಸಹಾಯಕರು ಇದ್ದರೆ ದುರ್ಘಟನೆ ನಡೆಯುತ್ತಿರಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಯಮನೂರಪ್ಪ ಗಾರೆ ಕೆಲಸ ಮಾಡುತ್ತಿದ್ದು, ಕಮ್ಮಸಂದ್ರ ಸೇಂಟ್ ಪೀಟರ್‌ ಶಾಲೆಯಲ್ಲಿ ದೀಕ್ಷಿತ್‌ ಓದುತ್ತಿದ್ದ. ಎಲೆಕ್ಟ್ರಾನಿಕ್‌ ಸಿಟಿಯಲ್ಲಿ ಬಾಲಕನ ಕುಟುಂಬ ವಾಸವಿತ್ತು. ದಂಪತಿಗೆ ಒಂದು ವರ್ಷದ ಹೆಣ್ಣು ಮಗುವೂ ಇದೆ.

12.30ರ ಸುಮಾರಿಗೆ ಮಕ್ಕಳನ್ನು ಹುಸ್ಕೂರ್‌ ಗೇಟ್‌ನಲ್ಲಿ ಇಳಿಸಿದ ಚಾಲಕ ಉಳಿದ ಮಕ್ಕಳನ್ನು ಅವರವರ ಮನೆಗಳ ಬಳಿ ಬಿಡುವ ಆತುರದಲ್ಲಿ ಬಸ್‌ ಚಲಾಯಿಸಿದ್ದ. ಬಾಲಕ ಬಸ್‌ಗೆ ಸಿಕ್ಕಿದ್ದನ್ನು ಕಂಡು ದಾರಿಹೋಕರು ಕೂಗಿಕೊಂಡರು. ಬಸ್‌ ನಿಲ್ಲಿಸುವಷ್ಟರಲ್ಲಿ ರಕ್ತದ ಮಡುವಿನಲ್ಲಿ ಬಾಲಕ ಬಿದ್ದಿದ್ದ. ಚಾಲಕ ಬಸ್‌ ಅನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾದ.

‘ಮೂರು ವರ್ಷದ ಹಿಂದೆ ಶಾಲೆ ಆರಂಭವಾಗಿದ್ದು, ಎರಡು ವರ್ಷದಿಂದ ಬಾಲಕ ಹೋಗುತ್ತಿದ್ದ. ‘ಸಕಾಲಕ್ಕೆ ಬಾಲಕನನ್ನು ಆಸ್ಪತ್ರೆಗೆ ಸಾಗಿಸಿದ್ದರೆ ಬದುಕುವ ಸಾಧ್ಯತೆಯಿತ್ತು. ಆದರೆ, ಪೊಲೀಸರು ಸ್ಥಳಕ್ಕೆ ಬರುವವರೆಗೂ ಯಾರೂ ಮಗುವಿನ ನೆರವಿಗೆ ಧಾವಿಸಲಿಲ್ಲ. ಪೊಲೀಸರು ಬಂದ ಬಳಿಕ ತಮಗೂ ವಿಷಯ ಗೊತ್ತಾಯಿತು’ ಎಂದು ಪ್ರತ್ಯಕ್ಷದರ್ಶಿ ಕೆ. ರಮೇಶ್‌ ತಿಳಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು